ADVERTISEMENT

ಮಹಾ ಶಿವರಾತ್ರಿ ಹಬ್ಬ | ಉಪವಾಸ ವ್ರತ: ಶಿವನಾಮ ಜಪಿಸಿದ ಹಾವೇರಿ ಜನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 7:43 IST
Last Updated 16 ಫೆಬ್ರುವರಿ 2026, 7:43 IST
ಹಾವೇರಿ ಅಶ್ವಿನಿನಗರದಲ್ಲಿ ಶಿವನ ಮೂರ್ತಿಗೆ ಭಕ್ತರು ಭಾನುವಾರ ಪೂಜೆ ಸಲ್ಲಿಸಿದರು
ಹಾವೇರಿ ಅಶ್ವಿನಿನಗರದಲ್ಲಿ ಶಿವನ ಮೂರ್ತಿಗೆ ಭಕ್ತರು ಭಾನುವಾರ ಪೂಜೆ ಸಲ್ಲಿಸಿದರು   

ಹಾವೇರಿ: ಜಿಲ್ಲೆಯಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಭಾನುವಾರ ಸಡಗರ ಸಂಭ್ರಮ ಹಾಗೂ ಭಕ್ತಿಯಿಂದ ಆಚರಿಸಲಾಯಿತು.

ಶಿವ ದೇವರ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ರುದ್ರಾಭಿಷೇಕ, ವಿಶೇಷ ಪೂಜೆಗಳು ನಡೆದವು. ಭಕ್ತರು, ನಸುಕಿನಿಂದಲೇ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಶಿವನ ನಾಮ ಜಪಿಸಿದರು. ಹೂವು, ಪುಷ್ಪಗಳನ್ನು ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಹಾವೇರಿ, ಹಾನಗಲ್, ರಾಣೆಬೆನ್ನೂರು, ರಟ್ಟೀಹಳ್ಳಿ, ಹಿರೇಕೆರೂರು, ಬ್ಯಾಡಗಿ, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಶಿವರಾತ್ರಿ ಸಂಭ್ರಮ ಕಂಡುಬಂತು. ಮಹಿಳೆಯರು, ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟುಕೊಂಡು ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಮಾಡಿದರು.

ADVERTISEMENT

ಶಿವನ ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ದೇವಗಿರಿ ಬಳಿಯ ವರದಾ ನದಿ ತೀರದಲ್ಲಿರುವ ದೇವಸ್ಥಾನದಲ್ಲಿಯೂ ಭಕ್ತರು ಪೂಜೆ ಸಲ್ಲಿಸಿದರು.

ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನ, ಬಸವೇಶ್ವರನಗರ–ಅಶ್ವಿನಿನಗರದ ಈಶ್ವರ ದೇವಸ್ಥಾನ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ಶಿವಾಲಯದಲ್ಲಿಯೂ ವಿಶೇಷ ಪೂಜೆಗಳು ನಡೆದವು. ಶಿವಲಿಂಗ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಭಕ್ತರು ನಮನ ಸಲ್ಲಿಸಿದರು. ವಾಹನಗಳ ಮೇಲೆ ಶಿವಲಿಂಗದ ರೂಪಕವಿಟ್ಟು ಮೆರವಣಿಗೆ ನಡೆಯಿತು.

ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾತ್ರಿಯೂ ದೇವಸ್ಥಾನಗಳಲ್ಲಿ ಪೂರ್ಣ ಪೂಜೆ, ಅಭಿಷೇಕಗಳು ನೆರವೇರಿದವು. ಈಶ್ವರ, ಮಹಾದೇವ ಸೇರಿದಂತೆ ಹಲವು ನಾಮಗಳನ್ನು ಜಪಿಸಿ ಶಿವನನ್ನು ಸ್ಮರಿಸಿದರು. ದೇವಸ್ಥಾನಗಳಲ್ಲಿ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಭಾನುವಾರ ಸರ್ಕಾರಿ ರಜೆ ದಿನವಾಗಿದ್ದರಿಂದ, ಬೆಳಿಗ್ಗೆ ಹಾಗೂ ಸಂಜೆ ಎರಡೂ ಸಮಯದಲ್ಲೂ ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ದೇವರಿಗೆ ನಮಿಸಿ ನೈವೈದ್ಯ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಭಕ್ತರು ಪ್ರಸಾದ ಸ್ವೀಕರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.