ADVERTISEMENT

‘ಗಂಗಾಧರ ನಂದಿ’| ಕಸಾಪ ಜಿಲ್ಲಾ ಘಟಕಕ್ಕೆ ಸ್ವಂತ ನೆಲೆ: ಆಡಳಿತ ಭವನ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:16 IST
Last Updated 12 ಅಕ್ಟೋಬರ್ 2025, 6:16 IST
ಹಾವೇರಿ ವಿನಾಯಕ ನಗರದ ‘ಬಿ’ ಬ್ಲಾಕ್‌ನಲ್ಲಿ ನಿರ್ಮಿಸಿರುವ ‘ಗಂಗಾಧರ ನಂದಿ’ ಸಾಹಿತ್ಯ ಭವನ 
ಹಾವೇರಿ ವಿನಾಯಕ ನಗರದ ‘ಬಿ’ ಬ್ಲಾಕ್‌ನಲ್ಲಿ ನಿರ್ಮಿಸಿರುವ ‘ಗಂಗಾಧರ ನಂದಿ’ ಸಾಹಿತ್ಯ ಭವನ    

ಹಾವೇರಿ: ಕನ್ನಡ ಸಾಹಿತ್ಯ ಪರಿಷತ್‌ನ (ಕಸಾಪ) ಜಿಲ್ಲಾ ಘಟಕದ ನೂತನ ಸಾಹಿತ್ಯ ಭವನ ನಿರ್ಮಾಣವಾಗಿದ್ದು, ಅಕ್ಟೋಬರ್ 12ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ.

ಏಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ ಕಸಾಪ ಘಟಕಕ್ಕೆ ಇದುವರೆಗೂ ಸ್ವಂತ ನೆಲೆಯಿರಲಿಲ್ಲ. ಅವರಿವರ ಮನೆ ಹಾಗೂ ಖಾಸಗಿ ಸ್ಥಳಗಳಲ್ಲಿಯೇ ಕಸಾಪ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈಗ ಕಸಾಪ ಘಟಕಕ್ಕೆ ಸ್ವಂತ ನೆಲೆ ಸಿಕ್ಕಿದೆ.

ಹಾವೇರಿಯ ವಿನಾಯಕ ನಗರದ ‘ಬಿ’ ಬ್ಲಾಕ್‌ನಲ್ಲಿ ‘ಗಂಗಾಧರ ನಂದಿ’ ಹೆಸರಿನಲ್ಲಿ ಸಾಹಿತ್ಯ ಭವನ ನಿರ್ಮಿಸಲಾಗಿದೆ. ಈ ನೂತನ ಕಟ್ಟಡವನ್ನು, ಹಳದಿ–ಕೆಂಪು ಕನ್ನಡದ ಬಣ್ಣದಿಂದ ಅಲಂಕರಿಸಲಾಗಿದೆ. ‘ಸಿರಿಗನ್ನಡಂ ಗೆಲ್ಗೆ – ಸಿರಿಗನ್ನಡಂ ಬಾಳ್ಗೆ’ ಹಾಗೂ ‘ಸಾಮರಸ್ಯದ ಭಾವ– ಕನ್ನಡದ ಜೀವ’ ಬರಹಗಳು ಕಟ್ಟಡಕ್ಕೆ ಅರ್ಥ ತಂದುಕೊಡುತ್ತಿವೆ.

ADVERTISEMENT

ಕಸಾಪ ಜಿಲ್ಲಾ ಘಟಕದ ಸಾಹಿತ್ಯ ಭವನದ (ಆಡಳಿತ ಭವನ) ಉದ್ಘಾಟನೆ ಹಾಗೂ ಕಾದಂಬರಿ ಪಿತಾಮಹ ಗಳಗನಾಥ ಅವರ ಜಿಲ್ಲಾ ಕನ್ನಡ ಸಾಹಿತ್ಯ ಭವನ ಕಟ್ಟಡದ ಅಡಿಗಲ್ಲು ಸಮಾರಂಭ ಅ. 12ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಸಂಸದ ಬಸವರಾಜ ಬೊಮ್ಮಾಯಿ ಅವರು ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ನೂತನ ಸಾಹಿತ್ಯ ಭವನ ಉದ್ಘಾಟಿಸಲಿದ್ದಾರೆ. ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ.

ಅಖಂಡ ಧಾರವಾಡ ಜಿಲ್ಲೆಯಿಂದ ಪ್ರತ್ಯೇಕಗೊಂಡ ಹಾವೇರಿ ಜಿಲ್ಲೆ, ಹಲವು ಸಾಹಿತಿಗಳಿಗೆ ಜನ್ಮ ನೀಡಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ, ವಾಣಿಜ್ಯ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ತನ್ನದೆ ಕೊಡುಗೆ ನೀಡಿದೆ. ಜಿಲ್ಲೆಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಆದರೆ, ಕಸಾಪ ಘಟಕಕ್ಕೆ ಸ್ವಂತ ನೆಲೆಯಿಲ್ಲವೆಂಬ ಕೂಗು ಎಲ್ಲರನ್ನೂ ಕಾಡುತ್ತಿತ್ತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹಾಗೂ ಪದಾಧಿಕಾರಿಗಳು, ವಿನಾಯಕನಗರದಲ್ಲಿರುವ ನಗರಸಭೆಯ ಮಾಲೀಕತ್ವದ 8 ಗುಂಟೆ ಜಾಗವನ್ನು ಘಟಕಕ್ಕೆ ಪಡೆಯಲು ಪ್ರಯತ್ನ ಆರಂಭಿಸಿದ್ದರು. ಹಾವೇರಿಯ ಸಾಹಿತಿ ದಿ. ಗಂಗಾಧರ ನಂದಿ ಸ್ಮರಣಾರ್ಥ ಅವರ ಕುಟುಂಬದವರಿಂದ ಹೆಚ್ಚಿನ ದೇಣಿಗೆ ಹಾಗೂ ಇತರರಿಂದ ಆರ್ಥಿಕ ಸಹಾಯ ಪಡೆದು ಪಡೆದು ಜಾಗ ಖರೀದಿಸಿದರು. ಲೋಕಸಭಾ, ರಾಜ್ಯಸಭಾ, ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ಇತರರ ಸಹಾಯದಿಂದ ಇಂದು ಭವನ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಿಂಗಯ್ಯ ಹಿರೇಮಠ
ಜಿಲ್ಲೆಯ ಸಾಹಿತ್ಯ ಪ್ರೇಮಿಗಳ ಸಹಕಾರ ಹಾಗೂ ಆರ್ಥಿಕ ಸಹಾಯದಿಂದ ನೂತನ ಸಾಹಿತ್ಯ ಭವನ ನಿರ್ಮಿಸಲು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಲಿವೆ
ಲಿಂಗಯ್ಯ ಹಿರೇಮಠ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.