ಬ್ಯಾಡಗಿ: ‘ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗುತ್ತದೆ’ ಎಂದು ತಿಳಿದಿದ್ದ ಗ್ರಾಮಸ್ಥರ ಕನಸಿಗೆ ರಾಜ್ಯ ಸರ್ಕಾರ ದೊಡ್ಡ ಹೊಡೆತ ನೀಡಿದೆ.
‘ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವಕ್ಕೆ ಸದ್ಯಕ್ಕೆ ಅನುದಾನವಿಲ್ಲ. ಮುಂದಿನ ವರ್ಷಗಳಲ್ಲಿ ಅನುದಾನ ಲಭ್ಯತೆಗೆ ಅನುಗುಣವಾಗಿ ಪರಿಶೀಲಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿಧಾನಸಭೆ ಅಧಿವೇಶನದಲ್ಲಿ ಉತ್ತರ ನೀಡಿದ್ದು, ಇದು ಸ್ಥಳೀಯರಲ್ಲಿ ನಿರಾಶೆ ಮೂಡಿಸಿದೆ.
ಮೋಟೆಬೆನ್ನೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಿಸಬೇಕೆಂಬ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಪ್ರಯತ್ನವೂ ಸದ್ಯಕ್ಕೆ ವಿಫಲವಾಗಿದೆ. ಕೇಂದ್ರ ಮಂಜೂರು ಆಗದಿದ್ದರಿಂದ ಆಕ್ರೋಶ ಹೊರಹಾಕುತ್ತಿರುವ ಗ್ರಾಮಸ್ಥರು, ಸರ್ವಪಕ್ಷಗಳ ಜೊತೆಗೂಡಿ ಹೋರಾಟ ನಡೆಸಲು ಸಿದ್ಧತೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮೋಟೆಬೆನ್ನೂರು ಗ್ರಾಮದಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೆದ್ದಾರಿಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಚಿಕಿತ್ಸೆ ದೊರೆಯುವುದು ವಿಳಂಬವಾಗುತ್ತಿರುವುದರಿಂದ ಹಲವು ಗಾಯಾಳುಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಪರಿಹಾರವಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸುವಂತೆ ಸ್ಥಳೀಯರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ.
ಗ್ರಾಮಸ್ಥರ ಒತ್ತಾಯಕ್ಕೆ ಮಣಿದಿದ್ದ ಈ ಹಿಂದಿನ ಜನಪ್ರಿನಿಧಿಗಳು ಹಾಗೂ ಅಧಿಕಾರಿಗಳು, ಸ್ಥಳೀಯ ದಾನಿಯೊಬ್ಬರಿಂದ 2 ಎಕರೆ ಜಾಗವನ್ನು ಪಡೆದುಕೊಂಡು ಆರೋಗ್ಯ ಇಲಾಖೆಗೂ ಹಸ್ತಾಂತರಿಸಿದ್ದಾರೆ. ₹ 1 ಲಕ್ಷವನ್ನೂ ಠೇವಣಿ ಇರಿಸಿದ್ದಾರೆ. ಜಾಗ ಲಭ್ಯವಿದ್ದರೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ಕ–ಪಕ್ಕದ ಊರುಗಳಿಗೆ ಅಲೆದಾಟ: ‘ಬ್ಯಾಡಗಿ ತಾಲ್ಲೂಕಿನಲ್ಲಿಯೇ ಅತೀ ದೊಡ್ಡ ಗ್ರಾಮ ಮೋಟೆಬೆನ್ನೂರು. ಇಲ್ಲಿ ಸುಮಾರು 15 ಸಾವಿರ ಜನಸಂಖ್ಯೆಯಿದೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಇಲ್ಲಿಯ ಜನರು, 18 ಕಿ.ಮೀ. ದೂರದಲ್ಲಿರುವ ಶಂಕ್ರಿಪುರ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿದ್ದಾರೆ. ಗುಂಡೇನಹಳ್ಳಿ, ಕಲ್ಲೆದೇವರು, ಕೆಂಗೊಂಡ, ಅರಬಗೊಂಡ, ಕಲ್ಲೆದೇವರು, ಅಳಲಗೇರಿ ಗ್ರಾಮಗಳ ಜನರು ಸಹ ಶಂಕ್ರಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿದ್ದಾರೆ’ ಎಂದು ಮೋಟೆಬೆನ್ನೂರು ಗ್ರಾಮಸ್ಥರು ಹೇಳಿದರು.
‘18 ಕಿ.ಮೀ. ದೂರದಲ್ಲಿರುವ ಶಂಕ್ರಿಪುರಕ್ಕೆ ಹೋಗಿ ಬರಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ. ಇದೇ ಕಾರಣಕ್ಕೆ ಮೋಟೆಬೆನ್ನೂರು ಮತ್ತು ಸುತ್ತಲಿನ ಗ್ರಾಮಗಳನ್ನು ಸೇರಿಸಿ ‘ಮೋಟೆಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರ’ ಸ್ಥಾಪಿಸುವಂತೆ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ತಿಳಿಸಿದರು.
‘ರಾಷ್ಟ್ರೀಯ ಹೆದ್ದಾರಿ ಇರುವುದರಿಂದ, ನಿತ್ಯವೂ ಅಪಘಾತಗಳು ಸಂಭವಿಸುತ್ತಿರುತ್ತವೆ. ಅಪಘಾತದಲ್ಲಿ ಗಾಯಗೊಂಡವರನ್ನು 18 ಕಿ.ಮೀ. ದೂರದ ಶಂಕ್ರಿಪುರದ ಕೇಂದ್ರಕ್ಕೆ ಕರೆದೊಯ್ಯಲು ಆಗುವುದಿಲ್ಲ. 8 ಕಿ.ಮೀ. ದೂರದಲ್ಲಿರುವ ಬ್ಯಾಡಗಿ ಅಥವಾ 13 ಕಿ.ಮೀ. ದೂರದಲ್ಲಿರುವ ಹಾವೇರಿಗೆ ಕರೆದುಕೊಂಡು ಹೋಗಬೇಕು. ಆಂಬುಲೆನ್ಸ್ ಬರುವುದು ಸಹ ತಡವಾಗುತ್ತದೆ. ಕರೆದೊಯ್ಯುವುದು ವಿಳಂಬವಾದರೆ, ಗಾಯಾಳುಗಳ ಜೀವಕ್ಕೆ ಕುತ್ತು ಬರುತ್ತಿದೆ. ಮೋಟೆಬೆನ್ನೂರಿನಲ್ಲಿಯೇ ಆರೋಗ್ಯ ಕೇಂದ್ರವಾದರೆ, ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ತ್ವರಿತವಾಗಿ ಸಿಗುತ್ತದೆ’ ಎಂದು ಹೇಳಿದರು.
ಬಸ್ ಅಪಘಾತ: ‘ಮೋಟೆಬೆನ್ನೂರು ಸಮೀಪದ ಕೋಟಿಗುಡ್ಡದ ಬಳಿ ಇತ್ತೀಚೆಗೆ ಬಸ್ ಅಪಘಾತ ಸಂಭವಿಸಿ, ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟರು. 39 ಪ್ರಯಾಣಿಕರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಸಾಕಷ್ಟು ವಿಳಂಬವಾಯಿತು. ಇಂಥ ಪರಿಸ್ಥಿತಿ ಪ್ರತಿ ಬಾರಿಯೂ ಎದುರಾಗುತ್ತಿದೆ’ ಎಂದು ಸ್ಥಳೀಯ ನಿಂಗಪ್ಪ ಅಂಗಡಿ ಅಳಲು ತೋಡಿಕೊಂಡರು.
‘ಅಪಘಾತದ ಸಂದರ್ಭದಲ್ಲಿ ತ್ವರಿತವಾಗಿ ಚಿಕಿತ್ಸೆ ಸಿಗದೇ ಜನರು ಮೃತಪಡುತ್ತಿರುವುದನ್ನು ನೋಡಿ ಸ್ಥಳೀಯರೊಬ್ಬರು ಸ್ವಯಂಪ್ರೇರಿತವಾಗಿ 2 ಎಕರೆ ಜಾಗ ದಾನ ಮಾಡಿದ್ದಾರೆ. ಜಾಗ ಲಭ್ಯವಿದ್ದರೂ ಆಸ್ಪತ್ರೆ ಮಂಜೂರು ಮಾಡದಿರುವುದು ಗ್ರಾಮಸ್ಥರಿಗೆ ಮಾರುತ್ತಿರುವ ಅನ್ಯಾಯ’ ಎಂದು ದೂರಿದರು.
ಮೋಟೆಬೆನ್ನೂರಿಗೆ ಆಸ್ಪತ್ರೆ ಬೇಕು. ಅಧಿವೇಶನದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದ್ದನ್ನು ಸ್ವಾಗತಿಸುತ್ತೇವೆ. ಅಗತ್ಯಬಿದ್ದರೆ ಅವರ ನೇತೃತ್ವದಲ್ಲೇ ಹೋರಾಟ ಮಾಡುತ್ತೇವೆ
ಮಲ್ಲಿಕಾರ್ಜುನ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಸಚಿವರು ಹೇಳಿದಿಷ್ಟು...
‘ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವ ಪ್ರಸ್ತಾವ ಸರ್ಕಾರದ ಮುಂದಿದೆಯೇ ? ಜಾಗ ಲಭ್ಯವಿದ್ದು ಯಾವ ಕಾಲಮಿತಿಯೊಳಗೆ ಆಸ್ಪತ್ರೆ ಮಂಜೂರು ಮಾಡುತ್ತೀರಾ’ ಎಂದು ಶಾಸಕ ಬಸವರಾಜ ಶಿವಣ್ಣನವರ ಅವರು ಅಧಿವೇಶನದಲ್ಲಿ ಪ್ರಶ್ನಿಸಿದ್ದರು. ಉತ್ತರಿಸಿದ್ದ ಸಚಿವ ದಿನೇಶ್ ಗುಂಡೂರಾವ್ ‘ನಿಯಮಗಳ ಪ್ರಕಾರ ಗ್ರಾಮೀಣ ಪ್ರದೇಶದ 30000 ಜನಸಂಖ್ಯೆಗೆ ಗುಡ್ಡಗಾಡು–ಗಿರಿಜನ ಪ್ರದೇಶದಲ್ಲಿ 20000 ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಅವಕಾಶವಿದೆ. ಬ್ಯಾಡಗಿ ತಾಲ್ಲೂಕಿನಲ್ಲಿ 1.09 ಲಕ್ಷ ಜನಸಂಖ್ಯೆಯಿದ್ದು 5 ಕೇಂದ್ರಕ್ಕೆ ಅವಕಾಶವಿದೆ. ಈಗಾಗಲೇ 4 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮೋಟೆಬೆನ್ನೂರು ಗ್ರಾಮದಿಂದ 8 ಕಿ.ಮೀ. (10–15 ನಿಮಿಷ) ದೂರದಲ್ಲಿ ಬ್ಯಾಡಗಿ 13 ಕಿ.ಮೀ. (15–20 ನಿಮಿಸ) ದೂರದಲ್ಲಿ ಹಾವೇರಿ 18 ಕಿ.ಮೀ. (25–30 ನಿಮಿಷ) ದೂರದಲ್ಲಿ ಶಂಕ್ರಿಪುರ 22 ಕಿ.ಮೀ. (30–40 ನಿಮಿಷ) ದೂರದಲ್ಲಿ ಚಿಕ್ಕಬಾಸೂರು ಆರೋಗ್ಯ ಕೇಂದ್ರಗಳಿವೆ. ಹೊಸ ಯೋಜನೆಗಳನ್ನು ಮುಂದೂಡುವಂತೆ ಆರ್ಥಿಕ ಇಲಾಖೆ ತಿಳಿಸಿದೆ. ಮೋಟೆಬೆನ್ನೂರು ಆರೋಗ್ಯ ಕೇಂದ್ರದ ಪ್ರಸ್ತಾವವನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.