ADVERTISEMENT

ಬಿಹಾರ ಚುನಾವಣೆ ನಂತರ ಸಂಪುಟ ವಿಸ್ತರಣೆ: ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:12 IST
Last Updated 12 ಅಕ್ಟೋಬರ್ 2025, 6:12 IST
ಸಲೀಂ ಅಹ್ಮದ್‌
ಸಲೀಂ ಅಹ್ಮದ್‌   

ಹಾವೇರಿ: ‘ಬಿಹಾರ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಆಗಲಿದೆ’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಯಶಸ್ವಿ ಆಡಳಿತ ನಡೆಸಿದೆ. ಜನರ ಮನಸ್ಸು ಗೆದ್ದಿದೆ. ಇದೇ ಹುಮ್ಮಸ್ಸಿನಲ್ಲಿ ಹೊಸ ಶಾಸಕರಿಗೆ ಸಚಿವರಾಗುವ ಅವಕಾಶ ಸಿಗಲಿದೆ’ ಎಂದರು.

‘ಸದ್ಯ ಸಚಿವರಾಗಿರುವ ಹಲವರನ್ನು ಪಕ್ಷದ ಸಂಘಟನೆಗೆ ನಿಯೋಜಿಸಲು ಹಾಗೂ ಅವರ ಸ್ಥಾನಕ್ಕೆ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ. ಯಾರನ್ನೂ ಸಚಿವ ಮಾಡಬೇಕು? ಯಾರನ್ನು ಸಂಪುಟದಿಂದ ಹೊರಗೆ ತಂದು ಪಕ್ಷ ಸಂಘಟನೆ ಜವಾಬ್ದಾರಿ ವಹಿಸಬೇಕು? ಎಂಬ ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ’ ಎಂದು ಹೇಳಿದರು.

ADVERTISEMENT

‘ನಾನು ಸಹ ಪಕ್ಷಕ್ಕಾಗಿ ದುಡಿದಿದ್ಧೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ನನ್ನದು ಪಾತ್ರವಿದೆ. 2023ರಲ್ಲಿಯೇ ನಾನು ಸಚಿವ ಆಗಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವಕಾಶ ಕೈ ತಪ್ಪಿತು. ಈ ಬಾರಿ ನನಗೂ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ. ನನ್ನನ್ನು ಸಚಿವ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಷಯ’ ಎಂದರು.

ಗುಂಡಿ ಮುಚ್ಚದಿದ್ದರೆ ಕ್ರಮ
‘ರಾಜ್ಯದಲ್ಲಿ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಈ ವಿಷಯ ರಾಜ್ಯ ಸರ್ಕಾರದ ಗಮನದಲ್ಲಿದೆ. ಗುಂಡಿಗಳನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಖಡಕ್ ಸೂಚನೆ ನೀಡಿದ್ದಾರೆ. ಗುಂಡಿ ಮುಚ್ಚದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದ್ದಾರೆ’ ಎಂದು ಸಲೀಂ ಅಹ್ಮದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.