ADVERTISEMENT

ಹೊಸ ಪಡಿತರ ಚೀಟಿಗೆ ಹಾವೇರಿಯಲ್ಲಿ 9,982 ಅರ್ಜಿ: ಆಹಾರ ಇಲಾಖೆ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:10 IST
Last Updated 22 ಫೆಬ್ರುವರಿ 2026, 1:10 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಶನಿವಾರ ನಡೆಯಿತು 
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಶನಿವಾರ ನಡೆಯಿತು    

ಹಾವೇರಿ: ‘ಹೊಸ ಪಡಿತರ ಚೀಟಿಗಾಗಿ ಜಿಲ್ಲೆಯಲ್ಲಿ 9,982 ಅರ್ಜಿಗಳು ಬಂದಿವೆ. ಈ ಪೈಕಿ 5 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದ್ದು, ಅರ್ಹರಿಗೆ ತ್ವರಿತವಾಗಿ ಪಡಿತರ ಚೀಟಿ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜರುಗಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಎಂ.ಎಂ. ಹಿರೇಮಠ ಅವರಿಗೆ ಮಾಹಿತಿ ನೀಡಿದರು.

‘ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 27 ಜನರ ವಿರುದ್ಧ 16 ಪ್ರಕರಣ ದಾಖಲಿಸಲಾಗಿದೆ. 1,667 ಕ್ವಿಂಟಲ್ ಅಕ್ಕಿ ಹಾಗೂ 13 ವಾಹನಗಳನ್ನು ಜಪ್ತಿ ಮಾಡಲಾಗಿದೆ. 75 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಬಯೋಮೆಟ್ರಿಕ್ ಸಮಸ್ಯೆ ಆಗುತ್ತಿರುವುದರಿಂದ, ಸರ್ಕಾರದ ಅನ್ನ ಸುವಿಧಾ ಯೋಜನೆಯಡಿಯಲ್ಲಿ ಅವರ ಮನೆಗೆ ಹೋಗಿ ಪಡಿತರ ನೀಡಲಾಗುವುದು. ಜಿಲ್ಲೆಯಲ್ಲಿ 7648 ಫಲಾನುಭವಿಗಳ ಪಟ್ಟಿ ಮಾಡಲಾಗಿದೆ’ ಎಂದರು.

ADVERTISEMENT

ಗ್ಯಾರಂಟಿ ಗೊಂದಲ ಪರಿಹರಿಸಿ: ‘ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಯೋಜನೆ ಕುರಿತು ಏನಾದರೂ ಗೊಂದಲಗಳು ಇದ್ದರೆ, ಅದನ್ನು ಅಧಿಕಾರಿಗಳು ತ್ವರಿತವಾಗಿ ಪರಿಹರಿಸಬೇಕು’ ಎಂದು ಎಂ.ಎಂ. ಹಿರೇಮಠ ಸೂಚಿಸಿದರು.

‘ಗ್ಯಾರಂಟಿ ಯೋಜನೆಗಳಿಂದ ಆಗಿರುವ ಪ್ರಯೋಜನಗಳನ್ನು ಜನರಿಗೆ ತಿಳಿಸಬೇಕು. ಮನೆ ಮನೆಗೆ ಗ್ಯಾರಂಟಿ ಮತ್ತು ಮನೆ ಮನೆಗೆ ರಂಗೋಲಿ ಕಾರ್ಯಕ್ರಮವನ್ನು ಪ್ರತಿ ತಾಲ್ಲೂಕಿನಲ್ಲೂ ಹಮ್ಮಿಕೊಳ್ಳಬೇಕು’ ಎಂದರು.

‘ಜಿಲ್ಲೆಯ ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಿ.ಸಿ.ಟಿ.ವಿ ಕ್ಯಾಮೆರಾ ನಿರ್ವಹಣೆ ಸಮರ್ಪಕವಾಗಿರಬೇಕು. ಜಿಲ್ಲೆಗೆ ಹೊಸದಾಗಿ 10 ಬಸ್‌ಗಳು ಬಂದಿದೆ. ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುವುದು’ ಎಂದು ತಿಳಿಸಿದರು.

ಜಿ.ಪಂ. ಉಪ ಕಾರ್ಯದರ್ಶಿ ಪುನೀತ್, ಸಮಿತಿಯ ತಾಲ್ಲೂಕು ಅಧ್ಯಕ್ಷ, ಉಪಾಧ್ಯಕ್ಷರು ಹಾಜರಿದ್ದರು.

ಗೃಹಲಕ್ಷ್ಮಿ ಹಣ ಸಾಲಕ್ಕೆ

ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಯಲ್ಲಿರುವ ಹಣವನ್ನು ಬ್ಯಾಂಕ್‌ನವರು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಆರೋಪದ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು ‘ಫಲಾನುಭವಿಗಳ ಹಣವನ್ನು ಸಾಲದ ಖರ್ಚಿಗೆ ತೆಗೆದುಕೊಳ್ಳದಂತೆ ಅಧಕಾರಿಗಳಿಗೆ ತಿಳಿಸಲಾಗಿದೆ. ಕೆಲವರು ಫಲಾನುಭವಿಗಳ ಅನುಮತಿ ಪಡೆದು ಹಣ ಕಡಿತ ಮಾಡುತ್ತಿರುವುದಾಗಿ ತಿಳಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.