
ಹಾವೇರಿ: ಹಳೇ ವರ್ಷ 2025ಕ್ಕೆ ಬುಧವಾರ ರಾತ್ರಿ ವಿದಾಯ ಹೇಳಿದ ಜಿಲ್ಲೆಯ ಜನರು, 2026ನೇ ಹೊಸ ವರ್ಷವನ್ನು ಸಂಭ್ರಮ–ಸಡಗರದಿಂದ ಬರಮಾಡಿಕೊಂಡರು.
ಹೊಸ ವರ್ಷಾಚರಣೆಗೆಂದು ಜಿಲ್ಲೆಯಾದ್ಯಂತ ಜನರು ಹಲವು ದಿನಗಳಿಂದ ತಯಾರಿ ನಡೆಸುತ್ತಿದ್ದರು. ಮನೆಗಳು, ಹೋಟೆಲ್, ಅಂಗಡಿಗಳು, ಸಾರ್ವಜನಿಕ ಪ್ರದೇಶ, ರೇಸಾರ್ಟ್ ಹಾಗೂ ಇತರೆ ಕಡೆಗಳಲ್ಲಿ ಪಾರ್ಟಿ ಆಯೋಜಿಸಲಾಗಿತ್ತು.
ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ನಗರದ ಹಲವು ವೃತ್ತಗಳಲ್ಲಿ ಸೇರಿದ್ದ ಜನರು, ‘ಹೊಸ ವರ್ಷಕ್ಕೆ ಸ್ವಾಗತ’ ಎಂಬ ಘೋಷಣೆ ಕೂಗಿ ಹೊಸ ವರ್ಷವನ್ನು ಸ್ವಾಗತಿಸಿದರು. ‘2026ನೇ ಹೊಸ ವರ್ಷಕ್ಕೆ ಸ್ವಾಗತ’ ಎಂಬ ಬರಹವುಳ್ಳ ಕೇಕ್ ಕತ್ತರಿಸಿದರು. ಪರಸ್ಪರ ಸಿಹಿ ವಿತರಿಸಿ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು. ಕೆಲವರು ಪಟಾಕಿ ಸಿಡಿಸಿ, ಸಂಭ್ರಮಿಸಿದರು.
ಹೊಸ ವರ್ಷದ ಸಂಭ್ರಮದ ಪಾರ್ಟಿಗಳಲ್ಲಿ ಯುವಜನತೆ, ಸ್ನೇಹಿತರು, ಆಪ್ತರು, ಕುಟುಂಬಸ್ಥರು, ಸಂಬಂಧಿಕರು ಪಾಲ್ಗೊಂಡಿದ್ದರು. ಒಟ್ಟಿಗೆ ಊಟ ಮಾಡಿ, ಹೊಸ ವರ್ಷವನ್ನು ಸ್ವಾಗತಿಸಿದರು.
ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೋಟೆಲ್–ಢಾಬಾಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹೆಚ್ಚಿತ್ತು. ಎಲ್ಲ ಕಡೆಯೂ ವಿಶೇಷ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಸ್ನೇಹಿತರು ಹಾಗೂ ಕುಟುಂಬಸ್ಥರು, ಹೋಟೆಲ್ ಹಾಗೂ ಢಾಬಾಗಳಲ್ಲಿ ಕುಳಿತು ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಕೆಲ ಹೋಟೆಲ್‌ಗಳಲ್ಲಿ ಸಾಮೂಹಿಕ ಪಾರ್ಟಿಗಳನ್ನು ಆಯೋಜಿಸಲಾಗಿತ್ತು. ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಿದ ಜನರು, ಹೊಸ ವರ್ಷ ಆರಂಭವಾದ ಕ್ಷಣವನ್ನು ಸಂಭ್ರಮಿಸಿದರು.
ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಕಂಡುಬಂತು. ರಸ್ತೆ ಹಾಗೂ ವೃತ್ತಗಳಲ್ಲಿ ನಿಂತಿದ್ದ ಯುವಕರ ಗುಂಪುಗಳು, ದಾರಿಹೋಕರಿಗೆ ಶುಭಾಷಯ ಕೋರುತ್ತ ಕೇಕೆ ಹಾಕಿದರು.
ಕೇಕ್ ಖರೀದಿ ಜೋರು: ಹೊಸ ವರ್ಷದ ಸ್ವಾಗತ ಪಾರ್ಟಿಗಳಿಗೆ ಕೇಕ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ, ಬೇಕರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ತರಹೇವಾರಿ ಕೇಕ್‌ಗಳಿಗೆ ಬೇಡಿಕೆ ಬಂದಿತ್ತು.
36 ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ
ಹೊಸ ಸಂಭ್ರಮಾಚರಣೆ ನಿಮಿತ್ತ ಹಾವೇರಿ ಜಿಲ್ಲೆಯ 36 ಕಡೆಗಳಲ್ಲಿ ಪೊಲೀಸರು ಚೆಕ್‌ಪೋಸ್ಟ್ ತೆರೆದಿದ್ದರು. ತಡರಾತ್ರಿ ರಸ್ತೆಯಲ್ಲಿ ಓಡಾಡುವವರನ್ನು ತಪಾಸಣೆ ಮಾಡಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಗಾಗಿ ನಾಲ್ವರು ಡಿವೈಎಸ್ಪಿ 14 ಸಿಪಿಐ 35 ಪಿಎಸ್‌ಐ 41 ಎಎಸ್‌ಐ 357 ಹೆಡ್ ಕಾನ್‌ಸ್ಟೆಬಲ್/ಕಾನ್‌ಸ್ಟೆಬಲ್ ಸೇರಿದಂತೆ ಹಲವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.