
ಹಾವೇರಿ: ಜಿಲ್ಲೆಯ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನ. 24ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ ನಡೆದಿದ್ದು, ಇದರ ಬೆನ್ನಲ್ಲೇ ಕುಲಸಚಿವ (ಪ್ರಭಾರ) ಕೆ.ಶಿವಶಂಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರನ್ನು ಈಚೆಗಷ್ಟೇ ಆಡಳಿತ ಕುಲಸಚಿವರನ್ನಾಗಿ ಪ್ರಭಾರ ವಹಿಸಲಾಗಿತ್ತು.
‘ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಹಜಹಾನ ಮುದಕವಿ ಅವರು ಖೊಟ್ಟಿ ಅಂಕಪಟ್ಟಿ ಕೊಟ್ಟು ಅಕ್ರಮವಾಗಿ ನೇಮಕವಾಗಿರುವ ಆರೋಪವಿದೆ. ಅವರ ವಿದ್ಯಾರ್ಹತೆಯ ದಾಖಲೆಗಳನ್ನು ಒದಗಿಸಿ’ ಎಂದು ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದೇ ವಿಚಾರವಾಗಿ ಶಹಜಹಾನ್ ಮತ್ತು ಸದಸ್ಯರ ನಡುವೆ ಜಟಾಪಟಿ ನಡೆದಿತ್ತು.
‘ಸದಸ್ಯರ ಜೊತೆ ಶಹಜಹಾನ್ ದುರ್ನಡತೆ ತೋರಿದ್ದಾರೆ. ನೋಟಿಸ್ ನೀಡಿ ಶಿಸ್ತುಕ್ರಮ ಕೈಗೊಳ್ಳಿ’ ಎಂದು ಸದಸ್ಯರು ಕುಲಪತಿ, ಕುಲಸಚಿವರನ್ನು ಕೋರಿದ್ದರು. ಇದರ ಹಿಂದೆಯೇ ಶಿವಶಂಕರ್ ಅವರು ಕುಲಪತಿ ಪ್ರೊ. ಟಿ.ಎಂ.ಭಾಸ್ಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
‘ರಾಜೀನಾಮೆ ಪತ್ರವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದ ಉತ್ತರದ ನಿರೀಕ್ಷೆಯಲ್ಲಿದ್ದೇನೆ’ ಎಂದು ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.