ಹಾವೇರಿ: ‘ರಾಜ್ಯದಲ್ಲಿ ಬಿಜೆಪಿ 28 ಕ್ಷೇತ್ರಗಳನ್ನು ಗೆಲ್ಲುತ್ತೆ. ಟಿಕೆಟ್ ಹಂಚಿಕೆ ವಿಷಯದಲ್ಲಿ ಗೊಂದಲವಿಲ್ಲ. ಟಿಕೆಟ್ ಕೇಳುವುದು ಕಾರ್ಯಕರ್ತರ ಹಕ್ಕು. ಹೈಕಮಾಂಡ್ ನಿಶ್ಚಯಿಸಿ, ಯಾರಿಗೆ ಟಿಕೆಟ್ ಕೊಡುತ್ತದೋ ಉಳಿದವರು ಅವರಿಗೆ ಬೆಂಬಲ ನೀಡುವ ಪದ್ಧತಿ ಬಿಜೆಪಿಯಲ್ಲಿದೆ. ಗುರು-ಹಿರಿಯರ ಆಶೀರ್ವಾದದಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ’ ಎಂದು ಕೆ.ಇ. ಕಾಂತೇಶ ಹೇಳಿದರು.
ನಗರದ ಸಿಂದಗಿಮಠಕ್ಕೆ ಸೋಮವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಸಿಂದಗಿಮಠಕ್ಕೆ ನಡೆದುಕೊಂಡು ಬರುತ್ತಿದ್ದೇವೆ. ಸಿಂದಗಿಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದೇವೆ. ಯಡಿಯೂರಪ್ಪನವರು ನಿನ್ನೆ ಆಶೀರ್ವಾದ ಮಾಡಿದ್ದಾರೆ. ನಾನು, ನನ್ನ ತಂದೆ ದೆಹಲಿಗೆ ಹೋಗುತ್ತಿಲ್ಲ. ಸಭೆ ಮುಗಿದ ಮೇಲೆ ಸಿಹಿ ಸುದ್ದಿ ಸಿಗುತ್ತದೆ. ಎಲ್ಲರ ಬೆಂಬಲ ಬಿಜೆಪಿ ಮೇಲಿರಲಿ’ ಎಂದರು.
‘ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ.ಪಾಟೀಲ ಹೆಸರು ನಿಗದಿಯಾದರೂ ನಾನು ಬೆಂಬಲಿಸುವೆ. ಯಾರೇ ಅಭ್ಯರ್ಥಿಯಾದರೂ ನಾನು ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುವೆ. ನಾವೆಲ್ಲರೂ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು, ಬೆಂಬಲಿಗರು ತಾಳ್ಮೆಯಿಂದ ಇರಬೇಕು. ಪಕ್ಷ ತೀರ್ಮಾನ ಮಾಡಿದ ಮೇಲೆ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದರು.
ಕಳೆದ ಚುನಾವಣೆಯಲ್ಲಿ ಚುಣಾವಣಾ ರಂಗದಿಂದ ಹೊರ ಬರುವಂತೆ ಹೈಕಮಾಂಡ್ ತಿಳಿಸಿತ್ತು. ನನಗೆ ಟಿಕೆಟ್ ನೀಡಿದರೂ ಸಂತೋಷದಿಂದ ಕೆಲಸ ಮಾಡುತ್ತೇನೆ, ಬೇರೆಯವರಿಗೆ ಕೊಟ್ಟರೂ ಸಂತೋಷದಿಂದ ಕೆಲಸ ಮಾಡುತ್ತೇನೆ. ತ್ಯಾಗದ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.