
ಹಾವೇರಿ: ಇಲ್ಲಿಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಳ್ಳಿಗಳಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆಯಲ್ಲಿ ಜೋಳಿಗೆ ಮೂಲಕ ಸಂಗ್ರಹಿಸಿದ್ದ ಮದ್ಯ ಹಾಗೂ ತಂಬಾಕು ಉತ್ಪನ್ನಗಳನ್ನು ಸುಟ್ಟು ಹಾಕುವ ಮೂಲಕ ಬುಧವಾರ ಚಟ ಹೋಮ ನೆರವೇರಿಸಲಾಯಿತು.
ಹುಕ್ಕೇರಿಮಠದ ಆವರಣದಲ್ಲಿ ಆಯೋಜಿಸಿದ್ದ ‘ಚಟ ಹೋಮ’ವನ್ನು ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ನೆರವೇರಿಸಿದರು. ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು ಉತ್ಪನ್ನ ಹಾಗೂ ಮದ್ಯದ ಪೊಟ್ಟಣಗಳನ್ನು ಹೋಮದಲ್ಲಿ ದಹಿಸಿದರು.
‘ದುಶ್ಚಟಗಳ ಭಿಕ್ಷೆ, ಸದ್ಗುಣಗಳ ಧೀಕ್ಷೆ’ ಹೆಸರಿನಲ್ಲಿ 70 ಹಳ್ಳಿಗಳಲ್ಲಿ ಸದಾಶಿವ ಸ್ವಾಮೀಜಿ ಜನಜಾಗೃತಿ ಪಾದಯಾತ್ರೆ ನಡೆಸಿದ್ದರು. ಈ ಸಂದರ್ಭದಲ್ಲಿ ಜೋಳಿಗೆ ಹಿಡಿದು ದುಶ್ಚಟಗಳ ಭಿಕ್ಷೆ ಬೇಡಿದ್ದರು. ಹಲವು ಯುವಕರು, ಮದ್ಯ ಹಾಗೂ ತಂಬಾಕು ಉತ್ಪನ್ನಗಳನ್ನು ಜೋಳಿಗೆಗೆ ಹಾಕಿದ್ದರು. ‘ಇನ್ನೊಮ್ಮೆ ಮದ್ಯ ಹಾಗೂ ತಂಬಾಕು ಉತ್ಪನ್ನ ತಿನ್ನುವುದಿಲ್ಲ’ ಎಂದು ಸ್ವಾಮೀಜಿಗೆ ನಮಸ್ಕರಿಸಿ, ಪ್ರತಿಜ್ಞೆ ಮಾಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಾಶಿವ ಸ್ವಾಮೀಜಿ, ‘ಕಲ್ಯಾಣ ರಾಜ್ಯ ನಿರ್ಮಾಣದ ಸಣ್ಣ ಪ್ರಯತ್ನವೇ ಈ ದುಶ್ಚಟಗಳ ಭಿಕ್ಷೆ; ಸದ್ಗುಣಗಳ ದೀಕ್ಷೆ ಅಭಿಯಾನ. ವ್ಯಸನಮುಕ್ತ ಸಮಾಜ ನಿರ್ಮಾಣದ ಆಶಯದೊಂದಿಗೆ ತಾಲ್ಲೂಕಿನ 70 ಹಳ್ಳಿಗಳು ಹಾಗೂ ಹಾವೇರಿ ನಗರದ ಹಲವೆಡೆ ಪಾದಯಾತ್ರೆ ನಡೆಸಲಾಯಿತು. ಜೋಳಿಗೆಯಲ್ಲಿ ದುಶ್ಚಟಗಳ ಭಿಕ್ಷೆ ಹಾಕಿಸಿಕೊಳ್ಳಲಾಯಿತು’ ಎಂದರು.
‘ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು. ಜೋಳಿಗೆಯಲ್ಲಿದ್ದ ಪೊಟ್ಟಣಗಳನ್ನು ಹೋಮದಲ್ಲಿ ಸುಡಲಾಗಿದೆ. ಚಟ ಬಿಟ್ಟವರು ದುಶ್ಚಟಗಳಿಂದ ಮುಕ್ತರಾಗಿ ಮನೆಗಳಿಗೆ ಬೆಳಕಾಗಬೇಕು’ ಎಂದರು.
ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ‘ದುಶ್ಚಟಗಳಿಗೆ ಅಂಟಿಕೊಂಡ ಯುವಜನರು, ಅಪರಾಧ ಕೃತ್ಯದಲ್ಲಿ ತೊಡಗಿದ್ದಾರೆ. ವ್ಯಸನಗಳಿಂದ ವಿಚಲಿತರಾಗಿ ಮನಸ್ಸುಗಳು ಕದಡುತ್ತಿವೆ. ಯುವಕರು, ಚಟ ಬಿಟ್ಟು ಆರೋಗ್ಯವಂತರಾಗಬೇಕು. ಈ ನಿಟ್ಟಿನಲ್ಲಿ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಸದಾಶಿವ ಸ್ವಾಮೀಜಿ ಪಾದಯಾತ್ರೆ ನಡೆಸಿದ್ದಾರೆ’ ಎಂದು ಹೇಳಿದರು.
ಮಾದನ ಹಿಪ್ಪರಗಿಯ ಶಿವಲಿಂಗ ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ವಿಜಯಪುರದ ಷಣ್ಮುಖರೂಢ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ ಇದ್ದರು.
ಬಿಗ್‌ಬಾಸ್ ಹನುಮಂತ ಕಾರ್ಯಕ್ರಮ
ಇಂದು ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ 25ರಂದು ಸಂಜೆ 6.30 ಗಂಟೆಗೆ ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಮಹಿಳಾ ಗೋಷ್ಠಿ ನಡೆಯಲಿದೆ. ‘ಬಿಗ್ ಬಾಸ್’ ರಿಯಾಲಿಟಿ ಶೋ ವಿಜೇತ ಚಿಲ್ಲೂರು ಬಡ್ನಿಯ ಹನುಮಂತ ಲಮಾಣಿ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗೌರಿಗದ್ದೆಯ ವಿನಯ್ ಗುರೂಜಿ ಸಮಾರಂಭ ಉದ್ಘಾಟಿಸುವರು. ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಪಾಲ್ಗೊಳ್ಳುವರು.