
ಶಿಗ್ಗಾವಿ: ‘ಭಕ್ತ ಶ್ರೇಷ್ಠ ಕನಕದಾಸರ ಜನ್ಮಸ್ಥಳವಾದ ಬಾಡ ಗ್ರಾಮದಲ್ಲಿ ಕನಕದಾಸರ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕಿದೆ. ಅದರಿಂದ ನಾಡಿನ ಹಿರಿಮೆ ಇನ್ನಷ್ಟು ಹೆಚ್ಚಲಿದೆ’ ಎಂದು ಶಾಸಕ ಯಾಸೀರ್ ಅಹಮ್ಮದ್‌ಖಾನ್ ಪಠಾಣ ಹೇಳಿದರು.
ತಾಲ್ಲೂಕಿನ ಬಾಡ ಗ್ರಾಮದ ಕನಕದಾಸರ ಅರಮನೆ ಆವರಣದಲ್ಲಿ ಶನಿವಾರ ನಡೆದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕಿತ್ತೂರಿನಲ್ಲಿ ಕಿತ್ತೂರು ಉತ್ಸವ, ಮೈಸೂರಿನಲ್ಲಿ ದಸರಾ ಉತ್ಸವ, ಹಂಪಿಯಲ್ಲಿ ಹಂಪಿ ಉತ್ಸವ ನಡೆಯುವಂತೆ ಬಾಡ ಗ್ರಾಮದಲ್ಲಿ ಕನಕ ಉತ್ಸವ ನಡೆಯಬೇಕು. ಬಂಕಾಪುರ ಪಟ್ಟಣವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸುವ ಮೂಲಕ ಬಾಡ ಗ್ರಾಮವನ್ನು ವಿಶ್ವವಿಖ್ಯಾತಗೊಳಿಸಲು ಪ್ರಾಮಾಣಿಕವಾಗಿ ಪಯತ್ನಿಸುತ್ತೇನೆ’ ಎಂದರು.
‘ಗುಡ್ಡದಚೆನ್ನಾಪುರದಲ್ಲಿ ಚೆನ್ನಕೇಶವ ದೇವಸ್ಥಾನ, ಹೊರಬೀರೇಶ್ವರ ದೇವಸ್ಥಾನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲಿರಿಸಲಾಗಿದೆ. ಬಾಡ, ಬಂಕಾಪುರ, ಗುಡ್ಡದಚೆನ್ನಾಪುರವನ್ನು ಅಭಿವೃದ್ಧಿಪಡಿಸುವ ಗುರಿಯಿದೆ. ಕನಕದಾಸರ ಸಂದೇಶ ಪ್ರತಿ ಮನೆಗೆ ತಲುಪಬೇಕು. ಇಂತದ್ದೇ ಕುಲದಲ್ಲಿ ಜನಿಸಬೇಕೆಂದು ಯಾರೂ ದೇವರಿಗೆ ಅರ್ಜಿ ಹಾಕುವುದಿಲ್ಲ. ಜನನ ಆಕಸ್ಮಿಕವಾದರೂ ಸಾವು ಶಾಶ್ವತ. ಹುಟ್ಟು–ಸಾವಿನ ನಡುವಿನ ಜೀವನ ಪಾವನ ಆಗಬೇಕಾದರೆ, ಕನಕದಾಸರ ತತ್ವ–ಸಿದ್ಧಾಂತ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ‘ಸರ್ವ ಸಮುದಾಯದವರು ಒಗ್ಗಟಿನಿಂದ ಬಾಳಬೇಕು. ಜಾತಿಯ ಕಂದಕ ದೂರವಾಗಬೇಕು. ಕನಕದಾಸರ ಆದರ್ಶ ಪಾಲಿಸಿ, ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದರು.
ಮುಖಂಡ ಗುರುನಗೌಡ ಪಾಟೀಲ ಮಾತನಾಡಿ, ‘ಪ್ರತಿವರ್ಷ ಬಾಡ ಗ್ರಾಮದಲ್ಲಿ ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಕನಕದಾಸರ ಮಹಾರಥೋತ್ಸವ ಜರುಗಬೇಕು’ ಎಂದು ಕೋರಿದರು.
ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಚಂದ್ರಪ್ಪ ಸೊಬಟಿ ಉಪನ್ಯಾಸ ನೀಡಿದರು. ಕಾಗಿನೆಲೆ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್, ತಾಲ್ಲೂಕು ಪಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಂಜುನಾಥ ಸಾಳುಂಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಶಿವಾನಂದ ಸಣ್ಣಕ್ಕಿ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ ಇದ್ದರು.
ತಿಮ್ಮಪ್ಪನಾಯಕನಿಗೆ ದರ್ಶನ ನೀಡುವ ಮೂಲಕ ಶ್ರೀಕೃಷ್ಣ ಸಮಾನತೆ ಸಾರಿದನು. ಈಗಿನ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿ ರಾಜಕಾರಣ ಮಾಡುತ್ತಿದ್ದಾರೆಯಾಸೀರ್ ಅಹಮ್ಮದ್‌ಖಾನ್ ಪಠಾಣ ಶಾಸಕ
‘ಕರ್ನಾಟಕ ಸಂಗೀತಕ್ಕೆ ವಿಶೇಷ ಕೊಡುಗೆ’
ಮನುಷ್ಯ ವೈರಾಗ್ಯದಿಂದ ಕೆಟ್ಟ ಚಟಗಳಿಗೆ ದಾಸನಾಗುತ್ತಾರೆ. ಆದರೆ ತಿಮ್ಮಪ್ಪ ನಾಯಕ ವೈರಾಗ್ಯದಿಂದ ಕನಕದಾಸರಾಗಿ ದಾಸಶ್ರೇಷ್ಠರಾದರು. ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕೃಷ್ಣ ಪರಮಾತ್ಮನನ್ನೇ ಒಲಿಸಿಕೊಂಡರು. ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರೂ ಒಬ್ಬರು’ ಎಂದು ತಹಶೀಲ್ದಾರ್ ಯಲ್ಲಪ್ಪ ಗೊಣೇಣ್ಣನವರ ಹೇಳಿದರು. ‘ಕೀರ್ತನೆಗಳ ಮೂಲಕ ಕರ್ನಾಟಕ ಸಂಗೀತಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಕನಕದಾಸರು ಹಾಗೂ ಪುರಂದರದಾಸರನ್ನು ಕರ್ನಾಟಕ ಸಾಹಿತ್ಯದ ದೇವರೆಂದೇ ಬಣ್ಣಿಸಲಾಗಿದೆ. ಅಂತಹ ಮಹಾನ್ ಸಂತ ಕನಕದಾಸರು ಬಾಡ ಗ್ರಾಮದಲ್ಲಿ ಜನಿಸಿದ್ದು ಇದು ಇಲ್ಲಿನವರ ಸೌಭಾಗ್ಯವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.