ADVERTISEMENT

ಅಕ್ಕಿಆಲೂರಿನ ಈಶ್ವರ ದೇವರ ಕೆರೆ: ದೇಸಿ–ವಿದೇಶಿ ಹಕ್ಕಿಗಳ ಕಲರವ

ಪಕ್ಷಿಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿರುವ ಬಾನಾಡಿಗಳು

ಸುರೇಖಾ ಪೂಜಾರ
Published 4 ಡಿಸೆಂಬರ್ 2021, 20:30 IST
Last Updated 4 ಡಿಸೆಂಬರ್ 2021, 20:30 IST
ಅಕ್ಕಿಆಲೂರಿನ ಈಶ್ವರ ದೇವರ ಕೆರೆಯಲ್ಲಿ ಹಕ್ಕಿಗಳ ಕಲರವ ಪಕ್ಷಿಪ್ರೇಮಿಗಳಿಗೆ ನವೋಲ್ಲಾಸ ತರುತ್ತಿದೆ  –ಪ್ರಜಾವಾಣಿ ಚಿತ್ರ 
ಅಕ್ಕಿಆಲೂರಿನ ಈಶ್ವರ ದೇವರ ಕೆರೆಯಲ್ಲಿ ಹಕ್ಕಿಗಳ ಕಲರವ ಪಕ್ಷಿಪ್ರೇಮಿಗಳಿಗೆ ನವೋಲ್ಲಾಸ ತರುತ್ತಿದೆ  –ಪ್ರಜಾವಾಣಿ ಚಿತ್ರ    

ಅಕ್ಕಿಆಲೂರ: ಇಲ್ಲಿಯ ಇತಿಹಾಸ ಪ್ರಸಿದ್ಧ ಈಶ್ವರ ದೇವರ ಕೆರೆಯಲ್ಲೀಗ ವಲಸೆ ಹಕ್ಕಿಗಳ ಕಲರವ ಕಂಡುಬರುತ್ತಿದೆ.ವೈವಿಧ್ಯಮಯ ಪ್ರಭೇದದ ಪಕ್ಷಿಗಳು ನೋಡುಗರ ಮನಸೆಳೆಯುತ್ತಿವೆ. ಸ್ವದೇಶಿ ಮಾತ್ರವಲ್ಲದೇ ವಿದೇಶಿ ಮೂಲದ ಹತ್ತಾರು ಪಕ್ಷಿ ಪ್ರಭೇದಗಳ ಸ್ವರ-ನಿನಾದ ಕೆರೆಯ ಅಂಗಳದಿಂದ ಕೇಳಿಬರಲಾರಂಭಿಸಿದ್ದು, ಪಕ್ಷಿ ಪ್ರೇಮಿಗಳಲ್ಲಿ ನವೋಲ್ಲಾಸ ಮೂಡಿಸಿದೆ.

ಈಶ್ವರ ದೇವರ ಕೆರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಸುತ್ತಲಿನ ಗ್ರಾಮಗಳ ಕೃಷಿ ಚಟುವಟಿಕೆಗೆ ಈಶ್ವರ ದೇವರ ಕೆರೆಯೇ ಮೂಲಾಧಾರ. ಸುಮಾರು 145 ಎಕರೆ ವಿಶಾಲ ಪ್ರದೇಶದಲ್ಲಿರುವ ಈ ಕೆರೆಯಲ್ಲಿ ನೀರು ಹಕ್ಕಿಗಳ ಕಲರವ ಕಣ್ಮನ ತಣಿಸುತ್ತಿದೆ.

ನೀರಿನಲ್ಲಿ ಚಿಣ್ಣಾಟ:

ADVERTISEMENT

ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿಗೆ ಹಕ್ಕಿಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಪಕ್ಷಿ ಪ್ರೇಮಿಗಳ ಹಿಂಡೇ ಕೆರೆ ದಡದಲ್ಲಿ ಜಮಾಯಿಸುತ್ತಿದೆ. ಕೆಲ ಸಮಯವಷ್ಟೇ ದಡದಲ್ಲಿ ಕಾಲ ಕಳೆಯುತ್ತಿರುವ ಪಕ್ಷಿಗಳು ಬಹುತೇಕ ಸಮಯವನ್ನು ಕೆರೆಯ ಮಧ್ಯ ಭಾಗದಲ್ಲಿ ಕಳೆಯುತ್ತಿರುವುದರಿಂದ ಪಕ್ಷಿಗಳ ಸೌಂದರ್ಯ ಸವಿಯುವುದು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಪಕ್ಷಿ ಪ್ರೇಮಿಗಳದ್ದು.

ಕೆಲವರಂತೂ ದಡದಲ್ಲಿಯೇ ಬಿಡಾರ ಹೂಡಿ ನಿಧಾನವಾಗಿ ಪಕ್ಷಗಳು ದಡದತ್ತ ಬಂದಾಗ ಅವುಗಳ ಸೌಂದರ್ಯ ಕಣ್ತುಂಬಿಕೊಂಡು ಆನಂದಿಸುತ್ತಿದ್ದಾರೆ. ಇನ್ನು ಕೆಲವರು ಮೀನುಗಾರರ ಸಹಾಯದೊಂದಿಗೆ ತೆಪ್ಪದಲ್ಲಿ ಕೆರೆಯ ಮಧ್ಯಭಾಗದತ್ತ ಪ್ರಯಾಣಿಸುತ್ತಿದ್ದಾರೆ.

ಎಂದಿಗೂ ಬತ್ತದ ಕೆರೆ:

ಎಂಥ ಬರಗಾಲದ ಸಂದರ್ಭದಲ್ಲಿಯೂ ಈ ಕೆರೆ ಬತ್ತಿ ಹೋದ ಉದಾಹರಣೆಗಳಿಲ್ಲ. ವರ್ಷದುದ್ದಕ್ಕೂ ನೀರಿನಿಂದ ತುಂಬಿ ತುಳುಕುವ ಈಶ್ವರ ದೇವರ ಕೆರೆ ನಿಧಾನವಾಗಿ ಪಕ್ಷಿಗಳ ತವರಾಗಿ ಮಾರ್ಪಾಡಾಗುತ್ತಿದೆ. ಸ್ವದೇಶಿ ಹಕ್ಕಿಗಳ ಜೊತೆಗೆ ಕೆಲ ವಿದೇಶಿ ಹಕ್ಕಿಗಳು ಇಲ್ಲಿ ಕಂಡು ಬರುತ್ತಿರುವುದರಿಂದ ಆಸಕ್ತರಲ್ಲಿ ಕುತೂಹಲ ಕೆರಳಿದೆ. ಇಲ್ಲಿ ಬಿಡಾರ ಹೂಡಿರುವ ಹಲವು ಪಕ್ಷಿ ಪ್ರಭೇದಗಳ ಕುರಿತು ಬೆಳಕು ಚೆಲ್ಲುವ ಕಾರ್ಯ ನಡೆಯಬೇಕಿದೆ.

ಕೆರೆ ಸಂರಕ್ಷಣೆಗೆ ಸಿಗಬೇಕಿದೆ ಒತ್ತು:

‘ಅಕ್ಕಿಆಲೂರಿನ ಈಶ್ವರ ದೇವರ ಕೆರೆಯ ಸುತ್ತಲಿನ ಪ್ರದೇಶದಲ್ಲಿನ ಹಚ್ಚ ಹಸುರಿನ ವಾತಾವರಣ ಮತ್ತು ಕೃಷಿ ಚಟುವಟಿಕೆಗಳು ಪಕ್ಷಿಗಳು ವಲಸೆ ಬರಲು ಪ್ರಮುಖ ಕಾರಣವಾಗಿದೆ. ದಿನಕಳೆದಂತೆ ವಲಸೆ ಪಕ್ಷಿಗಳ ಕೇಂದ್ರವಾಗುತ್ತಿರುವ ಕೆರೆ ಸಂರಕ್ಷಣೆಯ ಬಗ್ಗೆ ಖಚಿತ ಯೋಜನೆಯೊಂದು ಸಿದ್ಧವಾಗಿ ಕಾರ್ಯಗತವಾಗಬೇಕಾದ ತುರ್ತು ಅವಶ್ಯಕತೆ ಇದೆ’ ಎನ್ನುತ್ತಾರೆ ಶಿಕ್ಷಕ ಶಿವಬಸಯ್ಯ ಚಿಲ್ಲೂರಮಠ.

ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಗುಡವಿ ಪಕ್ಷಿಧಾಮ ಇಲ್ಲಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿದೆ. ವಲಸೆ ಹಕ್ಕಿಗಳ ಸ್ಥಳವೆಂದು ಗುರುತಿಸಿಕೊಂಡಿರುವ ನರೇಗಲ್ ಕೆರೆಯೂ ಸಮೀಪದಲ್ಲಿದೆ. ಗುಡವಿ ಮತ್ತು ನರೇಗಲ್‍ನಲ್ಲಿ ಕಂಡು ಬರುವ ಸ್ವದೇಶಿ ಮತ್ತು ವಿದೇಶಿ ಹಕ್ಕಿಗಳು ಇಲ್ಲಿನ ಈಶ್ವರ ದೇವರ ಕೆರೆಯ ತನ್ಮಯತೆ ಮತ್ತು ಮೋಹಕತೆಗೆ ಮನಸೋತು ಆಗಮಿಸುತ್ತಿವೆ ಎನ್ನುವುದು ಇಲ್ಲಿನ ರೈತ ನಾಗನಗೌಡ ಪಾಟೀಲ ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.