ಹಾವೇರಿ: ಇಲ್ಲಿಯ ಹಾವೇರಿ ಹಾಲು ಒಕ್ಕೂಟದ (ಹಾವೆಮುಲ್) ವಾಹನ ಚಾಲಕರು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದು, ಹಾಲಿನ ಕ್ಯಾನ್ ಇಳಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಹಲವು ಹಾಲು ಉತ್ಪಾದಕರ ಸಂಘದಿಂದ ಹಾಲು ಸಂಗ್ರಹಿಸಿ ಸಾಗಣೆ ಮಾಡುವ ಚಾಲಕರ ಬೇಡಿಕೆ ಈಡೇರಿಸುವಲ್ಲಿ ಒಕ್ಕೂಟ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸೋಮವಾರ ಬೆಳಿಗ್ಗೆಯೇ ಕ್ಯಾನ್ ಹಾಗೂ ವಾಹನಗಳ ಸಮೇತ ಒಕ್ಕೂಟದ ಆಡಳಿತ ಕಚೇರಿಗೆ ಬಂದ ಚಾಲಕರು, ಕಚೇರಿ ಎದುರು ಪ್ರತಿಭಟನೆ ನಡೆಸಿದರು.
'ಮೂರು ತಿಂಗಳ ಹಿಂದೆಯೇ ಟೆಂಡರ್ ಮುಗಿದಿದೆ. ಅಧಿಕಾರಿಗಳು ಹೇಳಿದ್ದಕ್ಕೆ ಮೂರು ತಿಂಗಳಿನಿಂದ ಟೆಂಡರ್ ಇಲ್ಲದೇ ಹಾಲಿನ ಕ್ಯಾನ್ ತರುತ್ತಿದ್ದೇವೆ. ಹೆಚ್ಚುವರಿ ಕಿ.ಮೀ. ಓಡಿಸಿದರೂ ಹಣ ನೀಡುತ್ತಿಲ್ಲ' ಎಂದು ಚಾಲಕರು ಆರೋಪಿಸಿದರು.
'ಒಕ್ಕೂಟದ 54 ಮಾರ್ಗಗಳಲ್ಲಿ ವಾಹನಗಳು ಓಡಾಡುತ್ತಿವೆ. ಇದಕ್ಕಾಗಿ ಮರು ಟೆಂಡರ್ ಕರೆಯಲಾಗಿದೆ. ಈ ಪೈಕಿ ಮೂವರಿಗೆ ಮಾತ್ರ ಟೆಂಡರ್ ಆದೇಶ ನೀಡಲಾಗಿದೆ. ಒಂದೇ ಅರ್ಜಿ ಇರುವ ಕಾರಣಕ್ಕೆ ಉಳಿದ ಮಾರ್ಗಗಳ ಟೆಂಡರ್ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ಚಾಲಕರಿಗೆ ಅನ್ಯಾಯವಾಗಿದೆ. ಕೂಡಲೇ ಎಲ್ಲರಿಗೂ ಟೆಂಡರ್ ನೀಡಬೇಕು' ಎಂದು ಚಾಲಕರು ಆಗ್ರಹಿಸಿದರು.
ಚಾಲಕರ ಜೊತೆ ಮಾತನಾಡಿದ ಎಂ.ಡಿ. ಪ್ರದೀಪ್ ಎಸ್.ಎಂ. 'ಟೆಂಡರ್ ನಿಯಮದಂತೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಮಂಗಳವಾರ ಆಡಳಿತ ಮಂಡಳಿ ಸಭೆಯಿದ್ದು, ಈ ಬಗ್ಗೆ ಚರ್ಚಿಸಲಾಗುವುದು' ಎಂದರು.
ಇದಕ್ಕೆ ಒಪ್ಪದ ಚಾಲಕರು, ಕಚೇರಿಯಲ್ಲಿಯೇ ಪ್ರತಿಭಟನೆ ಮುಂದುವರಿಸಿದ್ದಾರೆ. 'ಎಲ್ಲ ಕ್ಯಾನ್ ಇಳಿಸಿ ಹೋಗುತ್ತೇವೆ. ನೀವು ಏನಾದರೂ ಮಾಡಿಕೊಳ್ಳಿ' ಎಂದು ಪಟ್ಟು ಹಿಡಿದಿದ್ದಾರೆ. ಎಂ.ಡಿ. ಪ್ರದೀಪ್ ಅವರು ಚಾಲಕರ ಮನವೊಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.