ADVERTISEMENT

‘ಸ್ಮಾರ್ಟ್’ ಆಗುತ್ತಾ ಹಾವೇರಿ ‘ಸಿಟಿ’

ಸಂತೋಷ ಜಿಗಳಿಕೊಪ್ಪ
Published 29 ನವೆಂಬರ್ 2024, 5:23 IST
Last Updated 29 ನವೆಂಬರ್ 2024, 5:23 IST
ಹಾವೇರಿ ನಗರದ ಮುಖ್ಯರಸ್ತೆ
ಹಾವೇರಿ ನಗರದ ಮುಖ್ಯರಸ್ತೆ   

ಹಾವೇರಿ: ಅಸಮರ್ಪಕ ಚರಂಡಿ, ಸಮಯಕ್ಕೆ ಸರಿಯಾಗಿ ಬಾರದ ಕುಡಿಯುವ ನೀರು, ಶಿಸ್ತುಬದ್ಧ ಯೋಜನೆ ಇಲ್ಲದ ಬಡಾವಣೆಗಳು, ರಸ್ತೆಯಲ್ಲಿ ಹೆಚ್ಚಾದ ಗುಂಡಿಗಳು... ಹೀಗೆ ನಾನಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ಸ್ಮಾರ್ಟ್ ಸಿಟಿ’ ಆಗಲು ಹಾವೇರಿ ನಗರ ಮೊದಲ ಹೆಜ್ಜೆ ಇಟ್ಟಿದೆ.

‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಎಂದು ಕರೆಯಿಸಿಕೊಳ್ಳುವ ಹಾವೇರಿ ನಗರವನ್ನು ಈ ಬಾರಿ ‘ಸ್ಮಾರ್ಟ್‌ ಸಿಟಿ ಯೋಜನೆ’ಯ ನಗರಗಳ ಪಟ್ಟಿಯಲ್ಲಿ ಸೇರಿಸಲು ಜಿಲ್ಲಾಡಳಿತದಿಂದ ಪ್ರಯತ್ನ ಶುರುವಾಗಿದೆ. ಯೋಜನೆಗೆ ಆಯ್ಕೆಯಾಗಲು ಇರುವ ಮಾನದಂಡಗಳ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.

ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರಗಳಿಗೆ ವಿಶೇಷ ಅನುದಾನ ನೀಡಲಾಗುತ್ತಿದೆ. ಬೆಂಗಳೂರು, ತುಮಕೂರು, ಬೆಳಗಾವಿ, ಮಂಗಳೂರು ಸೇರಿದಂತೆ ಹಲವು ನಗರಗಳು ‘ಸ್ಮಾರ್ಟ್ ಸಿಟಿ’ ಯೋಜನೆ ಪಟ್ಟಿಗೆ ಸೇರಿವೆ. ಈ ನಗರಗಳಲ್ಲಿ ಕೆಲ ಕಾಮಗಾರಿಗಳು ಮುಗಿದಿದ್ದು, ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ.

ADVERTISEMENT

‘2025–26 ಅಥವಾ 2026–27ನೇ ಸಾಲಿನ ನಗರಗಳ ಪಟ್ಟಿಯಲ್ಲಿ ಹಾವೇರಿ ಸೇರಿಸಬೇಕು’ ಎಂದು ಪಣ ತೊಟ್ಟಿರುವ ಶಾಸಕ ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು, ಈ ಸಂಬಂಧ ಹಲವು ಬಾರಿ ಸಭೆಗಳನ್ನು ನಡೆಸಿ ಚರ್ಚಿಸಿದ್ದಾರೆ.

‘ಹಾವೇರಿ ನಗರವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸಬೇಕಿದೆ. ಈಗಾಗಲೇ ಹಲವು ಯೋಜನೆಗಳಡಿ ರಸ್ತೆ ಹಾಗೂ ಇತರೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಆದರೆ, ಕೆಲವರ ನಿಷ್ಕಾಳಜಿ ಹಾಗೂ ನಿರ್ಲಕ್ಷ್ಯದಿಂದ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಇದಕ್ಕೆ ಪರಿಹಾರವಾಗಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅನುದಾನ ಪಡೆಯಲು ಪ್ರಯತ್ನಿಸಲಾಗುತ್ತಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ಮಾರ್ಟ್ ಸಿಟಿ ಯೋಜನೆಯಡಿ ಹಾವೇರಿ ನಗರ ಆಯ್ಕೆಯಾದರೆ, ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಲಭ್ಯವಾಗುತ್ತದೆ. ಅದೇ ಅನುದಾನ ಬಳಸಿಕೊಂಡು, ಮೂಲ ಸೌಕರ್ಯ ಕಲ್ಪಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ ಎಷ್ಟು ನಗರಗಳಿಗೆ ಸ್ಮಾರ್ಟ್ ಸಿಟಿ ಯೋಜನೆ ನೀಡಬೇಕು? ಎಂಬುದನ್ನು ಕೇಂದ್ರ ಸರ್ಕಾರ ತೀರ್ಮಾನಿಸುತ್ತದೆ. ಬಳಿಕ, ನಗರಾಭಿವೃದ್ಧಿ ಇಲಾಖೆಯು ರಾಜ್ಯದ ಯಾವ ನಗರಕ್ಕೆ ಯೋಜನೆ ನೀಡಬೇಕು? ಎಂಬುದನ್ನು ನಿರ್ಧರಿಸುತ್ತದೆ’ ಎಂದು ಅವರು ಹೇಳಿದರು.

‘ಹಾವೇರಿ ನಗರಕ್ಕೆ ಯೋಜನೆ ತರಬೇಕು ಎಂಬುದು ಜಿಲ್ಲಾಡಳಿತದ ಇಚ್ಛೆಯಾಗಿದೆ. ಹೀಗಾಗಿ, ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಿದ್ದೇವೆ. ಪ್ರಸ್ತಾವ ಸಿದ್ಧವಾದ ಬಳಿಕ, ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸುತ್ತೇವೆ. ಬಳಿಕ, ಇಲಾಖೆಯೇ ತೀರ್ಮಾನ ಕೈಗೊಳ್ಳಲಿದೆ. ಹಾವೇರಿ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕರೂ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಮೀಕ್ಷೆಗೆ ಸೂಚನೆ: ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಿದರೆ, ನಗರದಲ್ಲಿ ಯಾವೆಲ್ಲ ಕಾಮಗಾರಿಗಳನ್ನು ನಡೆಸಬಹುದು? ಯಾವ ಮೂಲ ಸೌಕರ್ಯಗಳ ಅಗತ್ಯತೆ ಹೆಚ್ಚಿದೆ? ಎಂಬ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಸಮೀಕ್ಷೆ ಆರಂಭವಾಗಿದೆ.

‘ಹಾವೇರಿ ನಗರದ ವಿನ್ಯಾಸ, ಜನಸಂಖ್ಯೆ, ಮೂಲ ಸೌಕರ್ಯಗಳ ಲಭ್ಯತೆ, ತೆರಿಗೆ ವಸೂಲಿ, ಆದಾಯ ಮೂಲಗಳ ಸೃಷ್ಟಿ, ಕುಡಿಯುವ ನೀರಿನ ಲಭ್ಯತೆ, ಭದ್ರತೆ, ಸಾರಿಗೆ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ಹೊಣೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗಿದೆ. ಅವರ ಸಮೀಕ್ಷೆಯಿಂದ ಬಂದ ಮಾಹಿತಿಗಳನ್ನು ಅವಲೋಕಿಸಿ ಪ್ರಾಥಮಿಕ ಪ್ರಸ್ತಾವ ಸಿದ್ಧಪಡಿಸಬೇಕು. ಯೋಜನೆಗೆ ಆಯ್ದೆಯಾದರೆ, ಅಂತಿಮ ಪ್ರಸ್ತಾವ ಸಲ್ಲಿಸಬೇಕು’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ನಗರಸಭೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಮಾಹಿತಿ ಕಲೆ ಹಾಕಬೇಕು. ಅದೇ ಮಾಹಿತಿಯನ್ನು ಪ್ರಸ್ತಾವದಲ್ಲಿ ಸೇರಿಸಬೇಕು. ಹಾವೇರಿ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಏಕೆ ಬೇಕು? ಎಂಬುದಕ್ಕೆ ಪ್ರಸ್ತಾವದಲ್ಲಿ ಉತ್ತರ ಇರುವಂತೆ ನೋಡಿಕೊಳ್ಳಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವ ಸಿದ್ಧಪಡಿಸಬೇಕು’ ಎಂದು ಹೇಳಿದರು.

ಹಾವೇರಿ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ತರಲು ಪ್ರಯತ್ನ ಆರಂಭಿಸಲಾಗಿದೆ. ಸಮೀಕ್ಷೆ ಶುರುವಾಗಿದ್ದು ಇದು ಮೊದಲ ಹೆಜ್ಜೆ
ಮಮತಾ ಯೋಜನಾ ನಿರ್ದೇಶಕಿ ಜಿಲ್ಲಾ ನಗರಾಭಿವೃದ್ಧಿ ಕೋಶ
ಹಾವೇರಿ ನಗರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಸ್ಮಾರ್ಟ್ ಸಿಟಿ ಯೋಜನೆಯ ಅಗತ್ಯವಿದೆ. ಕೇಂದ್ರ ಸರ್ಕಾರದ ಗಮನ ಸೆಳೆದು ಸ್ಮಾರ್ಟ್ ಸಿಟಿ ಯೋಜನೆ ನಗರಗಳ ಪಟ್ಟಿಯಲ್ಲಿ ಹಾವೇರಿ ಸೇರಿಸಲು ಪ್ರಯತ್ನ ಆರಂಭಿಸಿದ್ದೇವೆ
ರುದ್ರಪ್ಪ ಲಮಾಣಿ ಶಾಸಕ

ಏನಿದು ಸ್ಮಾರ್ಟ್ ಸಿಟಿ ಯೋಜನೆ ?

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯೂ ಒಂದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲುದಾರಿಕೆ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನವಾಗುತ್ತದೆ. ನಗರಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಸಾರಿಗೆ ಕುಡಿಯುವ ನೀರು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲು ಅವಕಾಶವಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹಣದ ಜೊತೆಗೆ ರಾಜ್ಯ ಸರ್ಕಾರವೂ ತನ್ನ ಪಾಲು ಸೇರಿ ನಗರಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಸ್ಮಾರ್ಟ್ ಸಾರಿಗೆ ಸ್ಮಾರ್ಟ್ ಆರೋಗ್ಯ ಸ್ಮಾರ್ಟ್ ಘನತ್ಯಾಜ್ಯ ನಿರ್ವಹಣೆ ಸ್ಮಾರ್ಟ್ ವಸತಿ ಹಾಗೂ ಸ್ಮಾರ್ಟ್ ಗುಣಮಟ್ಟ ಚಾಲಿತ ಕಾಮಗಾರಿಗಳನ್ನು ಕೈಗೊಳ್ಳಲು ಸ್ಮಾರ್ಟ್ ಸಿಟಿ ಯೋಜನೆಯಡಿ ಅವಕಾಶವಿದೆ.

ಪೊಲೀಸ್ ಇಲಾಖೆಯಿಂದ ಮಾಹಿತಿ ಸಲ್ಲಿಕೆ

‘ಹಾವೇರಿ ನಗರದ ಭದ್ರತೆಗೆ ಯಾವೆಲ್ಲ ಸೌಕರ್ಯಗಳ ಅಗತ್ಯವಿದೆ’ ಎಂಬುದರ ಬಗ್ಗೆ ಜಿಲ್ಲಾ ಪೊಲೀಸರು ಈಗಾಗಲೇ ಮಾಹಿತಿ ಸಲ್ಲಿಸಿದ್ದಾರೆ. ‘ಮಹಿಳೆಯರ ರಕ್ಷಣೆಗಾಗಿ ಮಹಿಳಾ ಸ್ನೇಹಿ ವ್ಯವಸ್ಥೆ ರೂಪಿಸಲು ನಗರದ ಹಲವು ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ಹಾಗೂ ಅಪರಾಧಗಳ ತಡೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಯೋಜನೆಯಡಿ ಅನುದಾನ ಬೇಕು’ ಎಂದು ಪೊಲೀಸರು ಪ್ರಸ್ತಾವದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.