
ಬ್ಯಾಡಗಿ: ‘ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ವಿಸ್ತರಣಾ ತಂತ್ರಗಳ ಮೂಲಕ ನಂದಿನಿ ಉತ್ಪನ್ನಗಳು ತಮ್ಮ ಪ್ರಾಬಲ್ಯವನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಲಿಷ್ಠಗೊಳಿಸಿಕೊಂಡಿದೆ’ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ಪಟ್ಟಣದ ಗುಮ್ಮನಹಳ್ಳಿ ರಸ್ತೆಯಲ್ಲಿ ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಆರಂಭಿಸಿರುವ ನಂದಿನಿ ಪಾರ್ಲರ್ ನೂತನ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿ, 2026ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
‘ಹಾಲು, ಮೊಸರು, ತುಪ್ಪ, ಬೆಣ್ಣೆ, ಪನ್ನೀರ್, ಐಸ್‌ಕ್ರೀಮ್ ಮುಂತಾದ ವ್ಯಾಪಕ ಶ್ರೇಣಿಯ ಹಾಲು ಉತ್ಪನ್ನಗಳನ್ನು ನೀಡುವುದರ ಜೊತೆಗೆ ಲಕ್ಷಾಂತರ ಹಾಲು ಉತ್ಪಾದಕ ರೈತರಿಗೆ ಆರ್ಥಿಕ ಬೆಂಬಲ ನೀಡುತ್ತಿದೆ’ ಎಂದರು.
ಹಾವೇಮುಲ್ ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ‘ನಂದಿನಿ ಬ್ರ್ಯಾಂಡ್ ಗೆ ಮಾರುಕಟ್ಟೆಯಲ್ಲಿ ಉತ್ತಮ ಹೆಸರಿದ್ದು,130ಕ್ಕೂ ಹೆಚ್ಚು ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಒಂದು ಲೀಟರ್ ನಂದಿನಿ ಹಾಲು ಮಾರಾಟವಾದರೂ ಅದು ರಾಜ್ಯದ ರೈತರಿಗೆ ಪರೋಕ್ಷವಾಗಿ ನೆರವು ನೀಡಿದಂತಾಗುತ್ತದೆ. ಅಲ್ಲದೆ ಈ ವಲಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ಹಲವಾರು ಜನರು ಮಳಿಗೆ ಆರಂಭಿಸಲು ಮುಂದೆ ಬರುತ್ತಿದ್ದಾರೆ’ ಎಂದರು.
ಹಾವೇಮುಲ್ ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ನಿರ್ದೇಶಕ ಬಸವೇಶಗೌಡ ಪಾಟೀಲ, ಮುಖಂಡರಾದ ಬಸವರಾಜ ಬನ್ನಿಹಟ್ಟಿ,ರಮೇಶ ಮೋಟೆಬೆನ್ನೂರ, ಯಲ್ಲಪ್ಪ ಗಡ್ಡದವರ, ಮಾರುಕಟ್ಟೆ ಅಧಿಕಾರಿ ಪ್ರಶಾಂತ ದೊಡ್ಡಮನಿ ಹಾಗೂ ಒಕ್ಕೂಟದ ಸಿಬ್ಬಂದಿ ಮತ್ತು ಮಾರುಕಟ್ಟೆಯ ವಿತರಕರು, ಗ್ರಾಹಕರು ಉಪಸ್ಥಿತರಿದ್ದರು.
ಶೇ 10ರಷ್ಟು ಜನರು ಹೈನುಗಾರಿಕೆಯತ್ತ ಒಲವು ತೋರಿದ್ದಾರೆ. ಈ ಮೂಲಕ ಹಾಲಿನ ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ-ಪ್ರಕಾಶ ಬನ್ನಿಹಟ್ಟಿ ಹಾವೇಮುಲ್ ಒಕ್ಕೂಟದ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.