
ಹಾವೇರಿ: ‘ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬ ಆರೋಪದಡಿ ಶಾಲಾ ಶಿಕ್ಷಕರೊಬ್ಬರಿಗೆ ಚಪ್ಪಲಿ ಹಾರ ಹಾಕಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಬುಧವಾರ ನಡೆದಿದೆ.
ಸವಣೂರು ಪಟ್ಟಣದ ಉರ್ದು ಶಾಲೆಯೊಂದರ ಶಿಕ್ಷಕ ಜಗದೀಶ್ ಎಂಬುವವರ ಕೊರಳಲ್ಲಿ ಚಪ್ಪಲಿ ಹಾರ ಹಾಕಿದ್ದ ಪೋಷಕರು ಹಾಗೂ ಸ್ಥಳೀಯರು, ಶಾಲೆಯಿಂದ ಠಾಣೆಯವರೆಗೂ ಮೆರವಣಿಗೆ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
‘ಶಾಲೆಯ ವಿದ್ಯಾರ್ಥಿನಿ ಮೇಲೆ ಶಿಕ್ಷಕ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವಿದೆ. ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಕೆಯನ್ನು ವಿಚಾರಿಸಿದಾಗ, ಶಿಕ್ಷಕ ದೌರ್ಜನ್ಯ ಎಸಗಿದ್ದ ಸಂಗತಿ ಪೋಷಕರಿಗೆ ಗೊತ್ತಾಗಿದೆ. ಅದನ್ನು ಪ್ರಶ್ನಿಸಲು ಪೋಷಕರು ಬುಧವಾರ ಶಾಲೆಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಪೋಷಕರು ಹಾಗೂ ಶಿಕ್ಷಕನ ನಡುವೆ ಜಗಳವಾಗಿದೆ. ಸಿಟ್ಟಾದ ಪೋಷಕರು, ಶಿಕ್ಷಕನನ್ನು ಹಿಡಿದು ಥಳಿಸಿದ್ದಾರೆ. ನಂತರ, ಚಪ್ಪಲಿ ಹಾರ ಹಾಕಿ ಠಾಣೆಯವರೆಗೂ ಮೆರವಣಿಗೆ ಮಾಡಿದ್ದಾರೆ’ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಘಟನೆ ಬಗ್ಗೆ ಮಾಹಿತಿ ನೀಡಿದ ಅಂಜುಮನ್ ಕಮಿಟಿ ಮುಖಂಡ ಸಲೀಂ, ‘ಶಿಕ್ಷಕನ ವರ್ತನೆಯಿಂದ ಬೇಸತ್ತು ಸಾರ್ವಜನಿಕರು ಮೆರವಣಿಗೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಬಾಲಕಿಯೊಬ್ಬಳಿಗೆ ಹೊಟ್ಟೆ ನೋವು, ಜ್ವರ ಬಂದಿತ್ತು. ಬಾಲಕಿಯನ್ನು ವಿಚಾರಿಸಿದಾಗ ಜಗದೀಶ್ ದೌರ್ಜನ್ಯ ಮಾಡಿರುವುದು ಗೊತ್ತಾಗಿದೆ. ಶಾಲೆಯ 7 ಬಾಲಕಿಯರ ಮೇಲೆ ಶಿಕ್ಷಕ ದೌರ್ಜನ್ಯ ಎಸಗಿರುವ ಮಾಹಿತಿಯಿದೆ’ ಎಂದರು.
ಆರೋಪಿ ಶಿಕ್ಷಕ ಸದ್ಯ ಪೊಲೀಸ್ ಠಾಣೆಯಲ್ಲಿದ್ದಾನೆ. ಆತನ ಮೇಲೆ ದೂರು ನೀಡಲು ಪೋಷಕರು ನಿರಾಕರಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದಲೇ ದೂರು ದಾಖಲಿಸುವಂತೆ ಒತ್ತಾಯಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.