ADVERTISEMENT

ಸಾಧನಾ ಸಮಾವೇಶ: ಮತ್ತೆ ಕಳಚಿಬಿದ್ದ ಪೆಂಡಾಲ್; ಸ್ವಲ್ಪದರಲ್ಲೇ ಪೊಲೀಸರು ಪಾರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 8:35 IST
Last Updated 13 ಫೆಬ್ರುವರಿ 2026, 8:35 IST
   

ಹಾವೇರಿ; ನಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಹಾಕಿರುವ ಪೆಂಡಾಲ್ ಶುಕ್ರವಾರ ಮತ್ತೆ ಕಳಚಿ ಬಿದ್ದಿದೆ.

ಸಮಾವೇಶದ ಭದ್ರತೆಗೆ ನಿಯೋಜನೆಗೊಂಡಿರುವ ಸಾವಿರಕ್ಕೂ ಹೆಚ್ಚು ಪೊಲೀಸರ ಹಾಜರಾತಿ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಗಾಳಿ ಬೀಸಿ ಪೆಂಡಾಲ್ ಕಳಚಿ ಬಿದ್ದಿದೆ. ಅದರ ಜೊತೆಯಲ್ಲಿಯೇ ಕಬ್ಬಿಣದ ಕಂಬಗಳು ತೇಲಾಡಿದವು.

ಗುರುವಾರವೂ ಪೆಂಡಾಲ್ ಕಳಚಿ ಬಿದ್ದು ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಮಲ್ಲೇಶ ಕಬ್ಬೂರ ಗಾಯಗೊಂಡಿದ್ದಾರೆ. ಈಗ ಶುಕ್ರವಾರ ಪುನಃ ಪೆಂಡಾಲ್ ಕಳಚಿ ಬಿದ್ದಿದೆ. ನಾಳೆ (ಫೆ. 14) ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಪೆಂಡಾಲ್ ಕಳಚಿ ಬಿದ್ದರೆ ದೊಡ್ಡ ಅನಾಹುತ ಉಂಟಾಗಬಹುದು. ಎರಡೂ ಬಾರಿ ಪೆಂಡಾಲ್ ಕಳಚಿ ಬಿದ್ದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ.

ADVERTISEMENT

ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಹಾಗೂ ಇತರೆ ಅಧಿಕಾರಿಗಳು ಪೊಲೀಸರ ಹಾಜರಾತಿ ಪಡೆದು ಭದ್ರತಾ ಸೂಚನೆಗಳನ್ನು ನೀಡಿ ಸ್ಥಳದಿಂದ ತೆರಳಿದ್ದರು. ಈ ಸಂದರ್ಭದಲ್ಲಿ ಕೆಲ ಪೊಲೀಸರು ಮಾತ್ರ ಪೆಂಡಾಲ್‌ನಲ್ಲಿ ಇದ್ದರು. ಪೊಲೀಸರ ಸಮ್ಮುಖದಲ್ಲಿಯೇ ಪೆಂಡಾಲ್ ಕಳಚಿ ಬಿದ್ದಿದೆ. ಕಬ್ಬಿಣದ ಕಂಬಗಳು ಕುರ್ಚಿಗಳನ್ನು ಸೀಳಿ ಸಿಲುಕಿಕೊಂಡಿವೆ.

ಗುತ್ತಿಗೆದಾರನ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂಬ ಆರೋಪವಿದೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.