ಹಾವೇರಿ: ಅಪಘಾತದ ಸಂದರ್ಭದಲ್ಲಿ ಸಾವುಗಳನ್ನು ತಡೆಯಲು ರಾಜ್ಯ ಸರ್ಕಾರ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೊಳಿಸಿದೆ. ಆದರೆ, ಶಿಗ್ಗಾವಿ ಶಾಸಕ ಯಾಸೀರ ಅಹ್ಮದ್ ಖಾನ್ ಅವರು ಶನಿವಾರ ಹೆಲ್ಮೆಟ್ ರಹಿತವಾಗಿ ದ್ವಿಚಕ್ರ ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿರುವ ಆರೋಪ ವ್ಯಕ್ತವಾಗಿದೆ.
ಬೈಕ್‌ಗಳಿಂದ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತಲೆಗೆ ಪೆಟ್ಟು ಬಿದ್ದು ಮೃತಪಟ್ಟವರ ಸಂಖ್ಯೆ ಹೆಚ್ಚಿದೆ. ಇದೇ ಕಾರಣಕ್ಕೆ ಬೈಕ್ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಬಹುತೇಕರು ಹೆಲ್ಮೆಟ್ ಧರಿಸುವುದಿಲ್ಲ. ಕಾನೂನು ರೂಪಿಸುವ ವಿಧಾನಸಭೆಯ ಶಾಸಕರಾದ ಪಠಾಣ ಸಹ ಹೆಲ್ಮೆಟ್ ಧರಿಸದಿದ್ದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸವಣೂರಿನಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಲು ಶಾಸಕ ಪಠಾಣ, ತಾವೇ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಸುತ್ತಾಡಿದ್ದಾರೆ. ಬೆಂಬಲಿಗರು ಸಹ ಅವರನ್ನು ಹಿಂಬಾಲಿಸಿದ್ದರು. ಈ ಸಂದರ್ಭದಲ್ಲಿ ಪಠಾಣ ಹಾಗೂ ಬೆಂಬಲಿಗರು, ಯಾರೊಬ್ಬರೂ ಹೆಲ್ಮೆಟ್ ಧರಿಸಿಲ್ಲ. ಶಾಸಕರ ಓಡಾಟದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
‘ಅಪಘಾತದಲ್ಲಿ ಹೆಲ್ಮೆಟ್ ಇಲ್ಲದೇ ಸಾಯುವವರ ಸಂಖ್ಯೆ ಹೆಚ್ಚಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರವೇ ಹೆಲ್ಮೆಟ್ ಕಡ್ಡಾಯ ನಿಯಮ ರೂಪಿಸಿದೆ. ಈ ಬಗ್ಗೆ ಜಾಗೃತಿ ಸಹ ಮೂಡಿಸುತ್ತಿದೆ. ಶಾಸಕರೇ ಈ ನಿಯಮವನ್ನು ಪಾಲಿಸದಿದ್ದರೆ, ಸಾಮಾನ್ಯ ಜನರು ಹೇಗೆ ಪಾಲಿಸುತ್ತಾರೆ. ಸಂಬಂಧಪಟ್ಟ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು, ಹೆಲ್ಮೆಟ್ ರಹಿತ ಸವಾರಿ ಮಾಡಿರುವ ಶಾಸಕರಿಗೆ ದಂಡ ವಿಧಿಸಬೇಕು. ಇತರರಿಗೆ ಇದೊಂದು ಪಾಠವಾಗಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.
ಹೆಲ್ಮೆಟ್ ರಹಿತ ಸವಾರಿ ಬಗ್ಗೆ ಪ್ರತಿಕ್ರಿಯೆ ಪಡೆಯಲು ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.