ADVERTISEMENT

‘ಹಿಮ್ಸ್‌’ಗೆ ಐಸಿಎಂಆರ್ ಸಂಶೋಧನೆ ಗರಿ

ಸಂತೋಷ ಜಿಗಳಿಕೊಪ್ಪ
Published 17 ಫೆಬ್ರುವರಿ 2026, 6:49 IST
Last Updated 17 ಫೆಬ್ರುವರಿ 2026, 6:49 IST
ಹಾವೇರಿಯ ದೇವಗಿರಿ ರಸ್ತೆಯಲ್ಲಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಆಡಳಿತ ಕಚೇರಿ
ಹಾವೇರಿಯ ದೇವಗಿರಿ ರಸ್ತೆಯಲ್ಲಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಆಡಳಿತ ಕಚೇರಿ   

ಹಾವೇರಿ: ರಾಜ್ಯದಲ್ಲಿ ನೂತನವಾಗಿ ಆರಂಭವಾದ ನಾಲ್ಕು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ಪೈಕಿ, ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಹಿಮ್ಸ್) ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ಸಂಶೋಧನಾ ಗರಿ ಲಭಿಸಿದೆ. ಹಿಮ್ಸ್‌ನ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು, ಐಸಿಎಂಆರ್ ಸಂಶೋಧನೆಗಾಗಿ ಆಯ್ಕೆಯಾಗಿದ್ದಾರೆ.

ಜನರ ಆರೋಗ್ಯದ ರಕ್ಷಣೆ ಹಾಗೂ ವೈದ್ಯಕೀಯ ಸೇವೆಗೆ ವೈದ್ಯರನ್ನು ತಯಾರಿ ಮಾಡುವ ಉದ್ದೇಶದಿಂದ ರಾಜ್ಯದ ಹಾವೇರಿ, ಚಿಕ್ಕಬಳ್ಳಾಪುರ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನೂತನವಾಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳನ್ನು (ಹಿಮ್ಸ್) ಸ್ಥಾಪಿಸಿ ಕಾರ್ಯಾರಂಭ ಮಾಡಲಾಗಿದೆ.

ನಾಲ್ಕು ಸಂಸ್ಥೆಗಳ ಪೈಕಿ ಹಾವೇರಿಯ ಹಿಮ್ಸ್, ಬೋಧನೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮುಂಚೂಣಿ ಪಡೆದುಕೊಂಡಿದೆ. ಮೂರು ಸಂಸ್ಥೆಗಳಿಗೆ ಹೋಲಿಸಿದರೆ, ಅತೀ ಹೆಚ್ಚು ಸಂಶೋಧನಾ ಅವಕಾಶಗಳು ಹಿಮ್ಸ್‌ಗೆ ಲಭ್ಯವಾಗಿವೆ.

ADVERTISEMENT

ಜಿಲ್ಲೆಯಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರು, ಗರ್ಭಿಣಿಯರು, ಮಧುಮೇಹಿಗಳು, ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳ ಜೀವನ ಶೈಲಿ... ಹೀಗೆ ವಿವಿಧ ವಿಷಯಗಳ ಬಗ್ಗೆ ಸಂಶೋಧನೆ ಕೈಗೊಳ್ಳಲು ಮುಂದಾಗಿದ್ದಾರೆ.

‘ಐಸಿಎಂಆರ್ ವತಿಯಿಂದ ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿಯನ್ನು ಉತ್ತೇಜಿಸಲು ಪ್ರತಿ ವರ್ಷವೂ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿಗಳು ಸಲ್ಲಿಸುವ ವಿಷಯಗಳು ಹಾಗೂ ಸಂಸ್ಥೆಯ ಗುಣಮಟ್ಟವನ್ನು ನೋಡಿಕೊಂಡು, ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ವರ್ಷ ನಮ್ಮ ಸಂಸ್ಥೆಯಿಂದ ನಾಲ್ವರು ವಿದ್ಯಾರ್ಥಿಗಳು, ಆಯ್ಕೆಯಾಗಿ ಸಂಶೋಧನೆ ಆರಂಭಿಸಿದ್ದಾರೆ’ ಎಂದು ಹಿಮ್ಸ್ ಪ್ರಾಂಶುಪಾಲ ಡಾ.ಎಸ್. ಆಶಾಕಿರಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು ಸುಮಾರು 6 ತಿಂಗಳ ಸಂಶೋಧನಾ ಯೋಜನೆಯಾಗಿದೆ. ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ವರದಿ ಸಲ್ಲಿಸುತ್ತಾರೆ. ಈ ವರದಿಯು ಜಿಲ್ಲೆಯ ಜನರ ಆರೋಗ್ಯದ ಬಗ್ಗೆ ವೈಜ್ಞಾನಿಕ ಅಂಶಗಳನ್ನು ತಿಳಿಯಲು ಅನುಕೂಲವಾಗಲಿದೆ’ ಎಂದರು.

ವಿಶ್ವವಿದ್ಯಾಲಯದಡಿ ನಾಲ್ಕು ಸಂಶೋಧನೆ: ಐಸಿಎಂಆರ್ ಜೊತೆಯಲ್ಲಿಯೇ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದಲೂ ಹಿಮ್ಸ್‌ನ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಅವಕಾಶ ಸಿಕ್ಕಿದೆ.

‘ಐಸಿಎಂಆರ್ ರೀತಿಯಲ್ಲಿಯೇ ವಿಶ್ವವಿದ್ಯಾಲಯದಿಂದಲೂ 3 ತಿಂಗಳ ಅವಧಿಯ ಸಂಶೋಧನೆಗೆ ಅವಕಾಶ ಸಿಕ್ಕಿದೆ. ಈ ವಿದ್ಯಾರ್ಥಿಗಳು ಸಹ ಸಂಶೋಧನೆ ಆರಂಭಿಸಿದ್ದಾರೆ. ವರದಿ ಸಿದ್ಧಪಡಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಿದ್ದಾರೆ’ ಎಂದು ಡಾ.ಆಶಾಕಿರಣ ತಿಳಿಸಿದರು.

ಎಂಬಿಬಿಎಸ್ ವಿದ್ಯಾರ್ಥಿಗಳಾದ ಶ್ವೇತಾ ಜಿ. ಮನಗೂಳಿ, ವಿನೂತಾ ಜಿ., ಅನುಕ್ಷಾ ಎಲ್., ಎಸ್.ಎಂ. ಚೈತ್ರಾ ಅವರು ಐಸಿಎಂಆರ್ ಸಂಶೋಧನೆಗೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ವಿನೂತಾ ಜಿ., ಅಖಿಲೇಶ್ ವೈ.ವಿ., ಅಖಿಲ್ ಸಾಯಿ ರೆಡ್ಡಿ ಹಾಗೂ ವೈಷ್ಣವಿ ಎಚ್. ಹಾದಿಮನಿ ಅವರು ವಿಶ್ವವಿದ್ಯಾಲಯದ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ. 

- ಹಿಮ್ಸ್ ಕೇವಲ ಬೋಧನೆಗಷ್ಟೇ ಸೀಮಿತವಲ್ಲ. ಜನರ ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಂಡು ಪರಿಹಾರ ಕಂಡುಕೊಳ್ಳುವ ಕೆಲಸವನ್ನೂ ಮಾಡುತ್ತದೆ ಇದಕ್ಕೆ ಸಂಶೋಧನೆಗಳು ನೆರವಾಗಲಿವೆ
ಡಾ. ಎಸ್. ಆಶಾಕಿರಣ ಹಿಮ್ಸ್ ಪ್ರಾಂಶುಪಾಲ
ಕಡಿಮೆ ಸಮಯದಲ್ಲಿ ಹೆಚ್ಚು ಪ್ರಗತಿ ಸಾಧಿಸಿರುವ ಹಿಮ್ಸ್ ವಿದ್ಯಾರ್ಥಿಗಳು ಐಸಿಎಂಆರ್ ಸಂಶೋಧನೆಗೆ ಸ್ಥಾನ ಪಡೆದಿರುವುದು ಖುಷಿ ಸಂಗತಿ. ಹಿಮ್ಸ್ ಅಡಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ
ಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

ವಿದ್ಯಾರ್ಥಿಗಳ ಸಂಶೋಧನಾ ವಿಷಯಗಳು

  1. ಮಧುಮೇಹಿಗಳ ಕುಟುಂಬದ ಇತಿಹಾಸ ಆಹಾರ ಪದ್ಧತಿ ಹಾಗೂ ವೈಯಕ್ತಿಕ ಅಭ್ಯಾಸಗಳು

  2. ಕಟ್ಟಡ ನಿರ್ಮಾಣ ಹಾಗೂ ಇತರೆ ಕಾರ್ಮಿಕರ ಶ್ವಾಸಕೋಶದ ಕಾರ್ಯದ ಪರೀಕ್ಷೆಗಳು

  3. ಕಾರ್ಮಿಕರ ಕೈಗಳ ಬಲ ಹಾಗೂ ನಿದ್ರೆಯ ಗುಣಮಟ್ಟ

  4. ಹರ್ನಿಯಾ ಶಸ್ತ್ರಚಿಕಿತ್ಸೆ ನಂತರದ ಆರೋಗ್ಯದ ತೊಡಕುಗಳು

  5. ಮುಟ್ಟಿನ ಚಕ್ರದ ಸಂದರ್ಭದಲ್ಲಿ ಶ್ವಾಸಕೋಶದ ಕಾರ್ಯ ಪರೀಕ್ಷೆ

  6. ಗರ್ಭಿಣಿಯ ಮೇಲಾಗುವ ಬೊಜ್ಜಿನ ಪರಿಣಾಮಗಳು

  7. ಪ್ರಿ–ಡಯಾಬಿಟಿಸ್‌ನ ಅಪಾಯಕಾರಿ ಅಂಶಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.