ADVERTISEMENT

ಹಾವೇರಿ: ಒಂದೇ ವರ್ಷ; ₹570 ಕೋಟಿ ಉತ್ಪನ್ನ ರಫ್ತು: ಟಿ.ಎಸ್. ಮಲ್ಲಿಕಾರ್ಜುನ

ಹಾವೇರಿಯಿಂದ ಖಾರದ ಪುಡಿ, ತರಕಾರಿ ರಫ್ತು, 4ನೇ ಸ್ಥಾನದಲ್ಲಿ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:49 IST
Last Updated 30 ಆಗಸ್ಟ್ 2025, 5:49 IST
ಹಾವೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಝಡ್.ಇ.ಡಿ./ಲೀನ್ ಯೋಜನೆ ಹಾಗೂ ರಫ್ತು ಕುರಿತ ಒಂದು ದಿನದ ಅರಿವು ಕಾರ್ಯಕ್ರಮ’ದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿದರು
ಹಾವೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಝಡ್.ಇ.ಡಿ./ಲೀನ್ ಯೋಜನೆ ಹಾಗೂ ರಫ್ತು ಕುರಿತ ಒಂದು ದಿನದ ಅರಿವು ಕಾರ್ಯಕ್ರಮ’ದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿದರು   

ಹಾವೇರಿ: ‘ಹಾವೇರಿ ಜಿಲ್ಲೆಯು ವಿವಿಧ ಉತ್ಪನ್ನ ರಫ್ತು ವ್ಯವಹಾರದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. 2024–25ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಯಿಂದ ₹570 ಕೋಟಿ ಮೊತ್ತದ ಉತ್ಪನ್ನಗಳು ರಫ್ತಾಗಿವೆ’ ಎಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರದ (ವಿಟಿಪಿಸಿ) ಧಾರವಾಡ ಉಪನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ ತಿಳಿಸಿದರು.

ನಗರದ ಹೋಟೆಲ್‌ವೊಂದರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಟಿಪಿಸಿ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಝಡ್.ಇ.ಡಿ./ಲೀನ್ ಯೋಜನೆ ಹಾಗೂ ರಫ್ತು ಕುರಿತ ಒಂದು ದಿನದ ಅರಿವು ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ಸರ್ಕಾರದ ಅಂಗ ಸಂಸ್ಥೆಯಾಗಿ ವಿಟಿಪಿಸಿ ಕೆಲಸ ಮಾಡುತ್ತಿದೆ. ಇದು ಕರ್ನಾಟಕದಲ್ಲಿ ರಫ್ತು ಉತ್ತೇಜನಕ್ಕೆ ಪ್ರಾಮುಖ್ಯತೆ ನೀಡಿದೆ. ಇಡೀ ಭಾರತದಲ್ಲಿಯೇ ಕರ್ನಾಟಕವು ಐ.ಟಿ ಮತ್ತು ಸೇವಾ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ರಫ್ತಿನಲ್ಲಿ ಕರ್ನಾಟಕವು ಶೇ 40ರಷ್ಟು ಐ.ಟಿ ಮತ್ತು ಸರ್ವಿಸ್‌ಗಳನ್ನು ರಫ್ತು ಮಾಡುತ್ತಿದೆ’ ಎಂದರು.

ADVERTISEMENT

‘ವಸ್ತುಗಳ ರಫ್ತಿನಲ್ಲಿ ಕರ್ನಾಟಕವು ದೇಶದಲ್ಲಿಯೇ 4ನೇ ಸ್ಥಾನದಲ್ಲಿದೆ. ರಾಜ್ಯದ 31 ಜಿಲ್ಲೆಗಳಿಂದಲೂ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. 2024–25ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಯಿಂದ ₹ 570 ಕೋಟಿ ಮೊತ್ತದ ಖಾರದ ಪುಡಿ ಹಾಗೂ ತರಕಾರಿಯನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗಿದೆ. ಜಿಲ್ಲೆಯಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ (ಎಂಎಸ್‌ಎಂಇ) ಉದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ‘ಭಾರತವು ಕೃಷಿ ಪ್ರಧಾನ ರಾಷ್ಟ. ಅತೀ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿಯ ಜೊತೆಗೆ ಕೈಗಾರಿಕೆಗೂ ಮಹತ್ವ ನೀಡುವುದು ಇಂದಿನ ಅಗತ್ಯವಾಗಿದೆ’ ಎಂದರು.

‘ಚೀನಾ ರಾಷ್ಟ್ರವು ಎಂಎಸ್ಎಂಇ ವಲಯದಲ್ಲಿ ಅತೀ ಹೆಚ್ಚು ಸಾಧನೆ ಮಾಡಿದೆ. 6.5 ಕೋಟಿ ಎಂಎಸ್ಎಂಇಗಳು ಅಲ್ಲಿವೆ. ಭಾರತದಲ್ಲೂ ಎಂಎಸ್ಎಂಇಗಳಿಗೆ ಮಹತ್ವ ನೀಡಬೇಕು. ಭಾರತದಲ್ಲಿ ಇಂದು 13 ಲಕ್ಷ ಎಂಎಸ್ಎಂಇಗಳು ನೋಂದಣಿಯಾಗಿವೆ. ಹಾವೇರಿ ಜಿಲ್ಲೆಯಲ್ಲೂ 8 ಸಾವಿರ ಎಂಎಸ್ಎಂಇಗಳು ನೋಂದಣಿಯಾಗಿವೆ’ ಎಂದರು.

‘ದೇಶದಲ್ಲಿ 600ಕ್ಕಿಂತಲೂ ಹೆಚ್ಚು ಉತ್ಪನ್ನಗಳನ್ನು ದೇಶೀಯವಾಗಿ ತಯಾರಿಸಲಾಗುತ್ತಿದೆ. ಇಂತಹ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡಬೇಕು? ಯಾವ ದೇಶಗಳಲ್ಲಿ ಮಾರಾಟಕ್ಕೆ ಅವಕಾಶಗಳಿವೆ ? ರಿಯಾಯಿತಿಗಳು ಏನು ? ಉತ್ಪನ್ನಗಳ ಗುಣಮಟ್ಟದ ಪ್ಯಾಕಿಂಗ್ ವಿಧಾನ ಹೇಗೆ ? ಪರವಾನಗಿ ಪಡೆಯುವುದು ಹೇಗೆ? ಎಂಬಿತ್ಯಾದಿ ವಿಷಯಗಳ ಕುರಿತು ಉದ್ಯಮಿಗಳಿಗೆ ಅರಿವು ಮೂಡಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ರವಿ ಮೆಣಸಿನಕಾಯಿ ಮಾತನಾಡಿ, ‘ಲೀನ್ ಯೋಜನೆಗಳು ಕೈಗಾರಿಕೋದ್ಯಮ ಹಾಗೂ ಇತರೆ ವ್ಯಾಪಾರಿಗಳಿಗೆ ಸಹಕಾರಿಯಾಗಿದೆ. ಜಿಲ್ಲೆಯ ಉದ್ಯಮಿಗಳು ಇದರ ಲಾಭ ಪಡೆದುಕೊಳ್ಳಬೇಕು’ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಶೋಕ ಪ್ಯಾಟಿ ಮಾತನಾಡಿ, ಜಿಲ್ಲಾ ಅಗ್ರಣೀಯ ವ್ಯವಸ್ಥಾಪಕ ಪ್ರಭುದೇವ ಎಸ್.ಜಿ., ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಕ ಎನ್. ಭಾಸ್ಕರ್, ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್. ಬಿರಾದಾರ, ಕಾಸಿಯಾ ಪ್ಯಾನೆಲ್ ಅಧ್ಯಕ್ಷ ಗಿರೀಶ್ ನಲವಡಿ, ಸಿ.ಎಚ್. ಅಂಗಡಿ ಇದ್ದರು.

ಐ.ಟಿ. ರಫ್ತಿನಲ್ಲಿ ಭಾರತ ನಂಬರ್ ಒನ್ ಭಾರತದಲ್ಲಿ 13 ಲಕ್ಷ ಎಂಎಸ್ಎಂಇ 

ಹಾವೇರಿ ಜಿಲ್ಲೆಯಲ್ಲಿ 8 ಸಾವಿರ ಎಂಎಸ್ಎಂಇಗಳು ನೋಂದಣಿಯಾಗಿವೆ. ಇವರೆಲ್ಲರೂ ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಬೇಕು 
ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ
ಏಷ್ಯಾದ ಅತೀ ದೊಡ್ಡ ಮಾರುಕಟ್ಟೆ
ಜಗತ್ತಿನ ಏಷ್ಯಾ ಖಂಡದಲ್ಲೇ ಅತೀ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆ ಬ್ಯಾಡಗಿಯಲ್ಲಿದೆ. ದಿನಕ್ಕೆ ಸುಮಾರು ₹ 2 ಕೋಟಿಯಷ್ಟು ವ್ಯಾಪಾರ ನಡೆಯುತ್ತದೆ. ಇಲ್ಲಿಯ ಮೆಣಸಿನಕಾಯಿ ಖರೀದಿಸುವ ಕೆಲ ಉದ್ಯಮಿಗಳು ಹಾಗೂ ಕಂಪನಿಗಳು ಖಾರದ ಪುಡಿ ಮಾಡಿ ಹೊರದೇಶಗಳಿಗೆ ರಫ್ತು ಮಾಡುತ್ತಿವೆ. ಹೊರ ದೇಶಕ್ಕೆ ರಫ್ತಾಗುವ ಉತ್ಪನ್ನಗಳಲ್ಲಿ ಖಾರದ ಪುಡಿ ಮೊದಲ ಸ್ಥಾನದಲ್ಲಿದೆ. ಇದರ ಜೊತೆಯಲ್ಲಿ ತರಕಾರಿಯೂ ರಫ್ತಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.