
ಹಾವೇರಿ: ‘ವೃತ್ತಿಯಿಂದ ಕಲ್ಯಾಣದ ಶರಣರ ವಸ್ತ್ರಗಳ ಮೈಲಿಗೆಯನ್ನು ತೊಳೆಯುತ್ತಿದ್ದ ಮಡಿವಾಳ ಮಾಚಿದೇವರು, ವಚನಗಳ ಮೂಲಕ ಮನದ ಮೈಲಿಗೆಯನ್ನು ಕಳೆಯುವ ಮಹಾಕಾಯಕ ಮಾಡಿದ್ದಾರೆ’ ಎಂದು ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಹೊಸಮಠದ ಬಸವ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಶರಣ ಸಂಗಮ ಹಾಗೂ ವೀರ ಗಣಾಚಾರಿ ಮಡಿವಾಳ ಮಾಚಿದೇವ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘12ನೇ ಶತಮಾನದ ಕಾಯಕಜೀವಿ ವಚನಕಾರರಲ್ಲಿ ಮಡಿವಾಳ ಮಾಚಿದೇವರದ್ದು ಎದ್ದು ಕಾಣುವ ಹೆಸರು. ಮಾಚಿದೇವ ಕಲಿದೇವರ ದೇವ ಅಂಕಿತದಲ್ಲಿ ಅಧಿಕ ಸಂಖ್ಯೆ ವಚನ ರಚನೆ ಮಾಡಿದ್ದಾರೆ. ಭಾವ ಶುದ್ಧವಾಗಿ ಇಪ್ಪುದು ಗುರುಪೂಜೆ, ಜ್ಞಾನ ಸಿದ್ದವಾಗಿಪುದು ಲಿಂಗ ಪೂಜೆ, ತ್ರಿಕರಣ ಶುದ್ಧವಾಗಿ ತ್ರಿವಿಧ ಮಲ ಶುದ್ಧವಾಗಿ ನಿಂದುದೇ ಜಂಗಮ ಪೂಜೆ. ಬೀಜದೊಳಗಡೆಗಿದ ವೃಕ್ಷದಂತೆ, ನೇತ್ರದೊಳಡಗಿದ ಆಕಾಶದಂತೆ, ಕನ್ನಡಿಯೊಳಗಿದ ಕರಿಯಂತೆ ಮೇಘದ ಮರೆಯೊಳಗದ ಸೂರ್ಯನಂತೆ, ಪರಮಾತ್ಮನು ಪ್ರತಿಯೊಬ್ಬರ ಅಂತರಂಗದ ಅರಿವಿನ ಮೂಲಕ ಕಾಣಬೇಕು ಎಂಬುದಾಗಿ ಅವರು ವಚನದಲ್ಲಿ ಹೇಳಿದ್ದಾರೆ’ ಎಂದು ತಿಳಿಸಿದರು.
ಅಕ್ಕನ ಬಳಗದ ಮಾತೆಯವರು ವಚನ ಪ್ರಾರ್ಥನೆ ಸಲ್ಲಿಸಿದರು. ಹುಬ್ಬಳ್ಳಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಕ್ತಾರ ಸುಧಾಕರ ಶೆಟ್ಟಿ, ಕಮಲಾ ಬುಕ್ಕಶೆಟ್ಟಿ. ಡಾ.ಉಮಾ ಬಳಿಗಾರ, ರಕ್ಷಿತಾ ಮಡಿವಾಳರ, ಚಂಪಾ ಹುಣಸಿಕಟ್ಟಿ, ರೇಖಾ ಅಂಗಡಿ, ರೂಪಾ ಸೋಬಾನಿ, ಸೌರಭ ಕಲಾಲ ಇತರರಿದ್ದರು.