ADVERTISEMENT

ಶಿಗ್ಗಾವಿ: ಹಿಂದೂ ಗಣಪತಿ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:47 IST
Last Updated 13 ಅಕ್ಟೋಬರ್ 2025, 2:47 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ನೆಹರು ಗಾರ್ಡನ್‌ದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆ ಭಾನುವಾರ ಜರುಗಿತು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ನೆಹರು ಗಾರ್ಡನ್‌ದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆ ಭಾನುವಾರ ಜರುಗಿತು   

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರದ ನೆಹರು ಗಾರ್ಡನ್‌ದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ ನಡೆಯಿತು.

ಪ್ರತಿಷ್ಠಾಪನಾ ಸ್ಥಳದಿಂದ ಆರಂಭವಾದ ಮೆರವಣಿಗೆ, ಸಿಂಪಿಗಲ್ಲಿ, ಪೇಟೆ ಮುಖ್ಯರಸ್ತೆ, ನಾಡಕಚೇರಿ ರಸ್ತೆ, ರೇಣುಕಾ ಚಿತ್ರಮಂದಿರ, ಕೊಟ್ಟಿಗೇರಿ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಬಂದ್ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೆರವಣಿಗೆ ಮಾರ್ಗದಲ್ಲಿ ಉಪಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.

ADVERTISEMENT

ಮೆರವಣಿಗೆ ಅಂಗವಾಗಿ ಪಟ್ಟಣದ ಹಲವು ಕೈೆಗಳಲ್ಲಿ ಕೇಸರಿ ಬಣ್ಣದ ಧ್ವಜಗಳು ರಾರಾಜಿಸುತ್ತಿದ್ದವು. ಡಿ.ಜೆ. (ಡಿಸ್ಕ್‌ ಜಾಕಿ) ಎದುರು ಯುವಕರು ನೃತ್ಯ ಮಾಡಿ ಸಂಭ್ರಮಿಸಿದರು. 

ಪ್ರತಿಷ್ಠಾ‍ಪನಾ ಸ್ಥಳದಿಂದ ಆರಂಭವಾದ ಮೆರವಣಿಗೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಕೆಂಡದಮಠದ ರೇವಣಸಿದ್ದೆಶ್ವರ ಸ್ವಾಮೀಜಿ ಹಾಗೂ ಸಿದ್ದಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  

ಪೊಲೀಸರ ಬಿಗಿ ಭದ್ರತೆ:

ಮೆರವಣಿಗೆಯಲ್ಲಿ ಹೆಚ್ಚು ಜನರು ಸೇರಿದ್ದರಿಂದ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಜಿಲ್ಲಾ ಎಸ್‌ಪಿ ಯಶೋಧಾ ಒಂಟಗೋಡಿ ನೇತೃತ್ವದಲ್ಲಿ 1,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು. ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಡ್ರೋನ್‌ ಕ್ಯಾಮೆರಾದ ಕಣ್ಗಾವಲು ಸಹ ಇತ್ತು.

‘ಜನಪ್ರತಿನಿಧಿಗಳನ್ನು ಕೇಳದೇ ನಿರ್ಬಂಧ’

ಬಂಕಾಪುರ: ‘ಈ ವರ್ಷದ ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಜನಪ್ರತಿನಿಧಿಯನ್ನು ಕೇಳದೇ ಏಕಾಏಕಿ ಡಿ.ಜೆ. (ಡಿಸ್ಕ್ ಜಾಕಿ) ಬಳಕೆ ಮೇಲೆ ನಿರ್ಬಂಧ ಹೇರಲಾಗಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು. ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದ ಅವರು ‘ಡಿ.ಜೆ.ಯಿಂದ ತೊಂದರೆ ಆಗುತ್ತದೆ ಎಂದಾದರೆ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಅದನ್ನು ಬಿಟ್ಟು ಏಕಾಏಕಿ ನಿರ್ಬಂಧ ಹೇರುವುದು ಸರಿಯಲ್ಲ’ ಎಂದರು. ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ ‘ಹುಬ್ಬಳ್ಳಿ–ಧಾರವಾಡ ಸೇರಿದಂತೆ ಬೇರೆ ಕಡೆ ಗಣೇಶ ವಿಸರ್ಜನೆಗೆ ತೊಂದರೆಯಾಗಿಲ್ಲ. ಹಾವೇರಿ ಜಿಲ್ಲೆಯಲ್ಲಿ ಅನಗತ್ಯ ಆದೇಶಗಳನ್ನು ಮಾಡಿದ್ದರಿಂದ ಪೊಲೀಸರಿಗೂ ಕಷ್ಟವಾಗಿತ್ತು. ಈಗ ಅವರೂ ಸಹಕಾರ ಮಾಡಿದ್ದಾರೆ ನಾವೂ ಸಹಕಾರ ಮಾಡಿದ್ದೇವೆ. ಹೀಗಾಗಿ ಗಣೇಶನ ವಿಸರ್ಜನೆ ಭಕ್ತಿ ಭಾವದಿಂದ ಸೌಹಾರ್ದತೆಯಿಂದ ನಡೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.