ಹಾವೇರಿ: ‘ಭಾರತದಲ್ಲಿ ವಿದೇಶಿಗರ ಕೈವಾಡದಿಂದ ನಾನಾ ಕೃತ್ಯಗಳು ನಡೆಯುತ್ತಿವೆ. ಅದರಲ್ಲಿ ಲವ್ ಜಿಹಾದ್ ಸಹ ಒಂದು. ತಪ್ಪು–ಒಪ್ಪು ಅರಿಯದ ಪ್ರಾಯದಲ್ಲಿರುವ ಯುವತಿಯರ ಮನಃ ಪರಿವರ್ತನೆ ಮಾಡಲಾಗುತ್ತಿದೆ. ಹಣ, ಚಿನ್ನಾಭರಣ ಹಾಗೂ ಇತರ ವಸ್ತುಗಳ ಆಮಿಷವೊಡ್ಡಿ ಯುವತಿಯರನ್ನು ವಿದೇಶಕ್ಕೆ ಸಾಗಣೆ ಮಾಡಲಾಗುತ್ತಿದೆ’ ಎಂದು ಚರ್ಯಾಶಿರೋಮಣಿ ವಿದಿತಸಾಗರಜಿ ಮಹಾರಾಜರು ಆತಂಕ ವ್ಯಕ್ತಪಡಿಸಿದರು.
ನಗರದ ಭಗವಾನ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘7ನೇ ದೀಕ್ಷಾ ಮಹೋತ್ಸವ ಕಾರ್ಯಕ್ರಮ’ದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ವಿದೇಶಿಗರ ಕೈವಾಡದಿಂದಾಗಿ ಭಾರತದ ಲಕ್ಷಾಂತರ ನಿವಾಸಿಗಳು ಮೋಸ ಹೋಗಿದ್ದಾರೆ. ಆದರೆ, ಅವರು ಈ ಸತ್ಯವನ್ನು ಜಗತ್ತಿನ ಮುಂದೆ ಹೇಳುತ್ತಿಲ್ಲ. ಇನ್ನು ಮುಂದೆ ಭಾರತೀಯರು, ಮೋಸ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.
‘ಹಣದ ಆಮಿಷಕ್ಕೆ ಮನೆಯ ಕನ್ಯೆಯರನ್ನು ಹೊರದೇಶಕ್ಕೆ ಮಾರಾಟ ಮಾಡುವ ಸಂಸ್ಕೃತಿ ನಮ್ಮದಲ್ಲ. ಹಣದಾಸೆಗೆ ಒಳಗಾಗದೇ ಭಾರತದ ಸಂಸ್ಕೃತಿ, ಸಮಾಜ, ಧರ್ಮವನ್ನು ಉಳಿಸಬೇಕು. ನಮ್ಮದೇ ಧರ್ಮದ ಪರಿವಾರ, ಸಂಬಂಧಿಕರಿಗೆ ಮಾತ್ರ ಕನ್ಯೆಯರನ್ನು ಕೊಟ್ಟು ಸಂಬಂಧ ಬೆಳೆಸಬೇಕು. ಈ ಮೂಲಕ ರಾಷ್ಟ್ರ ಉಳಿಸಬೇಕು’ ಎಂದು ತಿಳಿಸಿದರು.
‘ಅಹಿಂಸಾ ಧರ್ಮ ಶ್ರೇಷ್ಠವಾದದ್ದು. ಇಡೀ ವಿಶ್ವಕ್ಕೆ, ಭಾರತ ದೇಶ ದೇವಸ್ಥಾನವಾಗಿದೆ. ಪೂಜನೀಯ ಭಾವದಿಂದ ನೋಡಲಾಗುತ್ತಿದೆ. ನಾವೆಲ್ಲರೂ ಜಾತಿ, ಧರ್ಮ, ಪಂಗಡ ಎನ್ನದೇ ಅಹಿಂಸಾ ಧರ್ಮವನ್ನು ಪರಿಪಾಲಿಸಬೇಕು. ಹಿಂದೂಗಳು, ಜೈನರು ಹಾಗೂ ಎಲ್ಲ ಅಹಿಂಸೋಧರ್ಮ ಬಾಂಧವರು ಒಗ್ಗಟ್ಟಾಗಬೇಕು. ಭಾರತದ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳು ಒಂದೇ ಆಗಿರಬೇಕು. ಪೂರ್ವಜರು, ಶ್ರೀರಾಮ, ಆಂಜನೇಯ ಮಾಡಿದ ಧರ್ಮ ಬೋಧನೆ ಹಾಗೂ ಸಂಸ್ಕೃತಿಯನ್ನು ಹಾಳು ಮಾಡಬಾರದು. ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ’ ಎಂದರು.
ಉಪಜಾತಿ ಅಗತ್ಯವಿಲ್ಲ: ‘ಜೈನ ಸಮುದಾಯದವರು, ಜಾತಿ ಸಮೀಕ್ಷೆಯಲ್ಲಿ ಜೈನ ಧರ್ಮವನ್ನು ಮಾತ್ರ ಉಲ್ಲೇಖ ಮಾಡಬೇಕು. ಉಪಜಾತಿ ಬರೆಯುವ ಅವಶ್ಯಕತೆ ಇಲ್ಲ. ಉಪಜಾತಿ ಬರೆಸಿದರೆ, ಸಮಸ್ಯೆಗಳು ಹೆಚ್ಚಾಗುತ್ತವೆ’ ಎಂದು ವಿದಿತಸಾಗರಜಿ ಮಹಾರಾಜರು ಹೇಳಿದರು.
ಮಹಾವೀರ ಬೈಯಾಜಿ, ಮದನಕುಮಾರ ಜೈನ್, ಭರತ ಹಜಾರೆ, ಮಂಜುನಾಥ ಲಂಗೋಟಿ, ಸುಭಾಸ ಪಾಟೀಲ, ಸುಮಂತ ಪತ್ರಾವಳಿ, ಸಂಜೀವ ಇಂಡಿ, ಎಸ್.ಎ. ವಜ್ರಕುಮಾರ, ಮಹಾವೀರ ಕಳಸೂರ ಇದ್ದರು.
ಧರ್ಮಸ್ಥಳದ ಬಗ್ಗೆ ಹಲವರು ಅಪಪ್ರಚಾರ ಮಾಡುತ್ತಾರೆ. ಆದರೆ ವಸ್ತುಸ್ಥಿತಿಯನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಧರ್ಮಸ್ಥಳದ ಸತ್ಯ –ಧರ್ಮದ ಬಗ್ಗೆ ನಾವು ಹೋರಾಟ ಮಾಡಬೇಕುಚರ್ಯಾಶಿರೋಮಣಿ ವಿದಿತಸಾಗರಜಿ ಮಹಾರಾಜರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.