ADVERTISEMENT

ಹಾವೇರಿ ‘ರಾಕ್ ಸ್ಟಾರ್‌’ ಕೊಬ್ಬರಿ ಹೋರಿಗೆ ಕಣ್ಣೀರಿನ ವಿದಾಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 13:01 IST
Last Updated 7 ಏಪ್ರಿಲ್ 2024, 13:01 IST
<div class="paragraphs"><p> ‘ರಾಕ್ ಸ್ಟಾರ್‌’ ಕೊಬ್ಬರಿ ಹೋರಿ</p></div>

‘ರಾಕ್ ಸ್ಟಾರ್‌’ ಕೊಬ್ಬರಿ ಹೋರಿ

   

ಹಾವೇರಿ: ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ‘ಹಾವೇರಿ ರಾಕ್‌ ಸ್ಟಾರ್‌–105’ ಎಂದೇ ಪ್ರಸಿದ್ಧಿ ಪಡೆದಿದ್ದ ಹಾವೇರಿ ನಗರದ ನಾಗೇಂದ್ರನಮಟ್ಟಿಯ ಕೊಬ್ಬರಿ ಹೋರಿಯು (22) ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದು, ಭಾನುವಾರ ನಡೆದ ಅಂತಿಮ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡು ಕಣ್ಣೀರಿನ ವಿದಾಯ ಹೇಳಿದರು.

ಜಿಲ್ಲೆಯ ವಿವಿಧ ತಾಲ್ಲೂಕು ಮತ್ತು ತಮಿಳುನಾಡಿನಿಂದ ಬಂದಿದ್ದ ಯುವಕರು ಹೋರಿಯ ಮೃತದೇಹಕ್ಕೆ ಬೃಹತ್‌ ಹಾರವನ್ನು ಹಾಕಿ ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಹಾವೇರಿ ನಗರದಾದ್ಯಂತ ಮೆರವಣಿಗೆ ನಡೆಸಿದರು. ಫ್ಲೆಕ್ಸ್‌, ಕಟೌಟ್‌ಗಳಿಗೆ ಹೂವಿನ ಹಾರ ಹಾಕಿದ ಅಭಿಮಾನಿಗಳು ಕಂಬನಿ ಮಿಡಿದರು. ನಂತರ ವೀರಶೈವ ಲಿಂಗಾಯತ ಧಾರ್ಮಿಕ ವಿಧಿ ವಿಧಾನದಲ್ಲಿ ಹೋರಿ ಮಾಲೀಕರು ಅಂತಿಮ ಸಂಸ್ಕಾರ ನೆರವೇರಿಸಿದರು.

ADVERTISEMENT

ರಾಕ್ ಸ್ಟಾರ್-105 ಮಾಲೀಕರಾದ ಚಿಕ್ಕಪ್ಪ, ಅಜ್ಜಪ್ಪ ಮತ್ತು ಮಾರುತಿ ಮತ್ತು ಅದರ ಆಪ್ತರು ಅಂತ್ಯಕ್ರಿಯೆಯ ಸಮಯದಲ್ಲಿ ದುಃಖ ವ್ಯಕ್ತಪಡಿಸುತ್ತಾ, ‘ಮನೆಯ ಮಗನನ್ನು ಕಳೆದುಕೊಂಡಿದ್ದೇವೆ. ಮತ್ತೆ ಹುಟ್ಟಿ ಬಾ’ ಎಂದು ಮಮ್ಮಲ ಮರುಗಿದರು. ಹಾವೇರಿ ರಾಕ್ ಸ್ಟಾರ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

60 ಸ್ಪರ್ಧೆಗಳಲ್ಲಿ ಗೆಲುವು

ಚಿಂಚ-ಹಳ್ಳಿಕಾರ್ ಮಿಶ್ರ ತಳಿಯ ರಾಕ್ ಸ್ಟಾರ್ ಅನ್ನು ಹಾವೇರಿಯ ಗೆಳೆಯರ ಬಳಗದವರು 16 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಖರೀದಿಸಿದ್ದರು. ಹತ್ತು ವರ್ಷಗಳಿಂದ ಹಾವೇರಿ ಮತ್ತು ತಮಿಳುನಾಡಿನ ವಿವಿಧ ಭಾಗಗಳಲ್ಲಿ ನಡೆದ ಕೊಬ್ಬರಿ ಹೋರಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ರಾಕ್‌ಸ್ಟಾರ್‌ 60ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಜಯಗಳಿಸಿತ್ತು.

‘ಹಾವೇರಿ ರಾಕ್ ಸ್ಟಾರ್’ ಕೊಬ್ಬರಿ ಹೋರಿ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ, 28 ಬೈಕ್‌ಗಳು, 350 ಗ್ರಾಂ ಚಿನ್ನ, 1 ಕೆ.ಜಿ ಬೆಳ್ಳಿ ಮತ್ತು ಟಿ.ವಿ.ಗಳು, ರೆಫ್ರಿಜರೇಟರ್‌ಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ರಾಕ್ ಸ್ಟಾರ್‌ ಕೊನೆಯ ಪಂದ್ಯದಲ್ಲಿ ಹಾನಗಲ್‌ನಲ್ಲಿ 20 ಗ್ರಾಂ ಚಿನ್ನ ಗೆದ್ದಿತ್ತು’ ಎಂದು ಹೋರಿ ಮಾಲೀಕರೊಲ್ಲೊಬ್ಬರಾದ ಮಾರುತಿ ಮಾಹಿತಿ ನೀಡಿದರು.

ಕಟ್ಟಿಹಾಕುವುದು ಅಸಾಧ್ಯ

‘ಹಾವೇರಿ ರಾಕ್ ಸ್ಟಾರ್ ಅನ್ನು ಸ್ಪರ್ಧೆಗಳಲ್ಲಿ ಕಟ್ಟಿ ಹಾಕುವುದು ಅಸಾಧ್ಯ. ಮಿಂಚಿನ ವೇಗ ಮತ್ತು ನಿರ್ಭೀತಿಯಿಂದ ಜನರ ಗುಂಪನ್ನು ಸೀಳಿಕೊಂಡು ಗುರಿಯತ್ತ ಮುನ್ನುಗ್ಗುವ ದೃಶ್ಯವನ್ನು ನೋಡಲು ಸಾವಿರಾರು ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಹೋರಿ ಹಿಡಿಯಲು ಹೋದ ಅನೇಕ ಯುವಕರಿಗೆ ತೀವ್ರ ಗಾಯಗಳಾಗಿವೆ. ಆದರೆ, ರಾಕ್ ಸ್ಟಾರ್ ಯಾವುದೇ ಆಟದಲ್ಲಿ ಗಾಯಗೊಂಡಿರಲಿಲ್ಲ. ಇದರ ಸಾವಿನಿಂದ ಗ್ರಾಮೀಣ ಕ್ರೀಡೆ ಕೊಬ್ಬರಿ ಹೋರಿ ಸ್ಪರ್ಧೆಗೆ ದೊಡ್ಡ ನಷ್ಟವಾಗಿದೆ’ ಎಂದು ಹೋರಿ ಅಭಿಮಾನಿಗಳಾದ ಗಿರೀಶ್‌, ಉಲಿವೇಶ್ ಗೌಡ್ರು ತಿಳಿಸಿದರು.

ಅಂತ್ಯಕ್ರಿಯೆ ನೆರವೇರಿಸಿದ ಸ್ಥಳದಲ್ಲಿ ಅಭಿಮಾನಿಗಳ ಸಹಕಾರದೊಂದಿಗೆ ಹಾವೇರಿ ರಾಕ್‌ಸ್ಟಾರ್‌ ಹೋರಿಗೆ ಸಣ್ಣ ದೇವಾಲಯ ಮತ್ತು ಪ್ರತಿಮೆ ನಿರ್ಮಿಸುವ ಯೋಜನೆ ಹೊಂದಿದ್ದೇವೆ
– ಚಿಕ್ಕಪ್ಪ ಹಾವೇರಿ, ಹೋರಿ ಮಾಲೀಕ

ಅಂತಿಮ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.