ADVERTISEMENT

ಹಾವೇರಿ ಜಿಲ್ಲೆಯಲ್ಲಿ ಮಳೆ: ತುಂಬಿ ಹರಿಯುತ್ತಿರುವ ನದಿಗಳು

ಜಿಲ್ಲೆಯಾದ್ಯಂತ ಮುಂದುವರೆದ ಮಳೆ, ಕುಸಿದ ಮನೆಗಳು, ರಸ್ತೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 5:44 IST
Last Updated 23 ಜುಲೈ 2021, 5:44 IST
ಸವಣೂರ ತಾಲ್ಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಳಸೂರ ಗ್ರಾಮದಿಂದ ದೇವಗಿರಿ ಮಾರ್ಗವಾಗಿ ಹಾವೇರಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ
ಸವಣೂರ ತಾಲ್ಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಳಸೂರ ಗ್ರಾಮದಿಂದ ದೇವಗಿರಿ ಮಾರ್ಗವಾಗಿ ಹಾವೇರಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ   

ಹಾವೇರಿ:ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ತುಂತುರು ಮಳೆಯಾಗುತ್ತಿದೆ. ಮಳೆ ನೀರಿನಿಂದ ವರದಾ ಮತ್ತು ಕುಮದ್ವತಿ ನದಿಗಳು ತುಂಬಿ ಹರಿಯುತ್ತಿವೆ.

ಜಿಲ್ಲೆಯ ಕೆಲವೆಡೆ ಮನೆಗಳು ಕುಸಿತವಾಗಿದ್ದು, ರಸ್ತೆ ಮತ್ತು ಸೇತುವೆಗಳು ಜಲಾವೃತವಾಗಿವೆ.ಕಳಸೂರು ಅಣೆಕಟ್ಟೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ, ಹಾವೇರಿ–ಕಳಸೂರು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ನದಿ ಪಾತ್ರದ ಹಳ್ಳಿಗಳಲ್ಲಿ ತಗ್ಗು ಪ್ರದೇಶಕ್ಕೆನೀರು ನುಗ್ಗಬಹುದು ಎಂಬ ಭೀತಿ ಜನರನ್ನು ಕಾಡುತ್ತಿದೆ.ಜಿಲ್ಲಾಡಳಿತ ಈಗಾಗಲೇ ಮುಳುಗಡೆ ಭೀತಿ ಎದುರಿಸುತ್ತಿರುವ 141 ಗ್ರಾಮಗಳನ್ನು ಗುರುತಿಸಿದ್ದು, ಅಗತ್ಯಬಿದ್ದರೆ ಜನ–ಜಾನುವಾರುಗಳ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಂಡಿದೆ.

ADVERTISEMENT

ಮಳೆಯ ವಿವರ (ಮಿಲಿ ಮೀಟರ್‌ಗಳಲ್ಲಿ):

ಹಾವೇರಿ 8.0, ದೇವಿಹೊಸೂರು 5.8, ಗುತ್ತಲ 15.2, ಹೊಸರಿತ್ತಿ 18.2,ರಾಣೆಬೆನ್ನೂರು 5.8, ಅಸುಂಡಿ 15.4, ಮೆಡ್ಲೇರಿ 7.4, ಹನುಮನಮಟ್ಟಿ 4.4, ಹಿರೇಕೆರೂರು 10.6, ಹಂಸಭಾವಿ 15.0, ಶಿಗ್ಗಾವಿ 8.0, ಬಂಕಾಪುರ 15.3, ದುಂಡಶಿ 6.6, ತಡಸ 19.4, ಬ್ಯಾಡಗಿ 5.4, ಕಾಗಿನೆಲೆ 11.6, ಹಾನಗಲ್‌ 10.0, ಆಡೂರು 7.4, ತಿಳವಳ್ಳಿ 12.1, ಬಮ್ಮನಹಳ್ಳಿ 26.2, ರಟ್ಟೀಹಳ್ಳಿ 5.2, ಮಾಸೂರು 14.2, ಸವಣೂರು 5.9 ಮಿಲಿ ಮೀಟರ್‌ ಮಳೆಯಾಗಿದೆ.

21 ಮನೆಗಳಿಗೆ ಹಾನಿ

ಹಾನಗಲ್: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 21 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಂಪು ವಾತಾವರಣವಿದ್ದು,ಜನಜೀವನ ಅಸ್ತವ್ಯಸ್ತವಾಗಿದೆ.

ತಾಲ್ಲೂಕಿನ ನರೇಗಲ್, ಉಪ್ಪಣಶಿ, ಕೆಲವರಕೊಪ್ಪ, ಹರಳಕೊಪ್ಪ, ಸೋಮಸಾಗರ, ಕೆಲವರಕೊಪ್ಪ, ಮುಳಥಳ್ಳಿ, ಯಲಿವಾಳ, ಬಮ್ಮನಹಳ್ಳಿ ಮತ್ತು ಹಾನಗಲ್ ಭಾಗದಲ್ಲಿ ಮನೆಗಳು ಜಖಂಗೊಂಡಿವೆ ಎಂದು ತಹಶೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಹರಿಯುತ್ತಿರುವ ವರದಾ, ಧರ್ಮಾ ನದಿಗಳು ಅಪಾಯಮಟ್ಟ ತಲುಪಿಲ್ಲ. ರಸ್ತೆ, ಸೇತುವೆ ಜಲಾವೃತವಾದ ವರದಿಯಾಗಿಲ್ಲ. ನದಿ ಪಾತ್ರಗಳತ್ತ ಕಂದಾಯ ಇಲಾಖೆ ಕಣ್ಣಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ರಟ್ಟೀಹಳ್ಳಿ ವರದಿ: ಶಿವಮೊಗ್ಗ ಜಿಲ್ಲೆಯ ಗಾಜನೂರ ಡ್ಯಾಂನಿಂದ ತುಂಗಾ ನದಿಗೆ ನೀರು ಹರಿದು ಬಿಟ್ಟಿದ್ದು, ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಹಾದು ಹೋಗಿರುವ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ತಾಲ್ಲೂಕಿನ ಹಲವಾರು ಹಳ್ಳಿಗರ ಜೀವನಾಡಿಯಾಗಿರುವ ತುಂಗಾ ಮೇಲ್ದಂಡೆ ಕಾಲುವೆ ಇದೀಗ ಭರ್ತಿಯಾಗಿದ್ದು, ರೈತರಿಗೆ ಸಂತಸವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.