
ಹಾವೇರಿ: ‘ಜಗತ್ತಿನಲ್ಲಿಯೇ ಭಾರತದ ಸಂವಿಧಾನ ವಿಶಿಷ್ಟವಾಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ನಮ್ಮ ಸಂವಿಧಾನ, ಘನತೆಯ ಜೀವನವನ್ನು ಕಟ್ಟಿಕೊಟ್ಟಿದೆ’ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಟಿ. ಬಾಗಲಕೋಟೆ ಹೇಳಿದರು.
ನಗರದ ಇಜಾರಿ ಲಕಮಾಪುರ ಬಳಿಯ ಸಿದ್ದಾರೂಢ ಕಾಲೊನಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಪರಿಶಿಷ್ಟ ಜಾತಿಗಳ ಒಕ್ಕೂಟ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ನಮ್ಮ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಸಂವಿಧಾನವು ಎತ್ತಿಹಿಡಿದಿದೆ. ಜೊತೆಗೆ, ನಮಗೆಲ್ಲರಿಗೂ ಸಾರ್ವತ್ರಿಕ ಮತದಾನದ ಹಕ್ಕು ನೀಡಿದೆ. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಯಾವ ರೀತಿ ನಡೆಯಬೇಕು ? ಎಂಬುದನ್ನು ಸಂವಿಧಾನ ತಿಳಿಸಿದೆ. ಹಲವು ದೇಶಗಳ ಸಂವಿಧಾನ, 16 ವರ್ಷದಿಂದ 17 ವರ್ಷಗಳು ಮಾತ್ರ ಜಾರಿಯಲ್ಲಿದ್ದವು. ಆದರೆ, ನಮ್ಮ ಭಾರತದ ಸಂವಿಧಾನ 76 ವರ್ಷ ಕಳೆದರೂ ಗಟ್ಟಿತನ, ಸದೃಢತೆಯನ್ನು ಉಳಿಸಿಕೊಂಡಿದೆ. ಪ್ರತಿಯೊಬ್ಬರೂ ಸಂವಿಧಾನ ಓದಿ, ತಿಳಿದುಕೊಳ್ಳಬೇಕು. ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ‘ಭಾರತ ಸಂವಿಧಾನ ಈ ದೇಶದ ಧರ್ಮಗ್ರಂಥವಿದ್ದಂತೆ. ಹಲವು ಜಾತಿ, ಭಾಷೆ, ವೈವಿಧ್ಯಮಯವಾದ ಸಂಸ್ಕೃತಿ ಹಾಗೂ ಆಚರಣೆಗಳಿಂದ ಕೂಡಿದ ದೇಶದ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಸಂವಿಧಾನ ನೀಡಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಪ್ರತಿ ಪ್ರಜೆಗೆ ಜಾತ್ಯಾತೀತವಾಗಿ ಸಮಾನ ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಿದ್ದಾರೆ. ಅವರ ಕನಸು ನನಸು ಮಾಡಲು ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳಬೇಕು’ ಎಂದರು ಹೇಳಿದರು.
ಜಿ.ಪಂ. ಸಿಇಒ ರುಚಿ ಬಿಂದಲ್ ಮಾತನಾಡಿ, ‘ವಿದ್ಯಾರ್ಥಿಗಳು ಸಂವಿಧಾನವನ್ನು ಓದಬೇಕು. ಅದರಲ್ಲಿರುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು. ಸಂವಿಧಾನ ಗೌರವಿಸಿ ಬದುಕಬೇಕು’ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಹಾಗೂ ಜನರು, ಭಾರತ ಸಂವಿಧಾನದ ಪೂರ್ವ ಪೀಠಿಕೆ ವಾಚಿಸಿದರು.
ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಂಗೋಲಿ, ಚಿತ್ರಕಲೆ, ಛಾಯಾಚಿತ್ರ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಚಿತ್ರಕಲಾ ಪ್ರದರ್ಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಉದ್ಘಾಟಿಸಿದರು.
ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಎಂ.ಎಂ. ಮೈದೂರು, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಶೀಲ್ದಾರ ಶರಣಮ್ಮ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ, ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ ಇದ್ದರು.
ಕಾಂಗ್ರೆಸ್ ಕಚೇರಿ: ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಸಂವಿಧಾನ ದಿನದ ಅಂಗವಾಗಿ ‘ಸಂವಿಧಾನ ಬಚಾವೊ’ ದಿವಸ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು, ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಅಧ್ಯಕ್ಷ ಸಂಜೀವ ಕುಮಾರ ನೀರಲಗಿ, ಎಸ್.ಎಫ್.ಎನ್. ಗಾಜೀಗೌಡ್ರ, ಶಂಕರ ಮೆಹರವಾಡೆ, ಎಂ.ಎಂ. ಮೈದೂರು, ಪ್ರಭುಗೌಡ್ರ ಭೀಷ್ಟನಗೌಡರ ಇದ್ದರು.