ADVERTISEMENT

‘ಆರ್‌ಎಸ್‌ಎಸ್‌ ಟೀಕಿಸದಿದ್ದರೆ ತಿಂದದ್ದು ಜೀರ್ಣವಾಗುವುದಿಲ್ಲವೇ’-ರೇಣುಕಾಚಾರ್ಯ

ಕುಟುಂಬ ರಾಜಕಾರಣವೇ ಜೆಡಿಎಸ್‌ ಸಾಧನೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 15:06 IST
Last Updated 24 ಅಕ್ಟೋಬರ್ 2021, 15:06 IST
ಎಂ.ಪಿ. ರೇಣುಕಾಚಾರ್ಯ, ಶಾಸಕ
ಎಂ.ಪಿ. ರೇಣುಕಾಚಾರ್ಯ, ಶಾಸಕ   

ಹಾವೇರಿ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧೆಗೆ ಬಿದ್ದವರಂತೆ ಆರ್‌ಎಸ್‌ಎಸ್‌ ಅನ್ನು ಟೀಕೆ ಮಾಡುತ್ತಿದ್ದಾರೆ. ಟೀಕೆ ಮಾಡದಿದ್ದರೆ ಅವರಿಗೆ ತಿಂದದ್ದು ಜೀರ್ಣವಾಗುವುದಿಲ್ಲ ಎನಿಸುತ್ತದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದರು.

ಹಾನಗಲ್‌ನಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ಕುಮಾರಸ್ವಾಮಿಯವರೇ ಒಮ್ಮೆ ಸಂಘದ ಶಾಖೆಗೆ ಬನ್ನಿ. ಸಂಘದ ಸಂಸ್ಕಾರ ಎಂಥದ್ದು ಎಂಬುದು ತಿಳಿಯುತ್ತದೆ. ಸಂಘ ಪರಿವಾರವನ್ನು ಟೀಕಿಸಲು ನಿಮಗೆ ನೈತಿಕ ಹಕ್ಕಿಲ್ಲ. ಬ್ಲೂಫಿಲಂ ಅನುಭವ ನಿಮಗಿರಬಹುದು, ನಮಗಿಲ್ಲ. ‘ಕುಟುಂಬ ರಾಜಕಾರಣ’ ಮಾಡಿದ್ದೇ ಜೆಡಿಎಸ್‌ ಸಾಧನೆ ಎಂದು ವಾಗ್ದಾಳಿ ನಡೆಸಿದರು.

ರಾಹುಲ್‌ಗಾಂಧಿ ಮತ್ತು ಸೋನಿಯಾಗಾಂಧಿ ಅವರನ್ನು ಓಲೈಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬಗ್ಗೆ ಕಾಂಗ್ರೆಸ್‌ ನಾಯಕರು ಹಗುರವಾಗಿ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಒಳಜಗಳ ಮಾಡುತ್ತಿದ್ದಾರೆ ಎಂದು ಕುಟುಕಿದರು.

ADVERTISEMENT

ಜನತಾ ಪರಿವಾರದಲ್ಲಿದ್ದಾಗ ಸಿದ್ದರಾಮಯ್ಯ ಅವರು ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಬಗ್ಗೆ ಕೆಟ್ಟ ಶಬ್ದಗಳನ್ನು ಆಡಿದ್ದಾರೆ. ಆ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ನಾಲಿಗೆ ಮೇಲೆ ಹಿಡಿತವಿಲ್ಲದೇ ದೇಶದ ಪ್ರಧಾನಿ ಬಗ್ಗೆ ನಾಲಿಗೆ ಹರಿಬಿಟ್ಟೀದ್ದೀರಿ. ಇದು ಸರಿಯೇ? ಎಂದು ತಿರುಗೇಟು ನೀಡಿದರು.

ಬಿ.ಎಸ್‌.ಯಡಿಯೂರಪ್ಪ ಅವರನ್ನು ಬಲವಂತದಿಂದ, ಹೆದರಿಸಿ ಚುನಾವಣಾ ಪ್ರಚಾರಕ್ಕೆ ಕರೆಸಿಲ್ಲ. ಯಾರಿಗೂ ಅವರು ಜಗ್ಗುವುದಿಲ್ಲ. ಅವರು ಬಿಜೆಪಿಯ ಶಿಸ್ತಿನ ಸಿಪಾಯಿ. ಯಾವತ್ತೂ ರಾಜಾಹುಲಿನೇ. ಅವರು ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.