ಹಾವೇರಿ: ವೇತನ ಹಿಂಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಹಾವೇರಿಯಲ್ಲಿ ಮಾತ್ರ ಸ್ಥಳೀಯ ಬಸ್‌ಗಳ ಸಂಚಾರ ಯಥಾಪ್ರಕಾರ ಮುಂದುವರಿದಿದೆ.
ಮಂಗಳವಾರ ಬೆಳಿಗ್ಗೆಯಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ರಾಜ್ಯ ಮಟ್ಟದ ಸಂಘಟನೆ ಮುಖಂಡರು ತಿಳಿಸಿದ್ದರು. ಆದರೆ, ಹಾವೇರಿ ಜಿಲ್ಲೆಯ ಬಹುತೇಕ ನೌಕರರು ಬೆಳಿಗ್ಗೆಯೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಶಿಗ್ಗಾವಿ, ಸವಣೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಬಹುತೇಕ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಸ್ ಸಂಚಾರ ಸಹಜವಾಗಿದೆ.
ಶಾಲೆ- ಕಾಲೇಜು ವಿದ್ಯಾರ್ಥಿಗಳು, ನೌಕರರು, ದಿನಗೂಲಿ ಕಾರ್ಮಿಕರು ನಿತ್ಯವೂ ಬಸ್‌ನಲ್ಲಿ ಸಂಚರಿಸುತ್ತಾರೆ. ಮಂಗಳವಾರ ಎಲ್ಲರೂ ಯಥಾಪ್ರಕಾರ ಬಸ್ ಪ್ರಯಾಣ ಮಾಡಿದರು.
ಸ್ಥಳೀಯ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಆದರೆ, ಹೊರ ಜಿಲ್ಲೆಗಳಿಂದ ಬರಬೇಕಿದ್ದ ಹಾಗೂ ಹೊರ ಜಿಲ್ಲೆಗಳಿಗೆ ಹೋಗಬೇಕಿದ್ದ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬಂತು.
ಮುಷ್ಕರ ಹಿನ್ನೆಲೆಯಲ್ಲಿ ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ಹಾವೇರಿ ಕೇಂದ್ರ ಬಸ್ ನಿಲ್ದಾಣ ಹಾಗೂ ತಾಲ್ಲೂಕು ನಿಲ್ದಾಣಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.