ADVERTISEMENT

ಜನರ ಮಾನ–ಪ್ರಾಣ ರಕ್ಷಿಸಿದ ಚನ್ಮಮ್ಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 15:13 IST
Last Updated 19 ಡಿಸೆಂಬರ್ 2021, 15:13 IST
ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿ ಭಾನುವಾರ ಪಂಚಮಸಾಲಿ ಸಮುದಾಯ ಭವನದ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ಮುಖಂಡ ಬಸವರಾಜ ದಿಂಡೂರ ಇದ್ದಾರೆ  
ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿ ಭಾನುವಾರ ಪಂಚಮಸಾಲಿ ಸಮುದಾಯ ಭವನದ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ಮುಖಂಡ ಬಸವರಾಜ ದಿಂಡೂರ ಇದ್ದಾರೆ     

ಹಾವೇರಿ: ‘ರಾಜ್ಯ ವಿಸ್ತರಣೆಗಾಗಿ ಕಿತ್ತೂರು ಚನ್ನಮ್ಮ ಹೋರಾಟ ನಡೆಸಲಿಲ್ಲ. ಜನರ ಮಾನ–ಪ್ರಾಣ ರಕ್ಷಣೆಗಾಗಿ ಹಾಗೂ ಸ್ವಾಭಿಮಾನ ಉಳಿಸಲು ಹೋರಾಟ ಮಾಡಿದಳು. ಸಣ್ಣ ಸೈನ್ಯ ಕಟ್ಟಿಕೊಂಡು ಬ್ರಿಟೀಷರ ಬೃಹತ್‌ ಸೈನ್ಯದ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದಳು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ವೀರರಾಣಿ ಕಿತ್ತೂರು ಚನ್ಮಮ್ಮ ಕಂಚಿನ ಪುತ್ಥಳಿ ಅನಾವರಣ ಹಾಗೂ ಪಂಚಮಸಾಲಿ ಸಮುದಾಯ ಭವನದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಾವೇರಿ ಸಂತರ ನಾಡು. ವೈಚಾರಿಕ ಕ್ರಾಂತಿ ಮಾಡಿದ ಸಂತ ಶಿಶುನಾಳ ಷರೀಫ ಮತ್ತು ಭಕ್ತ ಕನಕದಾಸರ ಪುಣ್ಯಭೂಮಿ. ತತ್ವ, ಆದರ್ಶ, ವೈಚಾರಿಕತೆಯ ಬೇರುಗಳು ಇಲ್ಲಿವೆ. ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ವೈಚಾರಿಕತೆ ಬಿಟ್ಟು ಕೆಲಸ ಮಾಡಲು ಸಾಧ್ಯವಿಲ್ಲ. ನಮ್ಮ ಅಸ್ಮಿತೆ, ಸ್ವಾಭಿಮಾನಕ್ಕಾಗಿ ಹೋರಾಟ ಮಾಡುವ ದಿನಗಳು ನಮ್ಮ ಮುಂದಿವೆ ಎಂದರು.

ADVERTISEMENT

ಏಪ್ರಿಲ್‌ 14ಕ್ಕೂ ಮುನ್ನ ಅಂಬೇಡ್ಕರ್‌ ಮೂರ್ತಿ ಸ್ಥಾಪನೆ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇನೆ. ಶಿಗ್ಗಾವಿ–ಸವಣೂರು ಏತ ನೀರಾವರಿ ಯೋಜನೆಯಡಿ 100ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗಿದೆ. ಹಳೆ ಬಸ್‌ ನಿಲ್ದಾಣ ಅಭಿವೃದ್ಧಿ ಮತ್ತು ಬಡವರಿಗೆ ಸೂರು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಶಿಗ್ಗಾವಿ ತಾಲ್ಲೂಕು ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಜನವರಿ 14ರಂದು ‘ಹರಜಾತ್ರೆ’ ನಡೆಯಲಿದೆ. ಹರಿದ್ವಾರದಂತೆ ಹರಿಹರವೂ ಪ್ರಸಿದ್ಧಿ ಪಡೆಯುತ್ತಿದೆ. ಅಲ್ಲಿ ಗಂಗಾರತಿ ನಡೆದರೆ, ಇಲ್ಲಿ ತುಂಗಾರತಿ ನಡೆಯುತ್ತದೆ. ‘ಹರ ಮಾಲೆ’ ವಿಶೇಷ ಕಾರ್ಯಕ್ರಮ ರೂಪಿಸಿದ್ದೇವೆ. ಡಿ.25ರಿಂದ ಪ್ರತಿಯೊಂದು ಮನೆಯಿಂದ ಒಬ್ಬರು ಹರಮಾಲೆ ಧರಿಸಿ, ತುಂಗಾ ಸ್ನಾಮ ಮಾಡಿ ಹರನಾಮ ಜಪದಲ್ಲಿ ಪಾಲ್ಗೊಳ್ಳಿ. ಅನ್ನ, ಅಕ್ಷರ, ಆಶ್ರಯ, ಆರೋಗ್ಯ, ಆಧ್ಯಾತ್ಮ ಎಂಬ ‘ಪಂಚದಾಸೋಹ’ಗಳನ್ನು ಮಠ ನಡೆಸುತ್ತಿದೆ ಎಂದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಕನ್ನಡ ಬಾವುಟಕ್ಕೆ ಬೆಂಕಿ, ಚನ್ಮಮ್ಮ ಮತ್ತು ರಾಯಣ್ಣ ಮೂರ್ತಿಗಳಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಅಧಿಕಾರಕ್ಕಾಗಿ ಎಂತಹ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಅವರ ಹೆಸರು ಶೀಘ್ರದಲ್ಲೇ ಬಹಿರಂಗವಾಗಲಿದೆ. ಪೊಲೀಸರಿಗೆ ಮುಕ್ತ ಅಧಿಕಾರ ನೀಡಿದರೆ, ಎಲ್ಲ ತಪ್ಪಿತಸ್ಥರು ಶೀಘ್ರದಲ್ಲೇ ಬಂಧನವಾಗಲಿದ್ದಾರೆ ಎಂದು ಹೇಳಿದರು.

ಅಕ್ಷರ ಕ್ರಾಂತಿ ಮಾಡಿದ ಅರಟಾಳ ರುದ್ರಗೌಡ್ರ ಹೆಸರಿನಲ್ಲಿ ವಸತಿ ಶಾಲೆ ಮತ್ತು ಹಾಸ್ಟೆಲ್‌ ನಿರ್ಮಾಣಕ್ಕೆ ಸಿಎಂ ಶೀಘ್ರ ಕ್ರಮ ಕೈಗೊಳ್ಳಬೇಕು. ಮಾಜಿ ಶಾಸಕ ಸೋಮಣ್ಣ ಬೇವಿನಮರದ ಅವರು 2 ಎಕರೆ ಜಮೀನು ನೀಡಬೇಕು ಎಂದು ಮನವಿ ಮಾಡಿದರು.

‘ಹುಬ್ಬಳ್ಳಿ ವೃತ್ತದ ಚನ್ನಮ್ಮನ ಮೂರ್ತಿ ಬದಲಿಸಿ’

ಹುಬ್ಬಳ್ಳಿ ನಗರದ ಬಸ್‌ ನಿಲ್ದಾಣದ ವೃತ್ತದಲ್ಲಿರುವ ಕಿತ್ತೂರು ಚನ್ನಮ್ಮನ ಮೂರ್ತಿ ನೋಡಿದರೆ, ದುರ್ಗದ ದ್ಯಾಮವ್ವನ ರೀತಿ ಕಾಣುತ್ತದೆ. ಶಿಗ್ಗಾವಿಯಲ್ಲಿ ಸ್ಥಾಪಿಸಿದ ಚನ್ನಮ್ಮನ ಮೂರ್ತಿಯ ಮಾದರಿಯಲ್ಲೇ ಹುಬ್ಬಳ್ಳಿ ಸರ್ಕಲ್‌ನಲ್ಲೂ ಸ್ಥಾಪಿಸಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

ಇದಕ್ಕೆ ದನಿಗೂಡಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು, ‘ಹುಬ್ಬಳ್ಳಿ ಸರ್ಕಲ್‌ಗೆ ಚೆನ್ನಾಗಿರುವ ಚನ್ಮಮ್ಮ ಮೂರ್ತಿ ಪ್ರತಿಷ್ಠಾಪಿಸಿ, ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗ ಚನ್ನಮ್ಮ ಮೂರ್ತಿ ಸ್ಥಾಪಿಸಬೇಕು. ಎಲ್ಲೆಲ್ಲಿ ಚನ್ನಮ್ಮ ಮೂರ್ತಿ ಇರುತ್ತದೆಯೇ ಅಲ್ಲಲ್ಲಿ ರಾಯಣ್ಣನ ಮೂರ್ತಿಗಳು ಇರಲಿ. ಕಾಕತಿ ಕೋಟೆ ಮತ್ತು ಕಿತ್ತೂರು ಕೋಟೆ ಹಾಳಾಗಿದ್ದು, ಅದರ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೂಡಲಸಂಗಮ ಪೀಠದ ಬಸಯಜಯ ಮೃತ್ಯುಂಜಯ ಸ್ವಾಮೀಜಿ, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಅರುಣ್‌ಕುಮಾರ್‌ ಪೂಜಾರ, ವಿಜಯಾನಂದ ಕಾಶಪ್ಪನವರ,ಪಂಚಮಸಾಲಿ ಸಮಾಜದ ಮುಖಂಡರಾದ ಬಿ.ಸಿ.ಉಮಾಪತಿ, ಬಸವರಾಜ ದಿಂಡೂರ, ಸೋಮನಗೌಡ ಪಾಟೀಲ, ಸಂಡೂರು ನಾಗನಗೌಡ, ಬಾವಿ ಬೆಟ್ಟಪ್ಪಾಜಿ, ಶಿವಾನಂದ ಬಾಗೂರ, ಮಲ್ಲಿಕಾರ್ಜುನ ಹಾವೇರಿ, ಸಂಗೀತ ನಿರ್ದೇಶಕ ಕೆ.ಕಲ್ಯಾಣ್‌ ಇದ್ದರು.

***

ಆತ್ಮಗೌರವಕ್ಕೆ ಧಕ್ಕೆ ಬಂದ ಕಾರಣ, ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದೆ. 2008ರಲ್ಲೇ ಬೊಮ್ಮಾಯಿ ಸಿಎಂ ಆಗುತ್ತಾರೆ ಎಂಬ ಭವಿಷ್ಯ ನುಡಿದಿದ್ದೆ

– ಸೋಮಣ್ಣ ಬೇವಿನಮರದ, ವಿಧಾನ ಪರಿಷತ್‌ ಮಾಜಿ ಸದಸ್ಯ

***

ವರದಾ ಮತ್ತು ಬೇಡ್ತಿ ನದಿ ಜೋಡಣೆಯಿಂದ ರೈತರ ಬದುಕು ಹಸನಾಗಲಿದೆ. ಸಿಎಂ ಅವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು

– ಮಂಜುನಾಥ ಕುನ್ನೂರ, ಮಾಜಿ ಸಂಸದ

***

ಹರಿಹರ ಪೀಠದಲ್ಲಿ ಜ.14ರಂದು ಉದ್ಯೋಗ ಮೇಳ ಆಯೋಜಿಸಿದ್ದು, ನಿರುದ್ಯೋಗ ಯುವಕ–ಯುವತಿಯರು ಸದುಪಯೋಗ ಪಡೆಯಬೇಕು

– ಮುರುಗೇಶ ನಿರಾಣಿ, ಬೃಹತ್‌ ಕೈಗಾರಿಕಾ ಸಚಿವ

***

ಬಿಜೆಪಿ ಮತ್ತು ಬೊಮ್ಮಾಯಿ ಅವರ ಹೆಸರು ಕೆಡಿಸುವ ಉದ್ದೇಶದಿಂದ ಸಮಾಜ ವಿರೋಧಿ ಕೃತ್ಯ ನಡೆಸುತ್ತಿರುವವರ ಬಣ್ಣ ಬಯಲಾಗಲಿ

– ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.