ADVERTISEMENT

ಹಾವೇರಿ: ಬೇಡರು ನೆಲೆಯೂರಿದ್ದ ತಾಣ ‘ಬ್ಯಾಡಗಿ’

ಸಿದ್ಧೇಶ್ವರ, ಕಲ್ಮೇಶ್ವರ ದೇವರ ನೆಲೆವೀಡು; ಮೆಣಸಿನಕಾಯಿಗೆ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ

ಪ್ರಮೀಳಾ ಹುನಗುಂದ
Published 27 ಮಾರ್ಚ್ 2021, 19:30 IST
Last Updated 27 ಮಾರ್ಚ್ 2021, 19:30 IST
ಬ್ಯಾಡಗಿಯಲ್ಲಿ ಜೀರ್ಣೋದ್ಧಾರಗೊಂಡಿರುವ ಪುರಾತನ ಸಿದ್ಧೇಶ್ವರ ದೇವಸ್ಥಾನ
ಬ್ಯಾಡಗಿಯಲ್ಲಿ ಜೀರ್ಣೋದ್ಧಾರಗೊಂಡಿರುವ ಪುರಾತನ ಸಿದ್ಧೇಶ್ವರ ದೇವಸ್ಥಾನ   

ಬ್ಯಾಡಗಿ: ಒಣ ಮೆಣಸಿನಕಾಯಿ ವ್ಯಾಪಾರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ‘ಬ್ಯಾಡಗಿ’ ಈ ಹಿಂದೆ ಬೇಡರು ವಾಸಿಸುತ್ತಿದ್ದ ಸ್ಥಳ ಎಂದು ಇತಿಹಾಸದಲ್ಲಿ ದಾಖಲಾಗಿದೆ.

ಬೇಡರು ವಾಸಿಸುತ್ತಿರುವುದರಿಂದ ಪ್ರಾಚೀನ ಶಾಸನದಲ್ಲಿ ಬೇಡಗೇಯ್, ಬೇಡಗೆ, ಬ್ಯಾಡಗೆ ಎಂದೆಲ್ಲ ಉಲ್ಲೇಖವಿದೆ. ಬಳಿಕ ಬ್ಯಾಡಗಿಯಾಯಿತು ಎಂದು ‘ಪ್ರವಾಸಿ ಕೇಂದ್ರಗಳು’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಬ್ಯಾಡಗಿ ಈ ಮೊದಲು ಬನವಾಸಿ– 12,000 ಸೇರಿದ ಸತ್ತಿಹಳ್ಗೆ (ಸತ್ತಳಗೆ)– 70ಕ್ಕೆ ಸೇರಿತ್ತು. ಒಟ್ಟು ಐದು ಶಿಲಾ ಶಾಸನಗಳಿವೆ.ಪುರಾತನ ಸಿದ್ಧೇಶ್ವರ ದೇವಸ್ಥಾನದಲ್ಲಿರುವ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಕಾಲದ ಕ್ರಿ.ಶ 902ರ ಶಾಸನವು ಲೋಕಟೆಯು ಬನವಾಸಿ– 12,000 ಚಿಕ್ಕಂಬರ ಬಿಜ್ಜನು ಸತ್ತಿಯಳ್ಗೆ– 70ನ್ನು ಹಾಗೂ ಬುದ್ಧನು ಊರ ಗೌಡಿಕೆಯನ್ನು ಆಳುತ್ತಿದ್ದ ಪಿಟ್ಮಮ್ಮೆಯು ಮಾಡಿದ ದಾನವನ್ನು ತಿಳಿಸುತ್ತದೆ.

ADVERTISEMENT

ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾದಿತ್ಯನ ಕಾಲದ ರಸ್ತೆಯ ಸೇತುವೆಗೆ ಸೇರಿರುವ ಕ್ರಿ.ಶ 1,092ರ ಶಾಸನ ಮಹಾಮಂಡಳೇಶ್ವರ ವೀರಗಾಂಗೆಯ ರಾಯನು ಬನವಾಸಿಯನ್ನು ಆಳುವಾಗ ಬೆಡಗೆಯ ಮಲ್ಲಿಕಾರ್ಜುನ ದೇವಾಲಯಕ್ಕೆ ದಾನ ಕೊಟ್ಟ ವಿಷಯ ತಿಳಿಸಿದೆ.

ವೀರಗಲ್ಲು ಶಾಸನ:ಕಲ್ಮೇಶ್ವರ ದೇವಸ್ಥಾನದಲ್ಲಿರುವ ಕ್ರಿ.ಶ.12ನೇ ಶತಮಾನದ ವೀರಗಲ್ಲು ಶಾಸನವು ತುರುಗಳ ರಕ್ಷಣೆಗೆ ಮಡಿದ ಸೋವಗೌಂಡನ ಸ್ಮಾರಕವಾಗಿದೆ. ಪುರಾತನ ಸಿದ್ಧೇಶ್ವರ ದೇವಸ್ಥಾನದ ಎದುರಿನ ಯಾದವ ಸಿಂಘಣನ ಕಾಲದ ಕ್ರಿ.ಶ 1,228ರ ವೀರಗಲ್ಲು ಶಾಸನ ಕುಂಚೂರು ಕಾಳಗದಲ್ಲಿ ಬೇಡಗೆಯ ಮಡಿವಾಳ ಯೋಧನೊಬ್ಬ ಮೃತಪಟ್ಟಿರುವುದು ದಾಖಲಾಗಿದೆ.

ಮತ್ತೊಂದು ಶಾಸನದಲ್ಲಿ ಬ್ಯಾಡಗೆಯ ಗೌಡಿಕೆಗಾಗಿ ಇಬ್ಬರ ಗೌಡರ ನಡುವೆ ನಡೆದ ವ್ಯಾಜ್ಯವನ್ನು ಹೊಮ್ಮರಡಿ ಗ್ರಾಮದವರು ಬಗೆ ಹರಿಸಿದ ವಿಷಯ ಪ್ರಸ್ತಾಪವಾಗಿದೆ. ಅದರ ಪ್ರಾಚೀನತೆಯನ್ನು ಆ ಗುಡಿಯ ಗರ್ಭ ಗೃಹ ಹಾಗೂ ಅಂತರಾಳಗಳ ಹೊರಭಾಗವನ್ನು ನೋಡಿ ಗುರುತಿಸಬಹುದಾಗಿದೆ. ಗುಡಿಯ ಒಳಗೆ ರಾಷ್ಟ್ರಕೂಟರ ಶಾಸನವಿದ್ದರೆ, ಹೊರಗೆ ವೀರಗಲ್ಲು ಹಾಗೂ ಭಗ್ನ ಶಿಲ್ಪಾಶೇಷಗಳಿವೆ.

ಮಧ್ಯಕಾಲದಲ್ಲಿ ಮುಸ್ಲಿಂ ಆಳ್ವಿಕೆಗೆ ಒಳಗಾಗಿದ್ದ ಈ ಭಾಗ ಮುಂದೆ ವಿಜಯನಗರ ಸಾಮ್ರಾಜ್ಯದ ಬಳಿಕ ಮತ್ತೆ ಮುಸ್ಲಿಂ ಪ್ರಭಾವಕ್ಕೆ ಒಳಗಾಗಿ ಸವಣೂರು ನವಾಬನ ಆಳ್ವಿಕೆಗೆ ಒಳಪಟ್ಟಿತ್ತು.

ವ್ಯಾಪಾರಿ ಪಡಮೂಲೆ:ಪ್ರಮುಖ ವ್ಯಾಪಾರಿ ಪಡಮೂಲೆಯಂತಿದ್ದ ಬ್ಯಾಡಗಿಯಲ್ಲಿ ಅಡಿಕೆ, ಭತ್ತ, ಧವಸ ಧಾನ್ಯ ಬೆಲ್ಲ ಮಾರಾಟ ಮಾಡಿ ಮೆಣಸಿನಕಾಯಿ, ಮಸಾಲೆ ಪದಾರ್ಥ ಹಾಗೂ ಕಿರಾಣಿ ಖರೀದಿಸುತ್ತಿದ್ದರು ಎಂಬ ಉಲ್ಲೇಖವಿದೆ.

ರೈಲ್ವೆ ವ್ಯಾಗನ್‌ಗಳ ಮೂಲಕ ಮುಂಬೈಯಿಂದ ಸೀಮೆ ಎಣ್ಣೆ, ಕಿರಾಣಿ, ಮಸಾಲೆ ಪದಾರ್ಥಗಳನ್ನು ತರಲಾಗುತ್ತಿತ್ತು. ಇಲ್ಲಿಂದ ಮೆಣಸಿನಕಾಯಿ ರವಾನೆಯಾಗುತ್ತಿತ್ತು. ಹೀಗಾಗಿ ಮುಖ್ಯರಸ್ತೆಯಲ್ಲಿ ಅಡಿಕೆ, ಬೆಲ್ಲ, ಕೊಬ್ಬರಿ, ಕಾಳು ಮೆಣಸು, ಕಿರಾಣಿ ಮುಂತಾದ ಸಗಟು ವ್ಯಾಪಾರ ಜೋರಾಗಿ ನಡೆಯುತ್ತಿತ್ತು. 1948ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆರಂಭಗೊಂಡಿತು.

ಬ್ಯಾಡಗಿ ಈಗ ದೇಶದಲ್ಲಿ 2ನೇ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಪ್ರಮುಖ ವಾಣಿಜ್ಯ ಕೇಂದ್ರ. ವಾರ್ಷಿಕ ₹1,500 ಕೋಟಿಗೂ ಹೆಚ್ಚು ವಹಿವಾಟು ನಡೆಸುವ ವ್ಯಾಪಾರಿ ಸ್ಥಳವಾಗಿದ್ದು, ತಾಲ್ಲೂಕು ಕೇಂದ್ರದ ಶ್ರೇಯವನ್ನೂ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.