
ಹಾವೇರಿ: ‘ಪ್ರಧಾನಿ ನರೇಂದ್ರ ಮೋದಿಯವರು ಭವ್ಯ ಭವಿಷ್ಯಕ್ಕಾಗಿ, ವಿಕಸಿತ ಭಾರತಕ್ಕಾಗಿ ದೂರದೃಷ್ಟಿ ಇಟ್ಟುಕೊಂಡು ಎನ್‌ಇಪಿ ಜಾರಿಗೆ ತಂದಿದ್ದಾರೆ. ಎನ್‌ಇಪಿ ಜಾರಿಯಲ್ಲಿರುವ ರಾಜ್ಯದಲ್ಲಿ ಶಿಕ್ಷಣ ಮಟ್ಟ ಎತ್ತರಕ್ಕೆ ಹೋಗುತ್ತಿದೆ. ಕರ್ನಾಟಕದ ಶಾಲೆಗಳಲ್ಲಿ ಎನ್‌ಇಪಿ ಜಾರಿಯಾಗಿಲ್ಲ. ರಾಜ್ಯದ ಮಕ್ಕಳು ಎನ್‌ಇಪಿ ಶಿಕ್ಷಣದಿಂದ ವಂಚಿತರಾಗುತ್ತಿರುವುದು ದುರ್ದೈವದ ಸಂಗತಿ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಬೇಸರ ಹೊರಹಾಕಿದರು.
ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಹಾರಾಜಪೇಟೆ ಬಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ‘ನವೋತ್ಸವ–2025’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿ ಜೀವನ ಅತ್ಯಂತ ಸುಂದರವಾಗಿರುವ ಜೀವನ. ಇದೊಂದು ಸುವರ್ಣ ಯುಗ. ನಾವು ವಿದ್ಯಾರ್ಥಿಗಳಿದ್ದಾಗ ಯಾವಾಗ ಕಾಲೇಜು ಮುಗಿಯುತ್ತದೆ ಅಂದುಕೊಳ್ಳುತ್ತಿದ್ದೆವು. ಈಗ ನಿಮ್ಮನ್ನೆಲ್ಲ ನೋಡಿದಾಗ, ನಾನೂ ವಿದ್ಯಾರ್ಥಿ ಆಗಬೇಕು ಎಂದನಿಸುತ್ತದೆ. ನವೋದಯ ಶಾಲೆಯ ವಿದ್ಯಾರ್ಥಿಗಳು ಅದೃಷ್ಟವಂತರು. ಗುಣಮಟ್ಟದ ಶಿಕ್ಷಣ ಸಿಗುತ್ತದೆ. ನವೋದಯ ಶಾಲೆಗಳು ನವಭಾರತದ ಶಿಲ್ಪಿಗಳನ್ನು ತಯಾರು ಮಾಡುವ ಶಾಲೆಗಳಾಗಿದೆ’ ಎಂದರು.
‘ಜ್ಞಾನ ದೇವರ ಆಶೀರ್ವಾದ. ಗ್ರಾಮೀಣ ಪ್ರದೇಶದಲ್ಲಿ, ಬಡವರ ಮನೆಯಲ್ಲಿ, ಕೂಲಿಕಾರರ ಮನೆಯಲ್ಲಿ ವೈದ್ಯರ ಮನೆಯಲ್ಲಿ ಎಲ್ಲಿ ಬೇಕಾದರೂ ಜ್ಞಾನ ಹುಟ್ಟಬಹುದು. ಮಕ್ಕಳಿಗೆ ಸರಿಯಾದ ಜ್ಞಾನ ನೀಡಿದರೆ, ನಮ್ಮ ಭಾರತದ ಮಕ್ಕಳು ಇಡೀ ಜಗತ್ತು ಗೆಲ್ಲುತ್ತಾರೆ. ನಾವೆಲ್ಲ ಅಮೆರಿಕಾ ಬಹಳ ಮುಂದಿದೆ ಎಂದು ತಿಳಿದುಕೊಂಡಿದ್ದೇವೆ. ಆದರೆ, ಅಮೆರಿಕಾದ ನಾಸಾದಲ್ಲಿ ಕೆಲಸ ಮಾಡುವ ಶೇ 30ರಷ್ಟು ವಿಜ್ಞಾನಿಗಳು ಭಾರತೀಯರು’ ಎಂದರು.
‘ವಿದ್ಯಾರ್ಥಿಯಾದವರು ತಮ್ಮ ಜೀವನದುದ್ದಕ್ಕೂ ವಿದ್ಯಾರ್ಥಿಯೇ ಆಗಿರುತ್ತಾರೆ. ಕಲಿಕೆ ನಿರಂತರ ಪ್ರಕ್ರಿಯೆ. ಶಾಲೆಯಲ್ಲಿ ಪಠ್ಯಕ್ಕೆ ತಕ್ಕಂತೆ ಶಿಕ್ಷಕರು ಕಲಿಸುತ್ತಾರೆ. ನಂತರ, ಪರೀಕ್ಷೆ ಇರುತ್ತದೆ. ಜೀವನದಲ್ಲಿ ಪ್ರತಿದಿನವೂ ಕಲಿಕೆ ಹಾಗೂ ಪರೀಕ್ಷೆ ಇರುತ್ತದೆ. ನಂತರ, ಪಾಠ ಕಲಿಯುತ್ತೇವೆ. ಜ್ಞಾನ ಪಡೆಯಲು ಯಾವಾಗಲೂ ಆಸಕ್ತಿ ಹೊಂದಿರಬೇಕು’ ಎಂದು ಹೇಳಿದರು.
ಸಮಾರಂಭದ ಅಂಗವಾಗಿ ಶಾಲೆ ಆವರಣದಲ್ಲಿ ಮರಗಳನ್ನು ನೆಡಲಾಯಿತು.
Cut-off box - ‘ಮೌಂಟ್ ಎವರೆಸ್ಟ್ ಏರಿದ್ದ ಮೊದಲಿಗ ಕುರಿಗಾಹಿ’ ‘ಜಗತ್ತಿನಲ್ಲಿ ಎಲ್ಲಕ್ಕಿಂತ ಎತ್ತರವಾಗಿರುವ ಶಿಖರ ಮೌಂಟ್ ಎವರೆಸ್ಟ್. ಅದನ್ನು ಹತ್ತಿದ್ದ ಮೊದಲ ಭಾರತೀಯ ಥೇನ್ ಸಿಂಗ್. ಅವರು ಕುರುಬ ಸಮುದಾಯಕ್ಕೆ ಸೇರಿದವರು’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ‘ಥೇನ್ ಸಿಂಗ್ ಅವರ ತಾಯಿಯ ಬಳಿ ಕುರಿಗಳಿದ್ದವು. ಅವುಗಳನ್ನು ಮೇಯಿಸಿಕೊಂಡು ಬರಲು ಥೇನ್ ಸಿಂಗ್‌ಗೆ ಹೇಳುತ್ತಿದ್ದರು. ಅವರಿಗೆ ನಿತ್ಯವೂ ಊಟ ಕಟ್ಟಿ ಕಳುಹಿಸುತ್ತಿದ್ದರು. ಮಗನಿಗೆ ಮೌಂಟ್ ಎವರೆಸ್ಟ್ ತೋರಿಸುತ್ತಿದ್ದ ತಾಯಿ ‘ನೀನು ಇದನ್ನು ಹತ್ತುತ್ತಿಯಾ?’ ಎಂದು ಕೇಳುತ್ತಿದ್ದರು. ನಂತರ ಥೇನ್ ಸಿಂಗ್ 42ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಹತ್ತಿದ್ದರು. ಆತನ ಸಾಧನೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ‘ತಾಯಿಯ ಮಾತುಗಳಿಂದ ಸ್ಫೂರ್ತಿಗೊಂಡು ನಾನು ಹತ್ತನೇ ವಯಸ್ಸಿನಿಂದಲೇ ಶಿಖರ ಹತ್ತಲು ಆರಂಭಿಸಿದ್ದೆ’ ಎಂದು ಉತ್ತರಿಸಿದ್ದರು. ಸಾಧನೆ ಮಾಡಲು ಗುರಿ ಇಟ್ಟುಕೊಂಡು ಸ್ಫೂರ್ತಿಯಿಂದ ಮುನ್ನಡೆಯಬೇಕು. ಅಂದಾಗ ಮಾತ್ರ ಸಾಧನೆ ನಮ್ಮದಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.