ADVERTISEMENT

ಮೋದಿ ಟೀಕಿಸದಿದ್ದರೆ, ಸಿದ್ದರಾಮಯ್ಯಗೆ ತಿಂದ ಅನ್ನ ಅರಗಲ್ಲ: ಈಶ್ವರಪ್ಪ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 13:44 IST
Last Updated 23 ಡಿಸೆಂಬರ್ 2019, 13:44 IST
ಈಶ್ವರಪ್ಪ
ಈಶ್ವರಪ್ಪ   

ಹಾವೇರಿ: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ಟೀಕಿಸದಿದ್ದರೆ, ಅವರಿಗೆ ತಿಂದ ಅನ್ನ ಅರಗಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

ಹಾವೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಅವರಿಗೆ ಎಷ್ಟು ಬಾರಿ ಸೋತ ಮೇಲೆ ಬುದ್ಧಿ ಬರುತ್ತೆ? ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳಿಂದ ಸೋತರು. ಆಗಲೂ ಬುದ್ಧಿ ಬರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲಲ್ಲ ಅಂದ್ರು, ಅವರಿಗೆ ಒಂದೇ ಒಂದು ಸೀಟು ಬಂತು. ಬಿಜೆಪಿಗೆ 25 ಸೀಟು ಬಂತು. ಆಗಲೂ ಬುದ್ಧಿ ಬರಲಿಲ್ಲ. ವಿಧಾನಸಭಾ ಉಪಚುನಾವಣೆಯಲ್ಲಿ 15ಕ್ಕೆ 15ರಲ್ಲೂ ಕಾಂಗ್ರೆಸ್‌ ಗೆಲ್ಲುತ್ತೆ ಅಂದ್ರು. ಎರಡು ಸೀಟು ತೆಗೆದುಕೊಂಡ್ರು. ಹಾಗಾಗಿ ಮೋದಿ ಟೀಕಿಸಿ ದೊಡ್ಡ ನಾಯಕ ಆಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ ಸಿದ್ದರಾಮಯ್ಯ’ ಎಂದು ಲೇವಡಿ ಮಾಡಿದರು.

ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ಈ ದೇಶದ ಒಬ್ಬೇ ಒಬ್ಬ ಮುಸಲ್ಮಾನನಿಗೂ ತೊಂದರೆ ಆಗುವುದಿಲ್ಲ. ದೇಶದಲ್ಲಿ ನಿರ್ನಾಮ ಆಗುತ್ತಿರುವ ಕಾಂಗ್ರೆಸ್‌, ಹೇಗಾದರೂ ಮಾಡಿ ಮುಸಲ್ಮಾನರನ್ನು ನಮ್ಮ ಜೊತೆ ಇಟ್ಟುಕೊಳ್ಳಬೇಕು ಎಂದು ಕಾಯ್ದೆ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.