ADVERTISEMENT

24 ಗಂಟೆಗಳಲ್ಲೇ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ಸಂಬಂಧಿಕರಿಂದಲೇ ಹತ್ಯೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 9:59 IST
Last Updated 30 ಮಾರ್ಚ್ 2022, 9:59 IST
ಗ್ರಾಮೀಣ ಠಾಣೆ ಪೊಲೀಸರು ಕಳುವಾದ ಲಾರಿಯನ್ನು ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಬುಧವಾರ ವಶಪಡಿಸಿಕೊಂಡರು 
ಗ್ರಾಮೀಣ ಠಾಣೆ ಪೊಲೀಸರು ಕಳುವಾದ ಲಾರಿಯನ್ನು ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಬುಧವಾರ ವಶಪಡಿಸಿಕೊಂಡರು    

ಹೊಸಪೇಟೆ (ವಿಜಯನಗರ): ನಗರದ ಬಳ್ಳಾರಿ ರಸ್ತೆಯ ಬಾರ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಕೊಲೆ ಪ್ರಕರಣವನ್ನು ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಒಂದೇ ದಿನದಲ್ಲಿ ಭೇದಿಸಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ಪಿ.ಕೆ. ಹಳ್ಳಿ ಮೂಲದ ಯರ್ರಿಸ್ವಾಮಿ ವೀರಭದ್ರಪ್ಪ (32), ಮಧುಸೂದನ್‌ (22) ಎಂಬುವರನ್ನು ಬುಧವಾರ ಬೆಳಿಗ್ಗೆ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಎಎಸ್‌ಐ ಕೋದಂಡಪಾಣಿ, ಕಾನ್‌ಸ್ಟೆಬಲ್‌ಗಳಾದ ಗಾಳೆಪ್ಪ, ತಿಮ್ಮಣ್ಣ ಆರೋಪಿಗಳನ್ನು ಬಂಧಿಸಿದ್ದಾರೆ.

ಆಗಿದ್ದೇನು?:

ADVERTISEMENT

‘ಬಳ್ಳಾರಿ ರಸ್ತೆಯ ಯಶ್‌ ಬಾರ್‌ನಲ್ಲಿ ಮಂಗಳವಾರ ಸಂಜೆ 5.30ರಿಂದ 6 ಗಂಟೆಯ ನಡುವೆ ಗಂಗಾಧರ್‌ ಊಟ ಮಾಡುತ್ತ ಕುಳಿತಿದ್ದರು. ಬಳಿಕ ಅವರ ಸಂಬಂಧಿಕರಾದ ಯರ್ರಿಸ್ವಾಮಿ, ಮಧುಸೂದನ್‌ ಕೂಡ ಅಲ್ಲಿಗೆ ಹೋಗಿದ್ದಾರೆ. ಮೂವರು ಊಟ ಮಾಡುತ್ತಿದ್ದಾಗ, ಗಂಗಾಧರ್‌ ಅವರು ಯರ್ರಿಸ್ವಾಮಿ ಅವರ ಎರಡನೇ ಹೆಂಡತಿ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದರಿಂದ ಅವರು ಸಿಟ್ಟಿಗೆದ್ದು, ಹೆಂಡತಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ನಂತರ ಎದೆಯ ಎಡಭಾಗದಲ್ಲಿ ಎರಡು ಸಲ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸಿಕ್ತವಾಗಿದ್ದ ಗಂಗಾಧರ್‌ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ., ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಘಟನೆ ನಡೆದ ನಂತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರು. ನಮ್ಮ ಸಿಬ್ಬಂದಿ ತನಿಖೆ ನಡೆಸಿ ಬುಧವಾರ ಬೆಳಿಗ್ಗೆ ಬಂಧಿಸಿದ್ದಾರೆ. ಯರ್ರಿಸ್ವಾಮಿ ಅವರು ‘ಫುಲ್‌ಟಾನ್‌’ ಕಂಪನಿ ಹಾಗೂ ಮಧುಸೂದನ್‌ ಖಾಸಗಿ ಸ್ಥಳದಲ್ಲಿ ರೂಮ್‌ ಬಾಯ್‌ ಆಗಿ ಕೆಲಸ ಮಾಡುತ್ತಾರೆ. ಗಂಗಾಧರ್‌ ಅವರು ಗೋವಾದಲ್ಲಿ ಕ್ಯಾಸಿನೊದಲ್ಲಿ ಕೆಲಸ ಮಾಡುತ್ತಿದ್ದರು. ಆಗಾಗ ಊರಿಗೆ ಬಂದು ಹೋಗುತ್ತಿದ್ದರು’ ಎಂದು ಮಾಹಿತಿ ಹಂಚಿಕೊಂಡರು.

ನೇಣು ಹಾಕಿಕೊಂಡು ಆತ್ಮಹತ್ಯೆ:

ತಾಲ್ಲೂಕಿನ ಧರ್ಮಸಾಗರದ ರಂಗಾರೆಡ್ಡಿ ಎಂಬುವರು ಬುಧವಾರ ನಸುಕಿನ ಜಾವ ನಗರದ ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದ ರಂಗಾರೆಡ್ಡಿ ಹಂಪಾರೆಡ್ಡಿ (46) ತನ್ನ ಸಾವಿಗೆ ತಾನೇ ಕಾರಣವೆಂದು ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಎಸ್ಪಿ ಡಾ. ಅರುಣ್‌ ಕೆ. ತಿಳಿಸಿದ್ದಾರೆ. ಮೃತರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.