ಹಾವೇರಿ: ಹುಕ್ಕೇರಿ ಮಠದ ‘ನಮ್ಮೂರ ಜಾತ್ರೆ’ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಫಲ-ಪುಷ್ಪ ಪ್ರದರ್ಶನವನ್ನು ಜ. 18ರಿಂದ 20ರವರೆಗೆ ಮೂರು ದಿನ ಹಾವೇರಿ ನಗರದ ಹುಕ್ಕೇರಿಮಠ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಹಾವೇರಿ ತೋಟಗಾರಿಕೆ ಇಲಾಖೆಯ ಕೇಂದ್ರ ಕಚೇರಿ ಸಹಾಯಕ ರಂಗಪ್ಪ ಸಿ.ಎನ್. ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಉದ್ಘಾಟನಾ ಸಮಾರಂಭ ಜ.18ರಂದು ಸಂಜೆ 6ಕ್ಕೆ ನಡೆಯಲಿದ್ದು, ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟನೆ ನೆರವೇರಿಸುವರು. ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಜಾತ್ರೆ ಅಂಗವಾಗಿ ಬರುವ ಭಕ್ತರಿಗೆ, ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ 3 ದಿನಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದೇವೆ. ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರವೇಶಾವಕಾಶ ಇರುತ್ತದೆ. ತೋಟಗಾರಿಕಾ ಬೆಳೆಗಳ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮತ್ತು ಮಾಹಿತಿ ನೀಡಲು ಈ ಪ್ರದರ್ಶನ ಸಹಕಾರಿಯಾಗಲಿದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬರೆಗಾರ, ಮಠದ ಪದಾಧಿಕಾರಿಗಳಾದ ಎಸ್.ಎಸ್. ಮುಷ್ಟಿ, ಪಿ.ಡಿ. ಶಿರೂರ, ಆರ್.ಎಸ್. ಮಾಗನೂರ, ಆನಂದ ಅಟವಾಳಗಿ, ಸುಭಾಷ್ ಹುರುಳಿಕುಪ್ಪಿ, ಜಗದೀಶ ತುಪ್ಪದ ಇದ್ದರು.
Cut-off box -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.