ಮೊಬೈಲ್
ರಾಣೆಬೆನ್ನೂರು (ಹಾವೇರಿ ಜಿಲ್ಲೆ): ನಗರದ ಕೂನಬೇವು ಪ್ಲಾಟ್ ರಸ್ತೆಯ ಎಂ.ಜಿ. ಪಾಟೀಲ ಅವರ ಜೀನ್ ಕಾಂಪೌಂಡ್ ಆವರಣದಲ್ಲಿರುವ ಮನೆಯಲ್ಲಿ ನಡೆದಿದ್ದ ಲಲಿತಾ ಕರಬಸಪ್ಪ ಬ್ಯಾಡಗಿ (42) ಎಂಬುವವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಆರೋಪಿ ಚಂದ್ರಪ್ಪ ಶಿವಲಿಂಗಪ್ಪ ಸಣ್ಣಮಲ್ಲಪ್ಪನವರ (36) ಎಂಬುವವರನ್ನು ಬಂಧಿಸಿದ್ದಾರೆ.
‘ಬ್ಯಾಡಗಿ ತಾಲ್ಲೂಕಿನ ಕನವಳ್ಳಿಯ ಲಲಿತಾ ಅವರನ್ನು ಡಿ. 7ರಂದು ಬೆಳಿಗ್ಗೆ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಮಗ ಗಣೇಶ ದೂರು ನೀಡಿದ್ದರು. ಅದರ ತನಿಖೆ ಕೈಗೊಂಡು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಎಸ್‌ಪಿ ಯಶೋಧಾ ವಂಟಗೋಡಿ ತಿಳಿಸಿದರು.
‘ಆರೋಪಿ ಚಂದ್ರಪ್ಪ, ಹಾವೇರಿ ಜಿಲ್ಲೆ ಕಳ್ಳಿಹಾಳ ನಿವಾಸಿ. ಹೊಟೇಲ್‌ನಲ್ಲಿ ಸಹಾಯಕ ಕೆಲಸ ಮಾಡುತ್ತಿದ್ದ. ಕೆಲಸದ ಸ್ಥಳದಲ್ಲಿಯೇ ಆತನಿಗೆ ಲಲಿತಾ ಪರಿಚಯವಾಗಿತ್ತು’ ಎಂದರು.
‘ಲಲಿತಾ ಅವರ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ, ಅವರು ಊರು ಬಿಟ್ಟು ರಾಣೆಬೆನ್ನೂರಿಗೆ ಬಂದು ಹೋಟೆಲ್ ಹಾಗೂ ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅವರಿಗೆ ಪರಿಚಯವಾಗಿದ್ದ ಆರೋಪಿ ಚಂದ್ರಪ್ಪ, ಸಲುಗೆ ಬೆಳೆಸಿದ್ದ. ಆಗಾಗ ಮನೆಗೂ ಹೋಗಿ ಬರುತ್ತಿದ್ದ. ಲಲಿತಾ ಅವರ ಶೀಲ ಶಂಕಿಸಿದ್ದ ಚಂದ್ರಪ್ಪ, ಅದೇ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.
ಮೊಬೈಲ್ ಮಾತಿಗೆ ಜಗಳ: ‘ಲಲಿತಾ ಅವರು ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದರು. ಆರೋಪಿ ಚಂದ್ರಪ್ಪ ಸಹ ಆಗಾಗ ಕರೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ, ‘ಮೊಬೈಲ್ ಬಳಕೆದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ’ ಎಂದು ಸಂಭಾಷಣೆ ಬರುತ್ತಿತ್ತು. ಇದರಿಂದ ಸಿಟ್ಟಾದ ಚಂದ್ರಪ್ಪ, ಲಲಿತಾ ಮೇಲೆ ಹರಿಹಾಯ್ದಿದ್ದ’ ಎಂದು ಪೊಲೀಸರು ತಿಳಿಸಿದರು.
‘ಡಿ. 7ರಂದು ಬೆಳಿಗ್ಗೆಯೂ ಲಲಿತಾ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಅದನ್ನು ಪ್ರಶ್ನಿಸಿದ್ದ ಚಂದ್ರಪ್ಪ, ‘ನೀನು ಯಾರ ಜೊತೆ ಪದೇ ಪದೇ ಮಾತನಾಡುತ್ತಿದ್ದಿಯಾ. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದಿಯಾ’ ಎಂದಿದ್ದ. ಅದೇ ವಿಚಾರವಾಗಿ ಜಗಳ ನಡೆದಿತ್ತು. ಕೋಪಗೊಂಡ ಚಂದ್ರಪ್ಪ, ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.