ಹಾವೇರಿ ಗುರುಭವನದಲ್ಲಿ ಸಂಗ್ರಹಿಸಿಟ್ಟ ಪಠ್ಯಪುಸ್ತಕಗಳನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಪನಿರ್ದೇಶಕ ಸುರೇಶ ಹುಗ್ಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಪರಿಶೀಲಿಸಿದರು
ಹಾವೇರಿ: ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತರಗತಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಶಾಲೆಗೆ ಮಕ್ಕಳು ಬರುವ ಮುನ್ನವೇ ಪಠ್ಯಪುಸ್ತಕ ಸಂಗ್ರಹ ಮಾಡಿಟ್ಟುಕೊಳ್ಳುವ ಕೆಲಸ ಭರದಿಂದ ಸಾಗಿದೆ.
ಬೇಸಿಗೆ ರಜೆ ಮುಗಿದ ಕೂಡಲೇ ಮಕ್ಕಳು ಶಾಲೆಗೆ ಹಾಜರಾಗಲಿದ್ದಾರೆ. ವಿಶೇಷ ಕಾರ್ಯಕ್ರಮ ಹಾಗೂ ಪಠ್ಯಪುಸ್ತಕ ನೀಡುವ ಮೂಲಕ ಮಕ್ಕಳನ್ನು ಬರಮಾಡಿಕೊಳ್ಳಲು ಕೆಲ ಶಾಲೆಯವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಪ್ರಸಕ್ತ ವರ್ಷ ಜಿಲ್ಲೆಯ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಗೆ ಪಠ್ಯಪುಸ್ತಕಗಳನ್ನು ನೇರವಾಗಿ ಪೂರೈಕೆ ಮಾಡಿದೆ. ತಮಗೆ ಬಂದ ಪಠ್ಯಪುಸ್ತಕಗಳನ್ನು ಬಿಇಒ ಕಚೇರಿ ಸಿಬ್ಬಂದಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕಳುಹಿಸುತ್ತಿದ್ದಾರೆ.
ಜಿಲ್ಲೆಯ ಬೇಡಿಕೆಗೆ ತಕ್ಕಂತೆ 2025 ಮೇ 23ರವರೆಗೆ ಶೇ 72.57ರಷ್ಟು ಪಠ್ಯಪುಸ್ತಕಗಳು ಉಚಿತವಾಗಿ ಪೂರೈಕೆಯಾಗಿವೆ. ಮಾರಾಟಕ್ಕೆ ಶೇ 80.24ರಷ್ಟು ಪಠ್ಯಪುಸ್ತಕಗಳು ಸರಬರಾಜಾಗಿವೆ. ಶೇ 60.24ರಷ್ಟು ಪಠ್ಯಪುಸ್ತಕಗಳನ್ನು ಉಚಿತವಾಗಿ ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ. ಮಾರಾಟ ಮಾಡಿದ ಶೇ 63.61ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದೆ.
ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು (ರಟ್ಟೀಹಳ್ಳಿ ಸೇರಿದಂತೆ), ರಾಣೆಬೆನ್ನೂರು, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಪೂರೈಸುವ ಕೆಲಸ ಪ್ರಗತಿಯಲ್ಲಿದೆ.
ಕೆಲ ವರ್ಷಗಳ ಹಿಂದೆ ಶಾಲೆ ಆರಂಭವಾದರೂ ಪಠ್ಯಪುಸ್ತಕಗಳು ಪೂರೈಕೆ ಆಗುತ್ತಿರಲಿಲ್ಲ. ಆದರೆ, ಈ ವರ್ಷ ಶಾಲೆ ಆರಂಭಕ್ಕೂ ಮುನ್ನ ಪಠ್ಯಪುಸ್ತಕಗಳು ಬಂದಿವೆ. ಆರಂಭದಲ್ಲಿ ಜಿಲ್ಲಾ ಮಟ್ಟದ ಕಚೇರಿಗಳಿಗೆ ಪಠ್ಯಪುಸ್ತಕ ಕಳುಹಿಸಲಾಗುತ್ತಿತ್ತು. ಅಲ್ಲಿಂದ, ತಾಲ್ಲೂಕು ಹಾಗೂ ಹಳ್ಳಿಗಳಿಗೆ ಪಠ್ಯಪುಸ್ತಕ ತಲುಪಿಸುವುದು ತಡವಾಗುತ್ತಿತ್ತು. ಹೀಗಾಗಿ, ಈ ವರ್ಷ ತಾಲ್ಲೂಕಿನಲ್ಲಿರುವ ಬಿಇಒ ಕಚೇರಿಗೆ ನೇರವಾಗಿ ಪಠ್ಯಪುಸ್ತಕ ತಲುಪಿಸಲಾಗಿದೆ.
ಶಾಲಾ ಆರಂಭದ ಸಿದ್ಧತೆ ಹಾಗೂ ಪಠ್ಯಪುಸ್ತಕ ಪೂರೈಕೆ ಬಗ್ಗೆ ಚರ್ಚಿಸಲು ಮುಖ್ಯಶಿಕ್ಷಕರ ಸಭೆ ನಡೆಸಲಾಗುತ್ತಿದೆ. ಪಠ್ಯಪುಸ್ತಕಗಳನ್ನು ನಿಗದಿತ ಸಮಯಕ್ಕೆ ಮಕ್ಕಳಿಗೆ ನೀಡುವಂತೆಯೂ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
ವಿಶೇಷ ಕಾರ್ಯಕ್ರಮ 30ಕ್ಕೆ: ‘ಮೇ 29ರಿಂದ ಶಾಲೆಗಳು ಆರಂಭವಾಗಲಿದ್ದು, ಮೊದಲ ದಿನ ಸ್ವಚ್ಛತಾ ಕಾರ್ಯ ನಡೆಯಲಿದೆ. ಮರುದಿನ, ಮೇ 30ರಂದು ಮಕ್ಕಳನ್ನು ಭವ್ಯವಾಗಿ ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ ಹೇಳಿದರು.
‘ಜಿಲ್ಲಾ ಕೇಂದ್ರ ಹಾಗೂ ಪ್ರತಿ ತಾಲ್ಲೂಕಿನ ಆಯ್ದ ಶಾಲೆಗಳನ್ನು ವಿಶೇಷವಾಗಿ ಅಲಂಕರಿಸಲಾಗುವುದು. ವಿಶೇಷ ಬಿಸಿಯೂಟದ ವ್ಯವಸ್ಥೆ ಸಹ ಮಾಡಿಸಲಾಗುವುದು. ಅಂದು ಪ್ರತಿಯೊಂದು ಶಾಲೆಯಲ್ಲಿಯೂ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.
‘ಪುಸ್ತಕ ಕೊರತೆ ಆಗದಂತೆ ನಿಗಾ’
‘ಹಾವೇರಿ ಜಿಲ್ಲೆಯಲ್ಲಿ 1128 ಪ್ರಾಥಮಿಕ ಶಾಲೆಗಳು ಹಾಗೂ 155 ಪ್ರೌಢಶಾಲೆಗಳಿವೆ. ಇಲಾಖೆಯಿಂದ ಸರಬರಾಜಾದ ಶೇ 72.57ರಷ್ಟು ಪಠ್ಯಪುಸ್ತಕಗಳ ಪೈಕಿ ಶೇ 63.61ರಷ್ಟು ಪಠ್ಯಪುಸ್ತಕಗಳನ್ನು ಈಗಾಗಲೇ ಪೂರೈಕೆ ಮಾಡಲಾಗಿದೆ. ಮೇ 29ರಂದು ಶಾಲೆಗಳು ಆರಂಭವಾಗಲಿದ್ದು ಅಷ್ಟರಲ್ಲಿ ಉಳಿದ ಪಠ್ಯಪುಸ್ತಕಗಳು ಶಾಲೆ ಸೇರಲಿವೆ’ ಎಂದು ಸುರೇಶ ಹುಗ್ಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲೆಗೆ ಉಚಿತವಾಗಿ 2669208 ಹಾಗೂ ಮಾರಾಟಕ್ಕಾಗಿ 712146 ಪಠ್ಯಪುಸ್ತಕ ಸರಬರಾಜು ಮಾಡುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ ಉಚಿತವಾಗಿ 1937002 ಹಾಗೂ ಮಾರಾಟಕ್ಕಾಗಿ 571397 ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಮುಂಬರುವ ದಿನಗಳಲ್ಲಿ ಉಳಿದ ಪಠ್ಯಪುಸ್ತಕಗಳೂ ಪೂರೈಕೆಯಾಗಲಿವೆ. ಯಾವುದೇ ಶಾಲೆಯಲ್ಲಿಯೂ ಪಠ್ಯಪುಸ್ತಕ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ’ ಎಂದು ಹೇಳಿದರು.
‘ಕನ್ನಡ ಇಂಗ್ಲಿಷ್ ಉರ್ದು ಮಾಧ್ಯಮದ 3109 ಶೀರ್ಷಿಕೆಯ ಪಠ್ಯಪುಸ್ತಕಗಳು ಬಂದಿವೆ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಅಧೀನದ ಕಚೇರಿಗಳಲ್ಲಿ ಪಠ್ಯಪುಸ್ತಕ ಸಂಗ್ರಹಿಸಲಾಗಿದೆ. ಶಾಲೆ ಶಿಕ್ಷಕರು ಪಠ್ಯಪುಸ್ತಕಗಳನ್ನು ಪಡೆದುಕೊಂಡು ಮಕ್ಕಳಿಗೆ ವಿತರಿಸಲಿದ್ದಾರೆ’ ಎಂದು ತಿಳಿಸಿದರು.
ಬೇಡಿಕೆಗೆ ತಕ್ಕಷ್ಟು ಪಠ್ಯಪುಸ್ತಕಗಳು ಹಂತ ಹಂತವಾಗಿ ಪೂರೈಕೆಯಾಗಲಿವೆ. ಎಲ್ಲ ಮಕ್ಕಳಿಗೆ ಪಠ್ಯಪುಸ್ತಕ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.ಸುರೇಶ ಹುಗ್ಗಿ, ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.