ADVERTISEMENT

ಸೋರುತಿಹುದು ಹಾವೇರಿ ಜಿಲ್ಲಾಸ್ಪತ್ರೆ! ನಡುಗುವ ರೋಗಿಗಳು, ಬಾಣಂತಿಯರು..

ನವಜಾತ ಶಿಶುಗಳನ್ನು ಬೆಚ್ಚಗೆ ಇಡಲು ತಾಯಂದಿರ ಪರದಾಟ

ಸಿದ್ದು ಆರ್.ಜಿ.ಹಳ್ಳಿ
Published 24 ಜುಲೈ 2023, 21:05 IST
Last Updated 24 ಜುಲೈ 2023, 21:05 IST
ಹಾವೇರಿ ಜಿಲ್ಲಾಸ್ಪತ್ರೆಯ ತಾಯಂದಿರ ವಾರ್ಡ್‌ನಲ್ಲಿ ಮಳೆ ನೀರು ಸೋರುತ್ತಿರುವುದರಿಂದ ಬಕೆಟ್‌ ಇಟ್ಟಿರುವುದು
–ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಹಾವೇರಿ ಜಿಲ್ಲಾಸ್ಪತ್ರೆಯ ತಾಯಂದಿರ ವಾರ್ಡ್‌ನಲ್ಲಿ ಮಳೆ ನೀರು ಸೋರುತ್ತಿರುವುದರಿಂದ ಬಕೆಟ್‌ ಇಟ್ಟಿರುವುದು –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: ನಗರದ ಜಿಲ್ಲಾಸ್ಪತ್ರೆ ಕಟ್ಟಡವು ಮಳೆಯಿಂದ ವಿಪರೀತ ಸೋರುತ್ತಿದ್ದು, ನವಜಾತ ಶಿಶುಗಳನ್ನು ಚಳಿಯಿಂದ ರಕ್ಷಿಸಿ ಬೆಚ್ಚಗಿಡಲು ತಾಯಂದಿರು ಕಷ್ಟಪಡುತ್ತಿದ್ದಾರೆ. ಇಡೀ ಆಸ್ಪತ್ರೆ ಶೀತಮಯವಾಗಿದ್ದು ಗರ್ಭಿಣಿಯರು, ಬಾಣಂತಿಯರು, ವಯೋವೃದ್ಧರು ಮತ್ತು ರೋಗಿಗಳು ಚಳಿಯಿಂದ ನಡುಗುವಂತಾಗಿದೆ.

ನವಜಾತ ಶಿಶುಗಳ ತೀವ್ರ ನಿಗಾ ಘಟಕವೂ (ಎಸ್‌.ಎನ್‌.ಸಿ.ಯು) ಸೋರುತ್ತಿದ್ದು, ಕೃತಕ ಶಾಖೋಪಕರಣಗಳಲ್ಲಿ ಮಲಗಿರುವ ಎಳೆಯ ಕಂದಮ್ಮಗಳ ಸ್ಥಿತಿ ನೆನೆದು ವಾರ್ಡ್‌ ಹೊರಗಡೆ ಇರುವ ತಾಯಂದಿರು ಕಣ್ಣೀರು ಹಾಕುತ್ತಿದ್ದಾರೆ. ಮನೆಯಿಂದ ತಂದ ಬಟ್ಟೆಗಳನ್ನು ಹೊದಿಸಿ ಮಕ್ಕಳಿಗೆ ಶೀತವಾಗದಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ವೈದ್ಯಕೀಯ ವಾರ್ಡ್‌, ಮಕ್ಕಳ ಆರೋಗ್ಯ ಪುನಶ್ಚೇತನಾ ಕೇಂದ್ರ (ಎನ್‌.ಆರ್‌.ಸಿ), ಜನರಲ್‌ ವಾರ್ಡ್‌ ಸೇರಿ ಆಸ್ಪತ್ರೆಯ ಬಹುತೇಕ ಕೊಠಡಿಗಳು ಸೋರುತ್ತಿವೆ. ಮಳೆ ನೀರು ಗೋಡೆಗಳನ್ನು ಒದ್ದೆಯಾಗಿಸಿದೆ. ಬಹುತೇಕ ಕಡೆ ನೆಲದ ಮೇಲೆ ನೀರು ನಿಂತು ತೇವಮಯವಾಗಿದ್ದು, ಸ್ವಲ್ಪ ಆಯ ತಪ್ಪಿದರೂ ಗಾಯಗೊಳ್ಳುವುದು ನಿಶ್ಚಿತ. ಆಸ್ಪತ್ರೆಯ ಕಾರಿಡಾರ್‌ ಮತ್ತು ವಾರ್ಡ್‌ಗಳಲ್ಲಿ ತೊಟ್ಟಿಕ್ಕುವ ನೀರನ್ನು ಸಂಗ್ರಹಿಸಲು ಬಕೆಟ್‌ಗಳನ್ನು ಇಡಲಾಗಿದೆ.

ADVERTISEMENT
ಹಾವೇರಿ ಜಿಲ್ಲಾಸ್ಪತ್ರೆಯ ಪಡಸಾಲೆ ಸೋರುತ್ತಿರುವ ಕಾರಣ ಸಾಲಾಗಿ ಬಕೆಟ್‌ಗಳನ್ನು ಇಡಲಾಗಿದೆ 

ಕಾಮಗಾರಿಯಿಂದ ಸೋರಿಕೆ: ‘ಜಿಲ್ಲಾಸ್ಪತ್ರೆಯು 250 ಹಾಸಿಗೆಗಳ ಸಾಮರ್ಥ್ಯ ಹೊಂದಿದfದು, ಇದನ್ನು 350 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ಆಸ್ಪತ್ರೆಯ 3ನೇ ಅಂತಸ್ತಿನ ಮೇಲೆ ಕಟ್ಟಡ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದರ ಪರಿಣಾಮ ಕಟ್ಟಡ ಸೋರತೊಡಗಿದೆ. ಡ್ರಿಲ್ಲಿಂಗ್‌ ಉಪಕರಣಗಳು ಚಾವಣಿಯನ್ನು ತೂತು ಮಾಡಿದವು. ಪಿಲ್ಲರ್‌ಗಳನ್ನು ಕೂರಿಸಲು ಸಿಮೆಂಟ್‌ ಕಿತ್ತು ಹಾಕಿದ್ದರಿಂದ ಇಡೀ ಆಸ್ಪತ್ರೆ ತೊಟ್ಟಿಕ್ಕುತ್ತಿದೆ’ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದರು.

ಪಡಸಾಲೆಯಲ್ಲಿ ರೋಗಿಗಳು: ‘ಎರಡು ತಿಂಗಳಿನ ಮೊಮ್ಮಗನನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದೇನೆ. ನಾವು ಇದ್ದ ವಾರ್ಡ್‌ನ ತುಂಬಾ ನೀರು ತೊಟ್ಟಿಕ್ಕುತ್ತಿತ್ತು. ಎಲ್ಲ ರೋಗಿಗಳನ್ನು ಆಸ್ಪತ್ರೆಯ ಪಡಸಾಲೆಯಲ್ಲಿ ಮಲಗಿಸಿದ್ದಾರೆ. ಮೇಲೆ, ಕೆಳಗೆ ಎಲ್ಲ ಕಡೆ ನೀರು ಹರಿಯುತ್ತದೆ. ಶೀತ–ಕಫದಿಂದ ಬಳಲುತ್ತಿರುವ ಮೊಮ್ಮಗನಿಗೆ ಸ್ವಲ್ಪವೂ ಗುಣವಾಗಿಲ್ಲ’ ಎಂದು ಸವಣೂರಿನ ಕಮಲ್‌ಭಾಷಾ ಅಳಲು ತೋಡಿಕೊಂಡರು.

‘ಚಾವಣಿ ಸೋರುತ್ತಿದೆ, ಗೋಡೆಗಳು ಒದ್ದೆಯಾಗಿವೆ. ಕಿಟಕಿ ಗಾಜು ಒಡೆದಿದ್ದು, ಶೀತಗಾಳಿಯಿಂದ ರಕ್ಷಿಸಿಕೊಳ್ಳಲು ಕಿಟಕಿಗೆ ಅಡ್ಡಲಾಗಿ ನಾವೇ ಬಟ್ಟೆ ಕಟ್ಟಿದ್ದೇವೆ. ನೆಲದ ಮೇಲೆ ನೀರು ನಿಲ್ಲುವುದರಿಂದ ಸೊಳ್ಳೆಗಳು ಜಾಸ್ತಿಯಾಗಿವೆ. ಈ ವಾರ್ಡ್‌ನಲ್ಲಿ 2–3 ದಿನಗಳ ಹಿಂದೆ ಜನಿಸಿದ ಕಂದಮ್ಮಗಳಿವೆ. ಯಾವಾಗ ಮನೆಗೆ ಹೋಗುತ್ತೆವೇಯೋ ಅನ್ನಿಸಿದೆ’ ಎಂದು ತಾಯಂದಿರ ವಾರ್ಡ್‌ನಲ್ಲಿರುವ ರೋಹಿಣಿ ಹಿರೇಮಠ, ಕಾವ್ಯಶ್ರೀ ಕಣ್ಣೀರು ಹಾಕಿದರು.

ಸ್ವಿಚ್‌ ಮುಟ್ಟಲು ಭಯ: ‘ಗೋಡೆಗಳು ಒದ್ದೆಯಾಗಿರುವುದರಿಂದ ಫ್ಯಾನ್‌ ಸ್ವಿಚ್‌ಗಳನ್ನು ಮುಟ್ಟಲು ಭಯವಾಗುತ್ತದೆ. ಆಸ್ಪತ್ರೆಯ ಕೊಠಡಿಗಳ ಪಕ್ಕ ಇರುವ ವರಾಂಡದಲ್ಲೇ ಹಳೆಯ ಹಾಸಿಗೆ, ದಿಂಬು, ವೈದ್ಯಕೀಯ ತ್ಯಾಜ್ಯಗಳನ್ನು ಬಿಸಾಡಲಾಗಿದೆ. ಮಳೆಗೆ ತೊಯ್ದು ದುರ್ವಾಸನೆ ಬೀರುತ್ತಿವೆ. ರೋಗ ನಿವಾರಿಸಬೇಕಾದ ಆಸ್ಪತ್ರೆಯೇ ರೋಗ ಹರಡುವ ತಾಣವಾಗಿದೆ’ ಎಂದು ರೋಗಿಗಳ ಸಂಬಂಧಿಕರು ದೂರಿದರು. 

ಹಾವೇರಿ ಜಿಲ್ಲಾಸ್ಪತ್ರೆಯ ವರಾಂಡದಲ್ಲಿ ಹಳೆಯ ಹಾಸಿಗೆ ದಿಂಬು ತ್ಯಾಜ್ಯಗಳನ್ನು ಸುರಿದಿದ್ದು  ಮಳೆಗೆ ತೋಯ್ದು ದುರ್ವಾಸನೆ ಬೀರುತ್ತಿದೆ 
ಜಿಲ್ಲಾಸ್ಪತ್ರೆ ಕಟ್ಟಡದ ಮೇಲ್ಭಾಗ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಸೋರುತ್ತಿದೆ. ಸಿಮೆಂಟ್‌ ಹಾಕಿ ಸೋರಿಕೆ ತಡೆಗಟ್ಟಲು ಎಂಜಿನಿಯರ್‌ಗೆ ಸೂಚಿಸಿದ್ದೇನೆ.
ಡಾ.ಪಿ.ಆರ್‌.ಹಾವನೂರು ಜಿಲ್ಲಾ ಶಸ್ತ್ರಚಿಕಿತ್ಸಕ ಹಾವೇರಿ ಜಿಲ್ಲಾಸ್ಪತ್ರೆ
ಮಗಳು ಕೆಮ್ಮು ಜ್ವರದಿಂದ ಬಳಲುತ್ತಿದ್ದಾಳೆ. ಸೋರುತ್ತಿರುವ ಕಾರಣ ವಾರ್ಡ್‌ ಖಾಲಿ ಮಾಡಿಸಿ ವರಾಂಡದಲ್ಲಿ ಹಾಕಿದ್ದಾರೆ. ಈ ಶೀತದ ವಾತಾವರಣದಲ್ಲಿ ಹುಷಾರಾಗಲು ಸಾಧ್ಯವೇ?
ಪುಷ್ಪಾ ಕಂಬಳಿ ಹಾವೇರಿ
‘ಮಕ್ಕಳ ವಾರ್ಡ್‌’ ಸೋರುತ್ತಿದೆ ಎಂದು ಆಸ್ಪತ್ರೆಯ ಪಡಸಾಲೆಗೆ ಬೆಡ್‌ಗಳನ್ನು ಸ್ಥಳಾಂತರ ಮಾಡಲಾಗಿದ್ದು ತಾಯಿಯೊಬ್ಬರು ಮಗುವನ್ನು ಸಂತೈಸುತ್ತಿರುವುದು   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.