
ಹಾವೇರಿ: ಜಿಲ್ಲೆಯಿಂದ ಶಿರಸಿ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಕೊರತೆ ಹೆಚ್ಚಾಗಿದ್ದು, ಇದರಿಂದಾಗಿ ಶಾಲೆ–ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ನಿತ್ಯವೂ ಪರದಾಡುತ್ತಿದ್ದಾರೆ.
ಹಾವೇರಿ–ಶಿರಸಿ ಹಾಗೂ ಶಿರಸಿ–ಹಾವೇರಿ ಮಾರ್ಗದಲ್ಲಿ ಕೆಲವೇ ಬಸ್‌ಗಳು ಸಂಚರಿಸುತ್ತಿವೆ. ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಬಸ್‌ಗಳ ಸಂಚಾರವೇ ಬಂದ್ ಆಗುತ್ತಿದೆ. ಶಾಲೆಗೆ ಹೋಗಲು ಹಾಗೂ ಶಾಲೆಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಹಾವೇರಿ ಜಿಲ್ಲೆಯ ಗಡಿಭಾಗದ ಗ್ರಾಮಗಳ ವಿದ್ಯಾರ್ಥಿಗಳು, ಅಕ್ಕಿಆಲೂರು, ಹಾನಗಲ್‌ನಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ ಹಲವರು, ಶಿರಸಿಯಲ್ಲಿರುವ ಪ್ರತಿಷ್ಠಿತ ಶಾಲೆ–ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ.
ಇವರೆಲ್ಲರೂ ನಿತ್ಯವೂ ಶಾಲೆ–ಕಾಲೇಜಿಗೆ ಹೋಗಿ ಬರಲು ಬಸ್‌ಗಳನ್ನು ಅವಲಂಬಿಸಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಸಮರ್ಪಕವಾಗಿ ಬಸ್‌ಗಳ ವ್ಯವಸ್ಥೆ ಇಲ್ಲದಿದ್ದರಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
‘ಹಾವೇರಿ–ಶಿರಸಿ ಮಾರ್ಗದ ಬಸ್ ಅವಲಂಬಿಸಿ ಶಾಲೆಗೆ ಹೋಗುತ್ತಿದ್ದೇವೆ. ಶಾಲೆ ಮುಗಿಸಿ ಸಂಜೆ 4.30 ಗಂಟೆಗೆ ಅಕ್ಕಿಆಲೂರು ಬಸ್ ನಿಲ್ದಾಣಕ್ಕೆ ಬರುತ್ತೇವೆ. ಆದರೆ, ನಿಗದಿತ ಸಮಯಕ್ಕೆ ಬಸ್ ಬರುತ್ತಿಲ್ಲ. ಇದರಿಂದಾಗಿ ನಿತ್ಯವೂ ರಾತ್ರಿ 8 ಅಥವಾ ರಾತ್ರಿ 9 ಗಂಟೆಗೆ ಮನೆಗೆ ಹೋಗುತ್ತಿದ್ದೇವೆ’ ಎಂದು ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಂಡರು.
‘ಶಿರಸಿ ಮಾರ್ಗದ ರಸ್ತೆಯಿಂದ ಕಾಡಿನೊಳಗೆ ಮನೆಗಳಿವೆ. ಮುಖ್ಯರಸ್ತೆಯಲ್ಲಿ ಬಸ್‌ನಿಂದ ಇಳಿದು ನಡೆದುಕೊಂಡು ಮನೆಗೆ ಹೋಗಬೇಕು. ಬಸ್ ಬರುವುದು ತಡವಾಗುತ್ತಿರುವುದರಿಂದ, ಕತ್ತಲಿನಲ್ಲಿಯೇ ರಾತ್ರಿ ಕಾಡಿನೊಳಗೆ ನಡೆದುಕೊಂಡು ಭಯದಲ್ಲಿಯೇ ಮನೆ ತಲುಪುತ್ತಿದ್ದೇವೆ’ ಎಂದರು.
ಇನ್ನೊಬ್ಬ ವಿದ್ಯಾರ್ಥಿನಿ, ‘ಬೆಳಿಗ್ಗೆ ಹಾಗೂ ಸಂಜೆ ಎರಡೂ ಸಮಯದಲ್ಲೂ ಬಸ್ ತಡವಾಗುತ್ತಿದೆ. ಈ ಬಗ್ಗೆ ಡಿಪೊ ವ್ಯವಸ್ಥಾಪಕರಿಗೂ ಮನವಿ ಮಾಡಿದ್ದೇವೆ. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಶಾಲೆ–ಕಾಲೇಜು ಸಮಯಕ್ಕೆ ಬಸ್ ಬಿಡಬೇಕು. ಇಲ್ಲದಿದ್ದರೆ, ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ಏನಾದರೂ ಅನಾಹುತವಾದರೆ ಸಾರಿಗೆ ಸಂಸ್ಥೆಯವರು ಹಾಗೂ ಸರ್ಕಾರವೇ ಹೊಣೆ’ ಎಂದರು.
ಶಕ್ತಿ ಯೋಜನೆ ಜಾರಿಯಾದ ನಂತರ ಬಸ್‌ಗಳು ಸಂಪೂರ್ಣ ಭರ್ತಿಯಾಗಿ ಸಂಚರಿಸುತ್ತಿವೆ. ಬೆಳಿಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಹತ್ತುತ್ತಿದ್ದಾರೆ. ವಿದ್ಯಾರ್ಥಿಗಳು ಬಸ್ ಹತ್ತಿದರೆ ಜಾಗವಿರುವುದಿಲ್ಲವೆಂದು ಕೆಲ ಚಾಲಕರು ಸರಿಯಾದ ಸಮಯಕ್ಕೆ ಬಸ್ ಓಡಿಸುತ್ತಿಲ್ಲವೆಂಬ ಆರೋಪವಿದೆ. ‘ಸಾರಿಗೆ ಸಂಸ್ಥೆ ಬಸ್‌ನವರು ವಿದ್ಯಾರ್ಥಿಗಳನ್ನು ಕಂಡರೆ ಶತ್ರುಗಳ ರೀತಿ ನೋಡುತ್ತಿದ್ದಾರೆ. ಕೈ ಮಾಡಿದರೂ ನಿಲ್ಲುವುದಿಲ್ಲ. ವಿದ್ಯಾರ್ಥಿಗಳೆಲ್ಲರೂ ಬಸ್ ನಿಲ್ದಾಣದಲ್ಲಿ ನಿಂತರೂ ಬಸ್ ಬರುವುದಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು. ಇಲ್ಲದಿದ್ದರೆ ರಸ್ತೆಯಲ್ಲಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.