ADVERTISEMENT

ಹಾವೇರಿ | ಅಪಘಾತ: ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:58 IST
Last Updated 9 ಜನವರಿ 2026, 7:58 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಹಾವೇರಿ: ಇಲ್ಲಿಯ ಹಳೇ ಪಿ.ಬಿ. ರಸ್ತೆಯ ಆರ್‌ಟಿಒ (ಪ್ರಾದೇಶಿಕ ಸಾರಿಗೆ ಅಧಿಕಾರಿ) ಕಚೇರಿ ಎದುರು ಗುರುವಾರ ಅಪಘಾತ ಸಂಭವಿಸಿದ್ದು, ಪರೀಕ್ಷೆ ಬರೆಯಲು ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿಯೊಬ್ಬರು ಗಾಯಗೊಂಡಿದ್ದಾರೆ.

ADVERTISEMENT

‘ನಗರದ ಹೊರವಲಯದಲ್ಲಿರುವ ವಸತಿ ನಿಲಯದಲ್ಲಿರುವ ವಿದ್ಯಾರ್ಥಿ ರೋಹಿತ್ ಅವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ, ಸಾರಿಗೆ ಸಂಸ್ಥೆ ಬಸ್‌ ಡಿಕ್ಕಿಯಾಗಿತ್ತು. ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಸ್ನೇಹಿತರೊಬ್ಬರು ಹೇಳಿದರು.

‘ಕೋಣನತಂಬಿಗಿ ಗ್ರಾಮದ ನಿವಾಸಿ ರೋಹಿತ್, ಇಜಾರಿ ಲಕಮಾಪುರ ಬಳಿ ಇರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದರು. ಗುರುವಾರ ಕಾಲೇಜಿನಲ್ಲಿ ಪರೀಕ್ಷೆ ಇತ್ತು. ಅದನ್ನು ಬರೆಯಲು ಹಾಸ್ಟೆಲ್‌ನಿಂದ ಕಾಲೇಜಿಗೆ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದರು.

‘ರೋಹಿತ್ ಹಾಗೂ ಸ್ನೇಹಿತರು, ತಮ್ಮ ಪಾಡಿಗೆ ರಸ್ತೆ ಪಕ್ಕದಲ್ಲಿ ನಡೆದುದುಕೊಂಡು ಹೊರಟಿದ್ದರು. ಅತೀ ವೇಗದಲ್ಲಿ ಬಸ್‌ ಚಲಾಯಿಸಿಕೊಂಡು ಬಂದ ಚಾಲಕ, ನಿರ್ಲಕ್ಷ್ಯ ವಹಿಸಿದ್ದ. ವಿದ್ಯಾರ್ಥಿಗೆ ಬಸ್‌ ಡಿಕ್ಕಿ ಹೊಡೆದಿತ್ತು. ಇದಾದ ನಂತರ, ವಿದ್ಯಾರ್ಥಿಯನ್ನು ಆಸ್ಪತ್ರೆ ಸೇರಿಸಲು ಬಸ್‌ ಸಿಬ್ಬಂದಿ ಮುಂದಾಗಿರಲಿಲ್ಲ. ವಿಷಯ ತಿಳಿದ ಸಹಪಾಠಿಗಳು, ಸ್ಥಳಕ್ಕೆ ಹೋಗಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದು ಹೇಳಿದರು.

ಚಾಲಕ, ನಿರ್ವಾಹಕ ವಿರುದ್ಧ ಆಕ್ರೋಶ; ‘ಅಪಘಾತಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕ ನಿರ್ಲಕ್ಷ್ಯವೇ ಕಾರಣ’ ಎಂದು ಆರೋಪಿಸಿ ವಿದ್ಯಾರ್ಥಿಯ ಸಹಪಾಠಿಗಳು, ಹಾವೇರಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಎಸ್‌ಎಫ್‌ಐ ಪದಾಧಿಕಾರಿಗಳ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

‘ವಿದ್ಯಾರ್ಥಿಗಳಿಗೆ ನಿತ್ಯವೂ ಬಸ್‌ಗಳಿಂದ ತೊಂದರೆ ಆಗುತ್ತಿದೆ. ಶಕ್ತಿ ಯೋಜನೆಗಳಿಂದಾಗಿ, ಶಾಲೆ–ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಬಸ್‌ ಲಭ್ಯವಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಸೂಕ್ತ ಬಸ್‌ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಯವರ ಆದೇಶವಿದ್ದರೂ, ಸಾರಿಗೆ ಸಂಸ್ಥೆ ಅಧಿಕಾರಿಗಳು ಪಾಲಿಸುತ್ತಿಲ್ಲ’ ಎಂದು ಸಹಪಾಠಿಗಳು ದೂರಿದರು.

‘ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿಗೆ ತೀವ್ರ ಗಾಯವಾಗಿದೆ. ಅವರ ವೈದ್ಯಕೀಯ ಚಿಕಿತ್ಸೆಗೆ ₹ 1 ಲಕ್ಷ ನೀಡಬೇಕು. ತಪ್ಪಿತಸ್ಥ ಚಾಲಕ–ನಿರ್ವಾಹಕ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್‌ ಸಮಸ್ಯೆಯನ್ನು ಸರಿಪಡಿಸಲು ಜಿಲ್ಲಾಧಿಕಾರಿಯವರು ಸಭೆ ಕರೆಯಬೇಕು’ ಎಂದು ಒತ್ತಾಯಿಸಿದರು.