
ಹಾವೇರಿ: ‘ನನ್ನನ್ನು ಪ್ರೀತಿಸುತ್ತಿದ್ದ ಶರತ್ ನೀಲಪ್ಪನವರ ಎಂಬಾತ, ಗರ್ಭಿಣಿ ಮಾಡಿ ಮದುವೆಯಾಗದೇ ವಂಚಿಸಿದ್ದಾನೆ’ ಎಂದು ಆರೋಪಿಸಿ ಸಿಂಧು ಪರಮೇಶಪ್ಪ ಪರಮಣ್ಣನವರ (25) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಂಬಂಧ, ಆರೋಪಿ ಸೇರಿ 11 ಮಂದಿ ವಿರುದ್ಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ.
ಶಂಕ್ರಿಪುರ ಗ್ರಾಮದ ಯುವತಿ ಸಿಂಧು ಅವರು ಮನೆಯಲ್ಲಿ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿಗೆ ಶರತ್ ಹಾಗೂ ಆತನ ಮನೆಯವರು ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದರು. ರಾಣೆಬೆನ್ನೂರು ತಾಲ್ಲೂಕಿನ ಕುದರಿಹಾಳದಲ್ಲಿರುವ ಯುವಕನ ಮನೆ ಎದುರು ಯುವತಿಯ ಮೃತದೇಹವಿಟ್ಟು ಶನಿವಾರ ತಡರಾತ್ರಿ ಪ್ರತಿಭಟನೆ ನಡೆಸಿದ್ದರು.
ಸ್ಥಳಕ್ಕೆ ಹೋಗಿದ್ದ ಪೊಲೀಸ್ ಹಿರಿಯ ಅಧಿಕಾರಿಗಳು, ಸಂಬಂಧಿಕರ ಮನವೋಲಿಸಿ ಮೃತದೇಹವನ್ನು ಬ್ಯಾಡಗಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಶನಿವಾರ ಮೃತದೇಹದ ಪರೀಕ್ಷೆ ಮಾಡಿಸಲಾಗಿದೆ. ಯುವತಿಯ ಸಹೋದರ ನೀಡಿರುವ ದೂರು ಆಧರಿಸಿ ಆರೋಪಿ ಶರತ್ ಸೇರಿ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
‘ಯುವತಿಯನ್ನು ಪ್ರೀತಿಸಿ ಗರ್ಭಿಣಿ ಮಾಡಿ ಮದುವೆಯಾಗದೇ ವಂಚಿಸಿರುವ ಹಾಗೂ ಹಣದ ಆಮಿಷವೊಡ್ಡಿ ಕೊಲೆ ಬೆದರಿಕೆ ಹಾಕಿರುವ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಕುದರಿಹಾಳದ ಶರತ್ ಸುರೇಶ ನೀಲಪ್ಪನವರ, ಅವರ ತಂದೆ ಸುರೇಶ, ತಾಯಿ ಪುಟ್ಟವ್ವ, ತಂಗಿ ಕಾವ್ಯಾ, ಕುಟುಂಬಸ್ಥರಾದ ಸಚಿನ್, ಚಂದ್ರಪ್ಪ, ರೋಹನ್, ರಾಜಪ್ಪ, ರವಿ ನಾಗಪ್ಪ ಉಪ್ಪಿನ, ಹಾಲಪ್ಪ ಮೈಲಪ್ಪ ಬಿಷ್ಟಣ್ಣನವರ ಹಾಗೂ ಹಲಗೇರಿಯ ಸ್ನೇಹಿತ ಶಿವನಗೌಡ ಶಂಕರಗೌಡ ಕಡೂರ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ದೂರಿನ ವಿವರ: ‘ಸಿಂಧು ಅವರು ಹಲಗೇರಿಯಲ್ಲಿರುವ ಸಂಬಂಧಿ ಮನೆಯಲ್ಲಿ ವಾಸವಿದ್ದರು. ರಾಣೆಬೆನ್ನೂರಿನ ಕಾಲೇಜೊಂದರಲ್ಲಿ ಬಿ.ಕಾಂ. ಓದುತ್ತಿದ್ದ ಶರತ್‌ನ ತಂಗಿ ಕಾವ್ಯಾ ಜೊತೆ ಸ್ನೇಹ ಬೆಳೆದಿತ್ತು. ತಂಗಿ ಮೂಲಕ ಶರತ್ ಪರಿಚಯವಾಗಿತ್ತು. ನಂತರ, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಹಲವು ಕಡೆ ಸುತ್ತಾಡಿದ್ದರು. ಮದುವೆಯಾಗುವುದಾಗಿ ಹೇಳಿದ್ದ ಶರತ್, ಲೈಂಗಿಕವಾಗಿ ಬಳಸಿಕೊಂಡಿದ್ದ. ಹೀಗಾಗಿ, ತಮ್ಮನ್ನು ಮದುವೆಯಾಗುವಂತೆ ಸಿಂಧು ಒತ್ತಾಯಿಸಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ನಾನು ಶ್ರೀಮಂತ. ಶ್ರೀಮಂತ ಹುಡುಗಿಯನ್ನಷ್ಟೇ ಮದುವೆಯಾಗುತ್ತೇನೆ’ ಎಂದಿದ್ದ ಶರತ್, ‘ನೀನು ಬೇರೆ ಹುಡುಗನ ಮದುವೆಯಾಗು. ಇಲ್ಲ ಯಾವುದಾದರೂ ಕೆರೆ–ಬಾವಿ ನೋಡಿಕೊ’ ಎಂದು ಸಿಂಧುಗೆ ಅವಮಾನ ಮಾಡಿದ್ದ. ತಂಗಿ ಕಾವ್ಯಾಗೆ ವಿಷಯ ತಿಳಿಸಿದಾಗ, ಅವಳು ಸಹ ಬೆದರಿಕೆ ಹಾಕಿದ್ದಳು. ಇತರೆ ಆರೋಪಿಗಳು ಸಹ ಹಣದ ಆಮಿಷವೊಡ್ಡಿ, ಕೊಲೆ ಬೆದರಿಕೆ ಹಾಕಿದ್ದರು.
ಇದರಿಂದ ನೊಂದ ಸಿಂಧು, ಶರತ್ ವಿರುದ್ಧ ದೂರು ನೀಡಲು ಅಕ್ಟೋಬರ್ 25ರಂದು ಬೆಳಿಗ್ಗೆ 10 ಗಂಟೆಗೆ ರಾಣೆಬೆನ್ನೂರು ಗ್ರಾಮೀಣ ಠಾಣೆಗೆ ಹೋಗಿದ್ದರು. ಠಾಣೆಗೆ ಬಂದಿದ್ದ ಶರತ್ ತಂದೆ ಹಾಗೂ ಇತರರು, ಸಿಂಧು ಹಾಗೂ ಅವರ ಪೋಷಕರನ್ನು ಠಾಣೆಯಿಂದ ಹೊರಗೆ ಕರೆತಂದಿದ್ದರು. ‘ಹಣ ಕೊಡುತ್ತೇವೆ. ಇಲ್ಲಿಂದ ಹೊರಟು ಹೋಗಿ. ದೂರು ಕೊಟ್ಟರೆ ಜೀವಂತ ಬಿಡುವುದಿಲ್ಲ’ ಎಂದು ಬೆದರಿಕೆಯೊಡ್ಡಿದ್ದರು. ಮೊಬೈಲ್ ಫೋನ್ ಕಸಿದುಕೊಂಡು ಎಲ್ಲ ಸಂದೇಶ ಹಾಗೂ ಫೋಟೊಗಳನ್ನು ಅಳಿಸಿಹಾಕಿದ್ದರು. ಇದರಿಂದ ಹೆದರಿ ಮನೆಗೆ ಹೋಗಿದ್ದ ಯುವತಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೃತ ಯುವತಿ ಕಡೆಯವರು ಏನೆಲ್ಲ ಆರೋಪ ಮಾಡಿ ದೂರು ಕೊಡುತ್ತಾರೆಯೋ ಎಲ್ಲದರ ಬಗ್ಗೆ ತನಿಖೆ ನಡೆಸಲಾಗುವುದುಯಶೋಧಾ ವಂಟಗೋಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ಪೊಲೀಸರ ವಿರುದ್ಧವೂ ಆರೋಪ’
‘ಯುವತಿ ಠಾಣೆಗೆ ಬಂದರೂ ದೂರು ಪಡೆಯದ ಪೊಲೀಸರು ಯುವಕ ಹಾಗೂ ಆತನ ಕುಟುಂಬದವರಿಗೆ ಸಹಕರಿಸಿ ರಾಜಿ ಸಂಧಾನಕ್ಕೆ ಅವಕಾಶ ನೀಡಿದ್ದ ಆರೋಪವಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಯುವತಿ ಸಂಬಂಧಿಕರು ಆಗ್ರಹಿಸಿದ್ದಾರೆ.
‘ಪೊಲೀಸರು ದೂರು ಪಡೆದಿದ್ದರೆ ಯುವತಿ ಬದುಕಿರುತ್ತಿದ್ದಳು. ಯುವಕ–ಆತನ ಮನೆಯವರು ಯುವತಿಗೆ ಬೆದರಿಕೆ ಹಾಕಿದ್ದರು. ಪೊಲೀಸರು ಆರೋಪಿಗಳಿಗೇ ಸಹಕರಿಸಿದ್ದರು. ಎಲ್ಲರ ಒಳಸಂಚಿನಿಂದ ಯುವತಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಪೊಲೀಸರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.