ತಿಳವಳ್ಳಿಯ ಪ್ರಮುಖ ಬೀದಿಗಳಲ್ಲಿ ಭಾನುವಾರ ಮೊಹರಂ ಹಬ್ಬದ ಪ್ರಯುಕ್ತ ಪಂಜಾಗಳ ಮೆರವಣಿಗೆ ನಡೆಯಿತು.
ತಿಳವಳ್ಳಿ: ಗ್ರಾಮದಲ್ಲಿ ಭಾನುವಾರ ಹಿಂದೂ ಮತ್ತು ಮುಸ್ಲಿಮರು ಮೊಹರಂ ಹಬ್ಬದ 10ನೇ ದಿನದ ಅಂಗವಾಗಿ ಮೆರವಣಿಗೆ ನಡೆಸಿ, ಸಾರ್ವಜನಿಕರಿಗೆ ತಂಪು ಪಾನೀಯ, ಚೊಂಗಿ ಹಂಚುವ ಮೂಲಕ ಮೊಹರಂ ಆಚರಿಸಿದರು.
ಮೊಹರಂ ಹಬ್ಬದ ಅಂಗವಾಗಿ ಅಂಜುಮನ ರಸ್ತೆ ಹಾಗೂ ಕೊಪ್ಪಗೊಂಡನ ಕೊಪ್ಪದ ದರ್ಗಾದಲ್ಲಿ ಸಂಪ್ರದಾಯಿಕ ಕೆಂಡ ಹಾಯುವ ಸಂಪ್ರದಾಯ ನಡೆಯಿತು. ನಂತರ ಅಲೈ ದೇವರನ್ನು ಹೊತ್ತ ಪಲ್ಲಕ್ಕಿಯಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಪ್ರತಿವರ್ಷದಂತೆ ಈ ವರ್ಷವೂ ಅಲೈ ದೇವರನ್ನು ಹೊತ್ತ ಪಲ್ಲಕ್ಕಿಯನ್ನು ಹಿಂದೂ ಧರ್ಮಿಯರು ಹೊರುವ ಮೂಲಕ ಸೌಹಾರ್ದ ಮೆರೆದರು. ಮೆರವಣಿಗೆ ಸಾಗಿದ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರು ದೇವರ ದರ್ಶನ ಪಡೆದರು. ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೇ ಸಾರ್ವಜನಿಕರು ದೇವರಿಗೆ ಪೂಜೆ ಸಲ್ಲಿಸಿದರು.
ಮುಸ್ಲಿಂ ಬಾಂಧವರ ಮನೆಗಳಲ್ಲಿ ಆಚರಣೆ ಪ್ರತೀಕವಾಗಿ ಶರಬತ್ತು, ಚೊಂಗಿ ತಯಾರಿಸಿ ಪರಸ್ಪರ ವಿನಿಮಯ ಹಾಗೂ ಸಾರ್ವಜನಿಕರಿಗೆ ಹಂಚುವುದು ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.