ADVERTISEMENT

ಮತದಾನದ ಆಸಕ್ತಿ ಕಳೆದುಕೊಂಡರೆ ಅಪಾಯ: ಬಸನಗೌಡ ಪಾಟೀಲ ಯತ್ನಾಳ

‘ಧರ್ಮ ಧ್ವಜ ಅಭಿಯಾನ–2025’ ಕಾರ್ಯಕ್ರಮದ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:15 IST
Last Updated 22 ನವೆಂಬರ್ 2025, 4:15 IST
ಹಾನಗಲ್ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಧರ್ಮ ಧ್ವಜ ಅಭಿಯಾನ–2025’ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು
ಹಾನಗಲ್ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಧರ್ಮ ಧ್ವಜ ಅಭಿಯಾನ–2025’ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು   

ಹಾನಗಲ್: ‘ಹಿಂದೂಗಳು ಧೈರ್ಯವಾಗಿ ಬದುಕಬೇಕು. ಯಾರಿಗೂ ಅಂಜುವ ಪ್ರಶ್ನೆಯೇ ಇಲ್ಲ. ಮುಂಬರುವ ಚುನಾವಣೆಗಳಲ್ಲಿ ಹಿಂದೂಗಳು ಮತದಾನದ ಆಸಕ್ತಿ ಕಳೆದುಕೊಳ್ಳಬಾರದು. ಆಕಸ್ಮಾತ್, ಕಳೆದುಕೊಂಡರೆ ಅಪಾಯಕ್ಕೆ ಆಹ್ವಾನ ನೀಡಿದಂತೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿಯ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಲಿಂ. ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಧರ್ಮ ಧ್ವಜ ಅಭಿಯಾನ–2025’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ನಾನು ಲೋಕಸಭಾ ಸದಸ್ಯನಾಗಿದ್ದಾಗ, ದೇಶದಲ್ಲಿ ಒಂದೇ ಪಕ್ಷ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೆ. ಆದರೆ, ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಪಕ್ಷವೊಂದೇ ಅಧಿಕಾರದ ಚುಕ್ಕಾಣಿ ಹಿಡಿಯಿತು. ಇಂದು ದೇಶದಾದ್ಯಂತ ಹಿಂದೂಗಳು ಜಾಗೃತರಾಗಿದ್ದಾರೆ. ಹಾವೇರಿ–ಗದಗ ಲೋಕಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ನಿರಂತರವಾಗಿ ಗೆಲ್ಲುತ್ತಿರುವುದು ಇದಕ್ಕೆ ಸಾಕ್ಷಿ’ ಎಂದು ಹೇಳಿದರು.

ADVERTISEMENT

‘ನನ್ನ ಮೇಲೆ ಸಾಲು ಸಾಲು ಪ್ರಕರಣ ದಾಖಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸಲು ರಾಜ್ಯ ಸರ್ಕಾರ ಕಸರತ್ತು ನಡೆಸಿತ್ತು. ಆದರೆ, ಅದು ವಿಫಲವಾಗಿದೆ. ಹಾನಗಲ್‌ನಲ್ಲಿದ್ದ ಸಿ.ಎಂ. ಉದಾಸಿ ಅವರು ರಾಜ್ಯ ಕಂಡ ಉತ್ತಮ ಸಚಿವ. ಅವರಂತ ಕಳಕಳಿಯ ಜನಪ್ರತಿನಿಧಿಯನ್ನು ನಾನು ಎಂದಿಗೂ ಕಂಡಿಲ್ಲ. ಕೋವಿಡ್ ಸಮಯದಲ್ಲಿ ಪೊಟ್ಟಣ ಹಂಚಿದವರಿಗೆ ಮತ ಹಾಕುವುದನ್ನು ಹಾನಗಲ್ ಜನರು ನಿಲ್ಲಿಸಬೇಕು. ಹಿಂದೂತ್ವದ ಪರವಿರುವ ಅಭ್ಯರ್ಥಿಗಳಿಗೆ ಒಗ್ಗಟ್ಟಾಗಿ ಮತ ನೀಡಿ’ ಎಂದು ತಿಳಿಸಿದರು.

‘ಹಿಂದೂಗಳ ವಿರುದ್ಧ ಮಾತನಾಡುವ ಸ್ವಾಮೀಜಿಗಳ ಕಾಲಿಗೆ ನಮಸ್ಕಾರ ಮಾಡಬಾರದು. ನರೇಂದ್ರ ಮೋದಿಯವರು ಭ್ರಷ್ಟಮುಕ್ತ ಪ್ರಧಾನಿಯಾಗಿ ದೇಶಕ್ಕೆ ಸುಭದ್ರ ಸರ್ಕಾರ ನೀಡುತ್ತಿದ್ದಾರೆ. ದೇಶವು ಪ್ರಗತಿಯತ್ತ ಸಾಗಿದೆ. ಅವರ ರೀತಿಯಲ್ಲಿಯೇ ನಾನು ಸಹ ರಾಜ್ಯದಲ್ಲಿ ಆಡಳಿತ ನೀಡಲು ಸಿದ್ಧವಿದ್ದೇವೆ’ ಎಂದರು.

‘ಪಕ್ಷದಿಂದ ಉಚ್ಛಾಟನೆಗೊಂಡವರು ಮುಖ್ಯಮಂತ್ರಿ ಆಗಿರುವ ಇತಿಹಾಸ ರಾಜ್ಯದಲ್ಲಿದೆ. ನಾನು ಪಕ್ಷದಿಂದ ಉಚ್ಛಾಟನೆಗೊಂಡರೂ ಹಿಂದೂಗಳ ಜಾಗೃತಿಗಾಗಿ ರಾಜ್ಯದಾದ್ಯಂತ ಸುತ್ತಾಡುತ್ತಿದ್ದೇನೆ. ಜನಬೆಂಬಲವೂ ಸಿಗುತ್ತಿದೆ. ಜನರು ಆಶೀರ್ವಾದ ಮಾಡಿದರೆ, 2028ರ ಚುನಾವಣೆ ಬಳಿಕ ನಾನೇ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ. ಜೆಸಿಬಿ ಯಂತ್ರ ಪೂಜೆ ಮಾಡಿಯೇ ಪ್ರಮಾಣ ವಚನ ಸ್ವೀಕರಿಸುತ್ತೇನೆ’ ಎಂದರು.

‘ಹಿಂದೂಗಳಿಂದಲೇ ಗೆದ್ದು ನಾನು ಶಾಸಕನಾಗಿದ್ದೇನೆ. ಪ್ರತಿ ಕ್ಷೇತ್ರದಲ್ಲೂ ನನ್ನಂಥ ಶಾಸಕರು ಚುನಾಯಿತರಾಗಬೇಕು. ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಬೇರೆ ಕ್ಷೇತ್ರಗಳಿಂದ ಹಣ ಬರುತ್ತಿತ್ತು. ಆದರೆ, ಅದು ಸಫಲವಾಗಲಿಲ್ಲ’ ಎಂದು ಹೇಳಿದರು.

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೂಸನೂರಿನ ಜ್ಯೋತಿರ್ಲಿಂಗ ಸ್ವಾಮೀಜಿ, ಹೋತನಹಳ್ಳಿಯ ಸಿದ್ಧಾರೂಢಮಠದ ಶಂಕರಾನಂದ ಸ್ವಾಮೀಜಿ, ಗುಂಡೂರು ಬಂಜಾರ ಗುರುಪೀಠದ ತಿಪ್ಪೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

‘ಅರಾಜಕತೆ ಹುಟ್ಟಿಸಲು ವಿದೇಶಿ ಹಣ’

‘ವಿದೇಶಗಳಿಂದ ದೇಣಿಗೆ ಪಡೆಯುತ್ತಿರುವ ಕೆಲವರು ಹಿಂದೂಸ್ತಾನ್‌ದಲ್ಲಿ ಅರಾಜಕತೆ ಹುಟ್ಟಿಸಿ ಹಿಂದೂ ಸಮಾಜ ಒಡೆದು ದಂಗೆ ಎಬ್ಬಿಸುವ ಗುರಿ ಇಟ್ಟುಕೊಂಡಿದ್ದಾರೆ. ಭಾರತದಲ್ಲಿರುವ ಪ್ರತಿಯೊಬ್ಬ ಹಿಂದೂ ಧರ್ಮದ ರಕ್ಷಣೆಗೆ ಸಂಪೂರ್ಣ ಶಕ್ತಿ ಕೊಟ್ಟು ಒಗ್ಗಟ್ಟಾಗಿ ನಿಲ್ಲಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ವಿರಾಟನಗರವಾಗಿದ್ದ ಹಾನಗಲ್‌ನಲ್ಲಿ ಇಂದು ಧರ್ಮ ಧ್ವಜ ಅಭಿಯಾನ ಆರಂಭವಾಗಿದೆ. ಅಭಿಯಾನ ಮುಂದುವರೆಯಲಿ. ನ್ಯಾಯ ಸತ್ಯಕ್ಕಾಗಿ ಸಂಘಟನೆ ಸದಾ ಕೆಲಸ ಮಾಡಲಿ’ ಎಂದರು. ‘ಈಗ ಎಲ್ಲ ಕಡೆಯೂ ಜಾತಿ ವಿಷವನ್ನು ಹರಡುತ್ತಿದ್ದಾರೆ. ನಾವು ಯಾರೂ ಅರ್ಜಿ ಕೊಟ್ಟು ಇಂಥ ಜಾತಿಯಲ್ಲಿ ಹುಟ್ಟಬೇಕೆಂದು ಹುಟ್ಟಿಲ್ಲ. ಈ ಭೂಮಿ ಮೇಲೆ ಹುಟ್ಟಿದ ಮೇಲೆ ಭೂಮಿಯ ಋಣ ತೀರಿಸಬೇಕು. ನಮ್ಮ ಸಂಸಾರ ನಾಡು ದೇಶ ಉಳಿಯಬೇಕಾದರೆ ನಾವೆಲ್ಲರೂ ಧರ್ಮವನ್ನು ಉಳಿಸಬೇಕು. ಇದೇ ಸಂಸ್ಕಾರವನ್ನು ನಮ್ಮ ಮಕ್ಕಳಿಗೆ ಕೊಡಬೇಕು’ ಎಂದರು.

ಹಾನಗಲ್ ತಾಲ್ಲೂಕಿನ ಪ್ರತಿ ಗ್ರಾಮದ ಮಠ ದೇವಸ್ಥಾನ ಮನೆಗಳ ಮೇಲೆ ಧರ್ಮ ಧ್ವಜ ಹಾರಿಸುವ ಅಭಿಯಾನ ವ್ಯವಸ್ಥಿತವಾಗಿ ನಡೆದಿದೆ. ಹಿಂದೂಗಳ ಒಗ್ಗಟ್ಟು ಪ್ರದರ್ಶನಗೊಂಡಿದ
-ಸಿದ್ದಲಿಂಗಪ್ಪ ಕಮಡೊಳ್ಳಿ, ಅಭಿಯಾನದ ರೂವಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.