ADVERTISEMENT

ಹಾವೇರಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವ

ಗೊಟಗೋಡಿಯಲ್ಲಿ ಗಮನ ಸೆಳೆದ ಕಲಾ ತಂಡಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 7:37 IST
Last Updated 1 ಡಿಸೆಂಬರ್ 2022, 7:37 IST
ಗೊಟಗೋಡಿಯಲ್ಲಿ ಗಮನ ಸೆಳೆದ ಕಲಾ ತಂಡಗಳ ಮೆರವಣಿಗೆ
ಗೊಟಗೋಡಿಯಲ್ಲಿ ಗಮನ ಸೆಳೆದ ಕಲಾ ತಂಡಗಳ ಮೆರವಣಿಗೆ   

ಹಾವೇರಿ:ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿರುವ ‘ಹಿರೇತಿಟ್ಟು’ ಬಯಲು ರಂಗಮಂದಿರದಲ್ಲಿ ಗುರುವಾರ 6 ಮತ್ತು 7ನೇ ಘಟಿಕೋತ್ಸವ ಆರಂಭಗೊಂಡಿತು.

ಆಡಳಿತ ಭವನದಿಂದ ವೇದಿಕೆಯವರೆಗೆ ಅತಿಥಿಗಳು ಮತ್ತು ಗೌರವ ಡಾಕ್ಟರೇಟ್ ಪುರಸ್ಕೃತರನ್ನು ವಾದ್ಯಗೋಷ್ಠಿ, ಕಲಾ ತಂಡಗಳ ಮೇಳದೊಂದಿಗೆ ಬರಮಾಡಿಕೊಳ್ಳಲಾಯಿತು.

ಗಾರುಡಿ ಗೊಂಬೆಗಳು, ಮಹಿಳೆಯರ ಡೊಳ್ಳು ಕುಣಿತ, ಹುಲಿ ವೇಷಧಾರಿಗಳು, ಪುರವಂತಿಕೆ, ಗೆಜ್ಜಲಿಗೆ ಕುಣಿತ, ಕರಡಿ ವಾದ್ಯ, ಝಾಂಜ್ ಮೇಳಗಳು ಮೆರವಣಿಗೆಗೆ ರಂಗು ತಂದವು.

ADVERTISEMENT

ಅತಿಥಿಗಳಿಗೆ ಚಾಮರಗಳನ್ನು ಹಿಡಿದು, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಘಟಿಕೋತ್ಸವ ಭಾಷಣ ಮಾಡಲು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಆಗಮಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಘಟಿಕೋತ್ಸವಕ್ಕೆ ಗೈರು ಹಾಜರಾಗಿದ್ದರು.

ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವರ್ಚುವಲ್ ವೇದಿಕೆ ಮೂಲಕ ಪಾಲ್ಗೊಂಡರು. ಅವರಿಗೆ ರಾಷ್ಟ್ರಗೀತೆ ಮೂಲಕ ಪೊಲೀಸ್ ಬ್ಯಾಂಡ್ ತಂಡ ಗೌರವ ಸಲ್ಲಿಸಿತು. ನಂತರ ಪದವಿ ಪ್ರದಾನಕ್ಕೆ ರಾಜ್ಯಪಾಲರು ಅನುಮತಿ ನೀಡಿದರು.

ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್‌, ಕುಲಸಚಿವ (ಆಡಳಿತ) ಗುರುಪ್ರಸಾದ್, ಕುಲಸಚಿವ (ಮೌಲ್ಯಮಾಪನ) ಡಾ.ಎನ್.ಎಂ.ಸಾಲಿ, ಸಿಂಡಿಕೇಟ್ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು, ಜಾನಪದ ಕಲಾವಿದರು, ಸಾಹಿತಿಗಳು ಪಾಲ್ಗೊಂಡಿದ್ದರು.

ಆರು ಸಾಧಕರಿಗೆ ಗೌರವ ಡಾಕ್ಟರೇಟ್‌:

ರಾಣೆಬೆನ್ನೂರಿನ ಅರೆಮಲ್ಲಾಪುರದ ಜಾನಪದ ಕಲಾವಿದ ಕೆಂಚಪ್ಪ ನಾಗರಜ್ಜಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜೀವನ್‌ ರಾಂ ಸುಳ್ಯ, ಉಡುಪಿ ಜಿಲ್ಲೆಯ ಯಕ್ಷಗಾನ ಕಲಾವಿದ ತಲ್ಲೂರು ಶಿವರಾಮ ಶೆಟ್ಟಿ, ಹುಬ್ಬಳ್ಳಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ, ಗದಗ ಜಿಲ್ಲೆಯ ಗಂಗಿಮಡಿನಗರದ ಬಸವರಾಜು ಕಂಚಿಗೇರಿ, ಬಾಗಲಕೋಟೆ ಜಿಲ್ಲೆಯ ವೆಂಕಪ್ಪ ಅಂಬಾಜಿ ಸುಗೇತಕರ್‌ ಈ ಆರು ಸಾಧಕರಿಗೆ ಜಾನಪದ ವಿವಿಯಿಂ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುವುದು.

ಚಿನ್ನದ ಪದಕ ಪಡೆದ 3 ವಿದ್ಯಾರ್ಥಿಗಳು, 26 ರ‍್ಯಾಂಕ್‌ ವಿದ್ಯಾರ್ಥಿಗಳು, ಪಿಎಚ್‌ಡಿ ಪದವಿ ಪಡೆದ 7 ಮಂದಿ ಸೇರಿದಂತೆ ಒಟ್ಟು 515 ವಿದ್ಯಾರ್ಥಿಗಳಿಗೆ ಪದವಿ ಪ್ರದಾನಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.