ಹಾವೇರಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಶಾಲೆಯಿಂದ ದೂರವುಳಿಯುವ (ಡ್ರಾಪ್‌ಔಟ್) ಮಕ್ಕಳ ಸಂಖ್ಯೆ ಕಡಿಮೆಗೊಳಿಸುವ ಉದ್ದೇಶದಿಂದ ಜಿಲ್ಲೆಯ 18 ಶಾಲೆಗಳು ಸೇರಿದಂತೆ ರಾಜ್ಯದ 474 ಪ್ರೌಢಶಾಲೆಗಳನ್ನು ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಆಗಿ ಮೇರ್ಲರ್ಜೆಗೇರಿಸಲಾಗಿದೆ.
ರಾಜ್ಯ ಸರ್ಕಾರದ 2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ 474 ಪ್ರೌಢಶಾಲೆಗಳನ್ನು ಉನ್ನತೀಕರಣಗೊಳಿಸಿ ಆದೇಶ ಹೊರಡಿಸಲಾಗಿದೆ. ಪ್ರತಿ ಶಾಲೆಯ ಅಭಿವೃದ್ಧಿಗೆ ಕೆಲ ನಿರ್ಬಂಧನೆಗಳಿಗೆ ಒಳಪಟ್ಟು ತಲಾ ₹2 ಕೋಟಿಯಿಂದ ₹4 ಕೋಟಿ ನೀಡುವುದಾಗಿಯೂ ಸರ್ಕಾರ ಘೋಷಣೆ ಮಾಡಿದೆ.
ರಾಜ್ಯದಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಶಾಲೆ ಕಲಿತ ಹಲವು ಮಕ್ಕಳು, ಪ್ರೌಢಶಾಲೆಗೆ ಹೋಗದೇ ದೂರವುಳಿಯುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ಕಲಿತವರು, ಪದವಿಪೂರ್ವ ಕಾಲೇಜಿಗೆ ಹೋಗದೇ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಇದೇ ಕಾರಣಕ್ಕೆ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ ಒಂದೇ ಸೂರಿನಡಿ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಕೆಪಿಎಸ್ ಸ್ಥಾಪನೆಗೆ ಮುಂದಾಗಿದೆ.
ಯೋಜನೆಯ ಮೊದಲ ಹಂತದಲ್ಲಿ ಮಕ್ಕಳ ಸಂಖ್ಯೆ ಆಧರಿಸಿ ಜಿಲ್ಲೆಯ 18 ಶಾಲೆಗಳನ್ನು ಕೆಪಿಎಸ್ ಆಗಿ ಮೇಲ್ದರ್ಜೆಗೇರಿಸಲಾಗಿದೆ.
ಬ್ಯಾಡಗಿ, ಹಾವೇರಿ, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ತಲಾ 2 ಶಾಲೆಗಳನ್ನು ಕೆಪಿಎಸ್ ಮಾಡಲಾಗಿದೆ. ಹಾನಗಲ್ ಹಾಗೂ ಹಿರೇಕೆರೂರು ತಾಲ್ಲೂಕಿನ ತಲಾ 3 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ರಾಣೆಬೆನ್ನೂರು ತಾಲ್ಲೂಕಿನ 4 ಶಾಲೆಗಳನ್ನು ಕೆಪಿಎಸ್ ಆಗಿ ಪರಿವರ್ತಿಸಲಾಗಿದೆ.
ಸರ್ಕಾರಿ ಶಾಲೆ ಮಕ್ಕಳ ಸಂಖ್ಯೆ ಇಳಿಕೆ: ‘ರಾಜ್ಯದಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪದವಿಪೂರ್ವ ಕಾಲೇಜುಗಳಿವೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 2015–16ರಲ್ಲಿ 47.1 ಲಕ್ಷವಿತ್ತು. 2025–26ನೇ ಸಾಲಿನಲ್ಲಿ 38.2 ಲಕ್ಷವಾಗಿದೆ. ದಾಖಲಾತಿ ಪ್ರಮಾಣ ಶೇ 19ರಷ್ಟು ಕುಸಿದಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
‘ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2015–16ನೇ ಸಾಲಿನಲ್ಲಿ 36.3 ಲಕ್ಷ ವಿದ್ಯಾರ್ಥಿಗಳಿದ್ದರು. 2025–26ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 47 ಲಕ್ಷಕ್ಕೆ ಏರಿದೆ. ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಲಿತ ಹಲವು ಮಕ್ಕಳು, ಶಾಲೆಗಳ ಅಲಭ್ಯತೆ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕಲಿಕೆಯಿಂದ ದೂರವುಳಿಯುತ್ತಿದ್ದಾರೆ. ಅದೇ ಕಾರಣಕ್ಕೆ ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ವಿದ್ಯಾಭ್ಯಾಸ ನಡೆಸಲು ಕೆಪಿಎಸ್ ಅನುಕೂಲವಾಗಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
‘ಎಲ್‌ಕೆಜಿಯಿಂದ 5ನೇ ತರಗತಿಯವರೆಗೆ ಏಕ ತರಗತಿ ಪಠ್ಯಪುಸ್ತಕ ಆಧಾರಿತ ದ್ವಿಭಾಷಾ ಮಾಧ್ಯಮ (ಕನ್ನಡ–ಆಂಗ್ಲ) ಬೋಧನೆ ಇರಲಿದೆ. 6ರಿಂದ 10ನೇ ತರಗತಿಯವರೆಗೆ ಮಾಧ್ಯಮವಾರು ಏಕ ತರಗತಿ ಪಠ್ಯಪುಸ್ತಕ ಆಧಾರಿತ ತರಗತಿಗಳು, ಕ್ರಿಯಾಶೀಲ ಕಲಿಕಾ ಪದ್ಧತಿಗಳನ್ನು ಅಳವಡಿಸಲಾಗುತ್ತಿದೆ. 10ರಿಂದ 12ನೇ ತರಗತಿಯವರೆಗೆ ನಿರ್ಗಮನ ಆಯ್ಕೆಗಳನ್ನು ಒದಗಿಸಲಾಗುತ್ತಿದೆ. ಸೇವಾನಿರತ ಶಿಕ್ಷಕರಿಗೆ ಅರ್ಹತಾ ಪರೀಕ್ಷೆ ನಡೆಸಿ, ಆಯ್ಕೆಯಾದವರಿಗೆ ತರಬೇತಿ ನೀಡಿ ಕೆಪಿಎಸ್ ಶಾಲೆಗಳಿಗೆ ನಿಯೋಜಿಸಲಾಗುವುದು. ಶಾಲಾ ನಿರ್ವಹಣೆಯನ್ನು ಹೊರಗುತ್ತಿಗೆ ಮಾಡಲು ಅವಕಾಶ ನೀಡಲಾಗುವುದು’ ಎಂಬ ಸಂಗತಿ ಆದೇಶದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.