ADVERTISEMENT

ಹಾನಗಲ್: ನಿರಾಶ್ರಿತರು ನೆಲೆಸಿದ ಗ್ರಾಮವೇ ಶಿವಪುರ!

ಮಾರುತಿ ಪೇಟಕರ
Published 14 ಮಾರ್ಚ್ 2020, 19:30 IST
Last Updated 14 ಮಾರ್ಚ್ 2020, 19:30 IST
ಹಾನಗಲ್ ತಾಲ್ಲೂಕಿನ ಶಿವಪುರ ಗ್ರಾಮ ಸ್ಥಾಪನೆಗೂ ಮುನ್ನ ಅಸ್ತಿತ್ವದಲ್ಲಿದ್ದ ಚಾಳಮ್ಮದೇವಿ ದೇವಸ್ಥಾನ
ಹಾನಗಲ್ ತಾಲ್ಲೂಕಿನ ಶಿವಪುರ ಗ್ರಾಮ ಸ್ಥಾಪನೆಗೂ ಮುನ್ನ ಅಸ್ತಿತ್ವದಲ್ಲಿದ್ದ ಚಾಳಮ್ಮದೇವಿ ದೇವಸ್ಥಾನ   

ಹಾನಗಲ್:ಕಾಮನಹಳ್ಳಿ ಕಾಲೊನಿ, ಹಂದಿಹಾಳ ಪಕ್ಕದ ಊರು, ಮಂತಗಿ ಕಾಲೊನಿ... ಹೀಗೆ ಸುತ್ತಲಿನ ಗ್ರಾಮಗಳ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದಗ್ರಾಮ, ಈಗ ಶಿವಪುರ ಎಂದೇ ನಾಮಕರಣಗೊಂಡಿದೆ.

ಹಾನಗಲ್ ತಾಲ್ಲೂಕಿನ ಕೃಷಿ ಭೂಮಿಯ ಜೀವಜಲ ಮುಂಡಗೋಡ ತಾಲ್ಲೂಕಿನ ಮಳಗಿ ಭಾಗದ ಧರ್ಮಾ ಜಲಾಶಯ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಟ್ಟ ನಿರಾಶ್ರಿತರುನೆಲೆಸಿರುವ ಗ್ರಾಮವೇ ಶಿವಪುರ.

1960ರಲ್ಲಿ ಜಲಾಶಯ ನಿರ್ಮಾಣಗೊಳ್ಳುವ ವೇಳೆ ಮುಂಡಗೋಡ ಮತ್ತು ಶಿರಸಿ ತಾಲ್ಲೂಕಿನ ನಾಲ್ಕು ಗ್ರಾಮಗಳು ಮುಳುಗಡೆಯಾಗಿದ್ದವು. ಅಂದು ಜಲಾಶಯ ಭಾಗದಲ್ಲಿ ಮುಳುಗಡೆಯಾದ ಜನಗೇರಿ ಮತ್ತು ಹೊಸಕೊಪ್ಪ ಗ್ರಾಮಗಳ ಜನರಿಗೆ ಸರ್ಕಾರ ನೆಲೆ ನೀಡಿದ್ದು ಹಾನಗಲ್ ತಾಲ್ಲೂಕಿನ ಮಂತಗಿ, ಕಾಮನಹಳ್ಳಿ, ಹಂದಿಹಾಳ ಗ್ರಾಮಗಳನಡುವಿನ ಅರಣ್ಯ ಪ್ರದೇಶದಲ್ಲಿ ಎಂದುಗ್ರಾಮದ ಕುತ್ಬುದೀನ್‌ ಜನಗೇರಿ, ಮುಕದ್ದರ ಬೇಗನವರ ಹೇಳಿದರು.

ADVERTISEMENT

ದಟ್ಟ ಕಾನನವಾಗಿದ್ದ ಪ್ರದೇಶದಲ್ಲಿ ಗ್ರಾಮ ರಚನೆ ಮಾಡಲಾಗಿತ್ತು. ವ್ಯವಸ್ಥಿತ ರೀತಿಯಲ್ಲಿ ವಿಶಾಲ ರಸ್ತೆಗಳು, ಚರಂಡಿ, ಉದ್ಯಾನಕ್ಕೆ ಸ್ಥಳ, ದೇವಸ್ಥಾನಗಳ ನಿರ್ಮಾಣಕಾರ್ಯ ಅಂದು ನಡೆದಿತ್ತು ಎಂದು ಹಸನ್‌ಮಿಯಾ ವಡಗೇರಿ ನೆನಪಿಸಿಕೊಂಡರು.

ನಿರಾಶ್ರಿತರಿಗೆ ಉಚಿತವಾಗಿ ನಿವೇಶನ, ಮನೆ ನಿರ್ಮಾಣಕ್ಕೆ ಸಹಕಾರ ಮತ್ತು ಅರಣ್ಯ ಭಾಗವನ್ನು ತೆರವು ಮಾಡಿ ಕೃಷಿ ಜಮೀನುಗಳನ್ನು ಹಂಚಲಾಗಿತ್ತು. ಆದರೆ ನಮ್ಮಗ್ರಾಮಕ್ಕೆ ತನ್ನದೇ ಹೆಸರು ಇರಲಿಲ್ಲ. ಈ ಭಾಗದಲ್ಲಿ ಕೆಲವು ಜನರು ವಾಸವಾದ ಸ್ಥಳಕ್ಕೆ ಶಿವನಹಳ್ಳಿ ಎಂದು ಕರೆಯಲಾಗುತ್ತಿತ್ತು. ಇದೇ ಹೆಸರು ಸೂಕ್ತ ಎಂದು ಶಿವಪುರ ಎಂಬ ಹೆಸರು ಇಡಲಾಗಿದೆ ಎಂದು ಗ್ರಾಮದ ಹಿರಿಯರಾದ ವೀರಭದ್ರಪ್ಪ ನೀಲಕುಂದ ಹೇಳಿದರು.

1500 ಜನಸಂಖ್ಯೆಯ ಈ ಗ್ರಾಮವು ಕಂದಾಯ ಗ್ರಾಮವಾಗಿ ಎರಡು ವರ್ಷಗಳಾಗಿವೆ. ಆದರೆ ಈಗಲೂ ನಮ್ಮ ಗ್ರಾಮದಜಮೀನುಗಳ ದಾಖಲೆಯಲ್ಲಿ ಪಕ್ಕದ ಗ್ರಾಮಗಳ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದೆ ಎಂದು ನಿಂಗಪ್ಪ ಹೆಗಡೆ, ಹನುಮಂತಪ್ಪ ಹೊಸಕೊಪ್ಪ, ನಾಗರಾಜ ವಡ್ಡರ ಹೇಳಿದರು.

ಗ್ರಾಮದ ಶಂಭಣ್ಣ ವಣಕಿ, ಸುರೇಶಗೌಡ ಪಾಟೀಲ, ಷಾಬುದ್ಧಿನ್‌ ವಡಗೇರಿ, ಮಂಜುನಾಥ ಕಮಾಟಿ ಅವರ ಪ್ರಕಾರ, ಗ್ರಾಮದ ಕಂದಾಯ ದಾಖಲೆಗಳು ದುರಸ್ತಿಯಾಗಿಶಿವಪುರ ಎಂದು ನಮೂದಾಗಬೇಕು. ಇಲ್ಲಿನ ನಿವಾಸಿಗಳು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಎನ್ನುತ್ತಾರೆ.

ಗ್ರಾಮಕ್ಕೆ ಅಗತ್ಯದ ಸ್ಮಶಾನ ಇಲ್ಲ. ಮೇಲ್ಮಟ್ಟದ ಜಲಾಗಾರ ಶಿಥಿಲಗೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಗ್ರಾಮಸ್ಥರು ಅನುಭವಿಸುತ್ತಿದ್ದಾರೆ. ಉದ್ಯಾನಕ್ಕೆ ಮೀಸಲಿಟ್ಟ ಜಾಗೆ ತ್ಯಾಜ್ಯಸಂಗ್ರಹಣೆ ತೊಟ್ಟಿಯಾಗುತ್ತಿದೆ ಗ್ರಾಮದ ಯುವಕ ಚನ್ನವೀರ ಮುಂಡಗೋಡ ದೂರಿದರು.

ಗ್ರಾಮ ಪಂಚಾಯ್ತಿ, ಸರ್ಕಾರಿ ಆಸ್ಪತ್ರೆ ಕಟ್ಟಡಗಳು ಪಾಳು ಬಿದ್ದಿವೆ. ಇವುಗಳ ಸುಧಾರಣೆ ಮೂಲಕ ಬಳಕೆಗೆ ಅನುಕೂಲ ಕಲ್ಪಿಸಬೇಕು.ಕೆಲವು ವರ್ಷಗಳ ಹಿಂದೆ ನಿಪ್ಪಾಣಿ ಭಾಗದ ಕುರಿಗಾಹಿಗಳುಅಲೆಮಾರಿ ಬದುಕಿಗೆ ಮುಕ್ತಿ ನೀಡಿ ಶಿವಪುರ ಗ್ರಾಮವ್ಯಾಪ್ತಿಯಲ್ಲಿ ಜಮೀನು ಖರೀದಿಸಿ ವ್ಯವಸಾಯ ಮಾಡುತ್ತಿದ್ದಾರೆ ಎಂದುಮರಿಸ್ವಾಮಿ ಹಿರೇಮಠ, ಮಹೇಂದ್ರಪ್ಪ ವಡ್ಡರ, ರಾಮನಗೌಡ ಪಾಟೀಲ, ಲಕ್ಷ್ಮಣ ವಡ್ಡರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.