ADVERTISEMENT

ಹಾವೇರಿ | ಭಾರಿ ಮಳೆ–ಗಾಳಿ; ಸಿಡಿಲು ಬಡಿದು 4 ಕುರಿ ಸಾವು

ಪಿಟಿಐ
Published 18 ಏಪ್ರಿಲ್ 2024, 14:19 IST
Last Updated 18 ಏಪ್ರಿಲ್ 2024, 14:19 IST
<div class="paragraphs"><p>ಹಾವೇರಿಯಲ್ಲಿ ಗುರುವಾರ ಸಂಜೆ ಸುರಿದ ಮಳೆ</p></div>

ಹಾವೇರಿಯಲ್ಲಿ ಗುರುವಾರ ಸಂಜೆ ಸುರಿದ ಮಳೆ

   

ಹಾವೇರಿ: ನಗರದ ಹೊರವಲಯದ ಅಜ್ಜಯ್ಯನ ಗುಡಿ ಸಮೀಪ ಲೋಕಸಭೆ ಚುನಾವಣೆ ಅಂಗವಾಗಿ ತೆರೆದಿದ್ದ ಚೆಕ್‌ ಪೋಸ್ಟ್‌ ಕೇಂದ್ರದ ತಗಡಿನ ಶೀಟುಗಳು ಭಾರಿ ಮಳೆ–ಗಾಳಿಯಿಂದ ಗುರುವಾರ ಹಾರಿ ಹೋಗಿವೆ. ಕುರ್ಚಿ, ಟೇಬಲ್‌, ಬಟ್ಟೆ ಚೆಲ್ಲಾಪಿಲ್ಲಿಯಾಗಿ, ಕೇಂದ್ರ ಅಸ್ತವ್ಯಸ್ತಗೊಂಡಿದೆ. 

ತಾಲ್ಲೂಕಿನ ದಿಡಗೂರ ಗ್ರಾಮದಲ್ಲಿ ಸಿಡಿಲು ಬಡಿದು ನಾಲ್ಕು ಕುರಿ ಮೃತಪಟ್ಟಿವೆ. ಸಿಡಿಲಿನಿಂದಾಗಿ ಗ್ರಾಮದ ತೆಂಗಿನ ಮರವೊಂದು ಹೊತ್ತಿ ಉರಿದಿದೆ. ಹಾವೇರಿ ನಗರದಲ್ಲಿ ಸಂಜೆ 4.15ಕ್ಕೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಸಿಡಿಲು, ಗುಡುಗಿನ ಆರ್ಭಟ ಜೋರಾಗಿತ್ತು. 

ADVERTISEMENT

ಬಿಜೆಪಿ ಸಮಾವೇಶ ಮೊಟುಕು

ಹಾವೇರಿ ನಗರದ ಕೊಳ್ಳಿ ಪಾಲಿಟೆಕ್ನಿಕ್‌ ಸಮೀಪ ಆಯೋಜಿಸಿದ್ದ ‘ಬಿಜೆಪಿ ಮಹಿಳಾ ಸಮಾವೇಶ’ ಮಳೆಯಿಂದ ಅರ್ಧಕ್ಕೆ ಮೊಟಕುಗೊಂಡಿತು. ಚುನಾವಣೆಯ ಬಿಜೆಪಿ ತಾರಾ ಪ್ರಚಾರಕಿ ಚಿತ್ರನಟಿ ತಾರಾ ಭಾಷಣವನ್ನು ಮೊಟಕುಗೊಳಿಸಿ, ವೇದಿಕೆಯಲ್ಲಿದ್ದ ಗಣ್ಯರೊಂದಿಗೆ ಕಾರಿನಲ್ಲಿ ಹೊರಟು ಹೋದರು. ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರು ಕುರ್ಚಿಗಳನ್ನೇ ಕೊಡೆಗಳನ್ನಾಗಿ ತಲೆಯ ಮೇಲೆ ಹಿಡಿದುಕೊಂಡು, ಆಶ್ರಯ ಪಡೆದರು. 

ಹಾವೇರಿ ಶಿವಲಿಂಗ ನಗರದ ಶಿವಲಿಂಗೇಶ್ವರ ವೃತ್ತದಲ್ಲಿ ಮಳೆ ಸುರಿದ ಬಳಿಕ ಚರಂಡಿಯಲ್ಲಿ ತುಂಬಿಕೊಂಡಿದ್ದ ತ್ಯಾಜ್ಯವೆಲ್ಲ ರಸ್ತೆ ತುಂಬ ಹರಿದಿದೆ. ನಗರಸಭೆ ಸಿಬ್ಬಂದಿ ಚರಂಡಿ ಸ್ವಚ್ಛಗೊಳಿಸದ ಪರಿಣಾಮ ಹೂಳು ತುಂಬಿಕೊಂಡಿತ್ತು. ಮಳೆ ಬಂದ ಕೂಡಲೇ ಎಲ್ಲ ಕಸ ರಸ್ತೆ ಮೇಲೆ ಬಂದಿದೆ. ಪರಿಣಾಮ ವಾಹನ ಸವಾರರು, ಸ್ಥಳೀಯರು ಪರದಾಡುವಂತಾಯಿತು. ನಗರದಲ್ಲಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕೆಲಕಾಲ ಕಡಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.