‘ಜಿಲ್ಲೆಯಲ್ಲಿ ಮೈಕ್ರೊ ಫೈನಾನ್ಸ್‌ನವರ ಹಾವಳಿ ಹೆಚ್ಚಾಗಿದ್ದು, ಅವರಿಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿ ಸಂಸದ ಬಸವರಾಜ ಬೊಮ್ಮಾಯಿ ಅವರ ಹಾವೇರಿಯ ಕಚೇರಿ ಎದುರು ನೊಂದ ಜನರು ಗುರುವಾರ ಪ್ರತಿಭಟನೆ ನಡೆಸಿದರು
ಹಾವೇರಿ: ‘ಜಿಲ್ಲೆಯಲ್ಲಿ ಮೈಕ್ರೊ ಫೈನಾನ್ಸ್‌ನವರ ಹಾವಳಿ ಹೆಚ್ಚಾಗಿದ್ದು, ಅವರಿಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿ ಸಂಸದ ಬಸವರಾಜ ಬೊಮ್ಮಾಯಿ ಅವರ ಕಚೇರಿ ಎದುರು ನೊಂದ ಜನರು ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಸಂಸದರ ಕಚೇರಿ ಎದುರು ಕುಳಿತಿದ್ದ ಪ್ರತಿಭಟನಕಾರರು, ‘ಮೈಕ್ರೊ ಫೈನಾನ್ಸ್‌ನವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಜಿಲ್ಲೆಯಲ್ಲಿ ಖಾಸಗಿ ಮೈಕ್ರೊ ಫೈನಾನ್ಸ್ ಹಾವಳಿ ವಿಪರೀತವಾಗಿದೆ. ಸಾಲ ಪಡೆದ ಬಡ ಹೆಣ್ಣು ಮಕ್ಕಳು ಬೀದಿಗೆ ಬಂದಿದ್ದಾರೆ. ಫೈನಾನ್ಸ್ ಅವರ ದಬ್ಬಾಳಿಕೆಯಿಂದ ಹಲವರು ಕುಟುಂಬ ಸಮೇತ ಊರು ಬಿಟ್ಟು ಹೋಗಿದ್ದಾರೆ. ಕೂಡಲೇ, ಫೈನಾನ್ಸ್ ಕಡೆಯಿಂದ ಪಡೆದಿರುವ ಎಲ್ಲ ಸಾಲವನ್ನು ಮನ್ನಾ ಮಾಡಬೇಕು. ಅವರಿಗೆ ರಕ್ಷಣೆ ಕೊಟ್ಟು ಗೌರವದಿಂದ ಜೀವನ ನಡೆಸಲು ಅವಕಾಶ ನೀಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
‘ಬಡವರನ್ನು ಗುರಿಯಾಗಿಸಿಕೊಂಡು ಸಾಲ ನೀಡುವ ಫೈನಾನ್ಸ್‌ನವರು, ಸಾಲ ನೀಡಿದ ಮೇಲೆ ಅದರ ವಸೂಲಿಗಾಗಿ ಕಿರಕುಳ ನೀಡುತ್ತಿದ್ದಾರೆ. ದಿನದ ಕೂಲಿ ನಂಬಿ ಬದುಕುತ್ತಿರುವ ಬಡವರು, ಫೈನಾನ್ಸ್ ಕಿರುಕುಳದಿಂದ ಬೇಸತ್ತಿದ್ದಾರೆ. ಫೈನಾನ್ಸ್‌ನವರು ಮನೆ ಬಾಗಿಲಿಗೆ ಹೋಗಿ ದಬ್ಬಾಳಿಕೆ, ಕಿರುಕುಳ, ಗುಂಡಾ ವರ್ತನೆ ತೋರುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳು ಬಡವರಿಗೆ ಸರಳ ರೀತಿಯ ಸಾಲ ವಿತರಿಸದಿದ್ದರಿಂದ, ಬಡವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಫೈನಾನ್ಸ್‌ನವರಿಂದ ಪಡೆದಿರುವ ಸಾಲ ಹಾಗೂ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಕಚೇರಿ ಸಿಬ್ಬಂದಿಯ ಮೂಲಕ ಸಂಸದ ಬಸವರಾಜ ಬೊಮ್ಮಾಯಿಗೆ ಪ್ರತಿಭಟನಕಾರರು ಮನವಿ ಪತ್ರ ಸಲ್ಲಿಸಿದರು.
ಮುಖಂಡರಾದ ಹನುಮಂತಪ್ಪ ಕಬ್ಬಾರ, ರಾಜಶೇಖರ ದೂದಿಹಳ್ಳಿ, ಮಹೇಶ ಕೊಟ್ಟೂರ, ಹನುಮಂತಪ್ಪ ದೀವಗಿಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.