ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬಸಾಪುರ ಗ್ರಾಮದ ಬಳಿ ಅಡಿಕೆ ಜಮೀನಿನಲ್ಲಿ ದಪ್ಪ ಕಣ್ಣಿನ ಮಹಿಳೆಯ ಫೋಟೊ ಹಾಕಿರುವುದು
ಜಿಲ್ಲೆಯ ಹಲವು ಜಮೀನಿನಲ್ಲಿ ಮಹಿಳೆಯ ಫೋಟೊ ಪ್ರದರ್ಶನ
ಹಾವೇರಿ: ರೈತಾಪಿ ಜಿಲ್ಲೆಯಾಗಿರುವ ಹಾವೇರಿಯ ಬಹುತೇಕ ಜನರಿಗೆ ಕೃಷಿಯೇ ಜೀವನಾಧಾರ. ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನ ನಡೆಸುತ್ತಿದ್ದಾರೆ. ಇದೀಗ, ಅಡಿಕೆ ಬೆಳೆಗೆ ಕೆಟ್ಟ ದೃಷ್ಟಿ ತಾಗುತ್ತಿರುವುದರಿಂದ ಪರಿಹಾರ ಪಡೆಯಲು ‘ದೊಡ್ಡ ಕಣ್ಣಿನ ಮಹಿಳೆ’ಯ ಫೋಟೊ ಮೊರೆ ಹೋಗಿದ್ದಾರೆ.
ಹಾವೇರಿ, ರಾಣೆಬೆನ್ನೂರು, ಹಾನಗಲ್, ಸವಣೂರು, ಬ್ಯಾಡಗಿ, ಶಿಗ್ಗಾವಿ, ರಟ್ಟೀಹಳ್ಳಿ ಹಾಗೂ ಹಿರೇಕೆರೂರು ತಾಲ್ಲೂಕಿನಲ್ಲಿ ಹಲವು ಕಡೆಗಳ ಜಮೀನುಗಳಲ್ಲಿ ‘ದೊಡ್ಡ ಕಣ್ಣಿನ ಮಹಿಳೆ’ ಫೋಟೊಗಳು ರಾರಾಜಿಸುತ್ತಿವೆ. ದಾರಿಹೋಕರು ಬೆಳೆಯನ್ನು ನೋಡಿ ಹೊಗಳುವುದಕ್ಕಿಂತ, ಮಹಿಳೆಯ ಫೋಟೊ ನೋಡಿ ಹೊಗಳಿ ಮುಂದಕ್ಕೆ ಸಾಗುತ್ತಿದ್ದಾರೆ.
ಹವಾಮಾನ ವೈಪರೀತ್ಯ ಹಾಗೂ ಇತರೆ ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ಬರುವ ಇಳುವರಿ ಕಡಿಮೆಯಾಗಿದೆ. ಪ್ರಮುಖ ರಸ್ತೆ ಹಾಗೂ ಒಳರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ತಕ್ಕಮಟ್ಟಿಗೆ ಬೆಳೆ ಬರದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ರಸ್ತೆ ಬದಿಗಳಲ್ಲಿರುವ ಜಮೀನಿನಲ್ಲಿ ಅಡಿಕೆ, ತರಕಾರಿ, ಸೊಪ್ಪು, ಹಣ್ಣಿನ ಗಿಡ ಹಾಗೂ ಇತರೆ ಬೆಳೆಗಳನ್ನು ಬೆಳೆಯಲಾಗಿದೆ. ಇಂಥ ಬೆಳೆಗಳ ಮೇಲೆ ದಾರಿಹೋಕರ ಕಣ್ಣು ಬೀಳುತ್ತಿದ್ದು, ಬೆಳೆಗಳು ಕ್ರಮೇಣ ಒಣಗುತ್ತಿರುವುದಾಗಿ ರೈತರು ಹೇಳುತ್ತಿ್ದ್ದಾರೆ.
ತೋಟಗಾರಿಕಾ ಬೆಳೆಗಳಾದ ಅಡಿಕೆ, ಮಾವು, ತರಕಾರಿಗೆ ಹೆಚ್ಚು ದೃಷ್ಟಿ ಆಗುತ್ತಿರುವುದಾಗಿ ರೈತರು ಅಭಿಪ್ರಾಯಪಡುತ್ತಿದ್ದಾರೆ.
‘ಕಠಿಣ ಶ್ರಮಪಟ್ಟು ಬೆಳೆ ಬೆಳೆದರೆ, ‘ಬೆಳೆ ಮಸ್ತ್ ಇದೆ’ ಎಂಬುದಾಗಿ ದಾರಿಹೋಕರು ಹೇಳಿಕೊಂಡು ಓಡಾಡುತ್ತಾರೆ. ಫೋಟೊಗಳನ್ನು ಕ್ಲಿಕ್ಕಿಸಿ ಎಲ್ಲರಿಗೂ ತೋರಿಸುತ್ತಾರೆ. ಇದರಿಂದ ನಮ್ಮ ಬೆಳೆಗಳು ಕ್ರಮೇಣ ಒಣಗುತ್ತಿರುವುದನ್ನು ಕಂಡಿದ್ದೇವೆ. ಹಲವು ಪೂಜೆ ಮಾಡಿಸಿದರೂ ಬೆಳೆಗಳು ಸುಧಾರಿಸುತ್ತಿಲ್ಲ. ಈಗ, ದಪ್ಪ ಕಣ್ಣಿನ ಮಹಿಳೆಯ ಫೋಟೊಗಳನ್ನು ಪ್ರೇಮ್ ಹಾಕಿಸಿ ಕಟ್ಟಿದ್ದೇವೆ’ ಎಂದು ಹಿರೇಕೆರೂರಿನ ರೈತ ಚಂದ್ರಪ್ಪ ಹಿರೇಹಳ್ಳಿ ಹೇಳಿದರು.
‘ಮನೆ ನಿರ್ಮಾಣ, ಅಂಗಡಿ, ವ್ಯಾಪಾರ ಸೇರಿದಂತೆ ಎಲ್ಲ ಕಡೆಯೂ ದಪ್ಪ ಕಣ್ಣಿನ ಮಹಿಳೆಯ ಫೋಟೊ ಹಾಕಿದ್ದನ್ನು ನೋಡಿದ್ದೆ. ಫೋಟೊದಿಂದಾಗಿ ವ್ಯವಹಾರ ಸುಧಾರಣೆ ಆಗಿರುವುದಾಗಿ ವ್ಯಾಪಾರಿಗಳು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ. ಇದೇ ಕಾರಣಕ್ಕೆ ನಾನು ಸಹ ಅದೇ ಫೋಟೊವನ್ನು ನಮ್ಮ ಹೊಲದಲ್ಲಿ ಹಾಕಿದ್ದೇನೆ. ದಾರಿಹೋಕರೆಲ್ಲರೂ ನನ್ನ ಬೆಳೆಯ ಬದಲು, ಫೋಟೊ ಬಗ್ಗೆಯೇ ಹೆಚ್ಚು ಮಾತನಾಡಿಕೊಂಡು ಓಡಾಡುತ್ತಿದ್ದಾರೆ. ಬೆಳೆಯು ಕ್ರಮೇಣ ಸುಧಾರಿಸುತ್ತಿದೆ’ ಎಂದು ತಿಳಿಸಿದರು.
ಹಾನಗಲ್ ತಾಲ್ಲೂಕಿನ ಬಸಾಪುರ ಗ್ರಾಮದ ರೈತರೊಬ್ಬರು, ‘ಕಷ್ಟಪಟ್ಟು ನಾಲ್ಕು ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ಹಚ್ಚಿದ್ದೇನೆ. ರಸ್ತೆ ಪಕ್ಕವೇ ಜಮೀನಿದ್ದು, ಬೆಳೆಯು ಚೆನ್ನಾಗಿ ಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಬೆಳೆಯು ಕ್ರಮೇಣ ಒಣಗುತ್ತಿತ್ತು. ಔಷಧ ಸಿಂಪರಣೆ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಏಕೆ ? ಎಂದು ಅವರಿವರ ಬಳಿ ಕೇಳಿದಾಗ, ಜನರ ದೃಷ್ಟಿಯಾಗಿರಬಹುದೆಂದು ಹೇಳಿದರು. ದೃಷ್ಟಿಯಾಗದಂತೆ ತಡೆಯಲು, ದಪ್ಪ ಕಣ್ಣಿನ ಮಹಿಳೆಯ ಫೋಟೊವನ್ನು ಹಾಕಿದ್ದೇನೆ’ ಎಂದು ತಿಳಿಸಿದರು.
ಚೆನ್ನಾಗಿ ಬೆಳೆಯುತ್ತಿರುವ ಅಡಿಕೆ ಬೆಳೆಯ ಮೇಲೆ ಜನರ ಕೆಟ್ಟ ದೃಷ್ಟಿ ಬೀಳದಂತೆ ತಡೆಯಲು ದಪ್ಪ ಕಣ್ಣಿನ ಮಹಿಳೆ ಫೋಟೊ ಹಾಕಿದ್ದೇವೆ.ಭರಮಪ್ಪ ನರೇಂದ್ರ ರಾಣೆಬೆನ್ನೂರು, ರೈತ
‘ಫೋಟೊ ಹಾಕಿ ಎರಡ್ಮೂರು ತಿಂಗಳಾಗಿದೆ. ಸಮಸ್ಯೆಗೆ ಪರಿಹಾರವೂ ಸಿಗುತ್ತಿದೆ. ನನ್ನ ಜಮೀನಿನಲ್ಲಿರುವ ಫೋಟೊವನ್ನು ನೋಡುವ ರೈತರು, ಅವರ ಜಮೀನಿನಲ್ಲೂ ಇದೇ ಫೋಟೊ ಹಾಕುತ್ತಿದ್ದಾರೆ’ ಎಂದರು.
ರೈತರ ನಂಬಿಕೆ ಎನ್ನುವ ಅಧಿಕಾರಿಗಳು
‘ಜಿಲ್ಲೆಯಲ್ಲಿ ರೈತರ ಸಂಖ್ಯೆ ಹೆಚ್ಚಿದೆ. ಬಹುತೇಕರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಾರೆ. ಈಗ ಕೆಲವರು ದಪ್ಪ ಕಣ್ಣಿನ ಮಹಿಳೆಯ ಫೋಟೊ ಹಾಕುತ್ತಿದ್ದಾರೆ. ಅದು ರೈತರ ನಂಬಿಕೆ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
‘ಹವಾಮಾನ ವೈಪರೀತ್ಯ ನೀರಿನ ಅಭಾವ ಹಾಗೂ ಹೆಚ್ಚು ನೀರು... ಹೀಗೆ ಹಲವು ಕಾರಣದಿಂದ ಬೆಳೆಗೆ ಸಮಸ್ಯೆ ಆಗುತ್ತದೆ. ಇದಕ್ಕೆ ಹಲವು ಔಷಧೋಪಚಾರವಿದೆ. ಅದನ್ನು ರೈತರು ಮಾಡಬೇಕು. ಯಾವುದೇ ಔಷಧೋಪಚಾರ ಮಾಡದೇ ಫೋಟೊ ಹಾಕಿ ಸುಮ್ಮನಾದರೆ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ’ ಎಂದು ತಿಳಿಸಿದರು.
ಫೋಟೊಗಳಿಗೆ ಬೇಡಿಕೆ:
ರೈತರು ತಮ್ಮ ಜಮೀನುಗಳಲ್ಲಿ ದಪ್ಪ ಕಣ್ಣಿನ ಮಹಿಳೆಯ ಫೋಟೊ ಹಾಕುತ್ತಿರುವುದರಿಂದ ಈ ಫೋಟೊಗಳಿಗೆ ಬೇಡಿಕೆ ಬಂದಿದೆ. ಗ್ರಾಮ ಪಟ್ಟಣಗಳಲ್ಲಿರುವ ಛಾಯಾಗ್ರಹಕರ ಬಳಿ ಹೋಗುತ್ತಿರುವ ರೈತರು ಫೋಟೊಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಕೆಲವರು ಸಣ್ಣ ಅಳತೆ ಹಾಗೂ ಇನ್ನು ಹಲವರು ದೊಡ್ಡ ಅಳತೆಯ ಫೋಟೊಗಳನ್ನು ಖರೀದಿಸುತ್ತಿದ್ದಾರೆ.
‘ದಪ್ಪ ಕಣ್ಣಿನ ಮಹಿಳೆಯ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿಯೂ ಹರಿದಾಡಿತ್ತು. ಅದೇ ಫೋಟೊವನ್ನು ತೋರಿಸುವ ರೈತರು ಮುದ್ರಣ ಮಾಡಿಕೊಡುವಂತೆ ಹೇಳುತ್ತಿದ್ದಾರೆ. ರೈತರ ಬೇಡಿಕೆಗೆ ತಕ್ಕಂತೆ ಅವರ ಹೇಳಿದ ಅಳತೆಗೆ ಫೋಟೊ ಮಾಡಿಕೊಡುತ್ತಿದ್ದೇವೆ’ ಎಂದು ಛಾಯಾಗ್ರಾಹಕರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.