ADVERTISEMENT

ಹಾವೇರಿ: ಪೊಲೀಸ್‌ ಕಾನ್‌ಸ್ಟೆಬಲ್‌, ಗೃಹಿಣಿಗೆ ಸೋಂಕು

ಜಿಲ್ಲೆಯಲ್ಲಿ 55ಕ್ಕೇರಿದ ಕೋವಿಡ್ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 17:36 IST
Last Updated 26 ಜೂನ್ 2020, 17:36 IST

ಹಾವೇರಿ: ಜಿಲ್ಲೆಯಲ್ಲಿ ಇಬ್ಬರಿಗೆ ಶುಕ್ರವಾರಕೋವಿಡ್ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಹೆಡ್ ಕ್ವಾಟರ್‌ನಲ್ಲಿ ಪೊಲೀಸ್ ಕಾನ್‍ಸ್ಟೆಬಲ್‌ ಆಗಿ ಕಾರ್ಯನಿವಹಿಸುತ್ತಿರುವ ಸವಣೂರ ತಾಲ್ಲೂಕಿನ ಶಿರಬಡಗಿಯ 27 ವರ್ಷದ ಪುರುಷ ಹಾಗೂ ಶಿಗ್ಗಾವಿ ಪಟ್ಟಣದ ಮೆಹಬೂಬ ನಗರದ 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 55 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 25 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 30 ಪ್ರಕರಣಗಳು ಸಕ್ರಿಯವಾಗಿವೆ. ಈ ಪೈಕಿ ಒಬ್ಬ ಸೋಂಕಿತರು ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರವಾಸ ಹಿನ್ನೆಲೆ:ಇಂದಿನ ಸೋಂಕಿತರ ಪೈಕಿ 40 ವರ್ಷ ಗೃಹಿಣಿ (ಪಿ-10598 ) ತನ್ನ ಗಂಡ ಮಕ್ಕಳೊಂದಿಗೆ ಶಿಗ್ಗಾವಿಯ ಮೆಹಬೂಬ ನಗರದ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಕಿಡ್ನಿಯಲ್ಲಿ ಹರಳು ಸಮಸ್ಯೆ ಕಾರಣ ಜೂನ್ 18ರಂದು ಹುಬ್ಬಳ್ಳಿಯ ಬಿಜಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ದಾಖಲಾದ ಆಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸುವ ಸಿದ್ಧತೆಗಾಗಿ ಕೋವಿಡ್ -19 ಪರೀಕ್ಷೆಗೆ ಒಳಪಡುವುದು ಅಗತ್ಯವಾಗಿರುವುದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಿರುತ್ತಾರೆ. ನಂತರ ಪರೀಕ್ಷಾ ವರದಿ ಬರುವವರೆಗೂ ಆಸ್ಪತ್ರೆಯಿಂದ ಜೂನ್ 23ರಂದು ಬಿಡುಗಡೆ ಮಾಡಿರುತ್ತಾರೆ.

ADVERTISEMENT

ಬೆಂಗಳೂರಿನಲ್ಲಿ ವೃತ್ತಿ:ಸವಣೂರು ತಾಲ್ಲೂಕು ಶಿರಬಡಗಿಯ 27 ವರ್ಷದ (ಪಿ-10599 ) ಸೋಂಕಿತ ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಹೆಡ್ ಕ್ವಾಟರ್‍ನಲ್ಲಿ ಪೊಲೀಸ್ ಕಾನ್‍ಸ್ಟೆಬಲ್‌ ಆಗಿ ಕಾರ್ಯನಿವಹಿಸುತ್ತಿದ್ದು, ಜೂನ್ 22ರಂದು ಗಂಟಲುದ್ರವ ಪರೀಕ್ಷೆಗೆ ಒಳಗಾಗಿರುತ್ತಾರೆ. ಈ ಸಮಯದಲ್ಲಿ ಶಿರಬಡಗಿಯಲ್ಲಿ ತನ್ನ ತಾಯಿ ಮೃತಪಟ್ಟ ಕಾರಣ ಅದೇ ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಸಾರಿಗೆ ಬಸ್ ಮೂಲಕ ಹೊರಟು ಹಾವೇರಿಗೆ ಬೆಳಿಗ್ಗೆ 11 ಗಂಟೆಗೆ ಬಂದಿರುತ್ತಾರೆ.

ಹಾವೇರಿಯಿಂದ ಸವಣೂರಿಗೆ ಸಾರಿಗೆಬಸ್ ಮೂಲಕ ಪ್ರಯಾಣಿಸಿ ಸವಣೂರ ಬಸ್ ನಿಲ್ದಾಣದಿಂದ ತನ್ನ ಊರಿನವರ ಬೈಕ್‍ನಲ್ಲಿ ಶಿರಬಡಗಿ ಗ್ರಾಮಕ್ಕೆ ತಲುಪಿ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅದೇ ಗ್ರಾಮದ ತನ್ನ ಮನೆಯಲ್ಲಿ ಉಳಿದಿರುತ್ತಾರೆ.

ಜೂನ್ 26ರಂದು ಈ ಕಾನ್‍ಸ್ಟೆಬಲ್‌ಗೆ ಬೆಂಗಳೂರು ಲ್ಯಾಬ್‍ನಿಂದ ದೂರವಾಣಿ ಕರೆಮಾಡಿ ಕೋವಿಡ್ ಪಾಸಿಟಿವ್ ಇರುವುದಾಗಿ ತಿಳಿಸಿ ಮುಂದಿನ ಚಿಕಿತ್ಸೆಗಾಗಿ ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚನೆ ನೀಡಿದ್ದಾರೆ. ಇವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಕಂಟೈನ್‌ಮೆಂಟ್‌ ಜೋನ್‌:ಸೋಂಕಿತರ ನಿವಾಸವಿರುವ 100 ಮೀಟರ್ ಪ್ರದೇಶವನ್ನು ‘ಕಂಟೈನ್‍ಮೆಂಟ್ ಜೋನ್’ ಎಂದು ಘೋಷಿಸಲಾಗಿದೆ ಹಾಗೂ ಶಿಗ್ಗಾವಿ ಮೆಹಬೂಬ ನಗರದ 200 ಮೀ. ಪ್ರದೇಶವನ್ನು ಹಾಗೂ ಶಿರಬಡಗಿ ಗ್ರಾಮವನ್ನು ಸಂಪೂರ್ಣವಾಗಿ ‘ಬಫರ್ ಜೋನ್’ ಆಗಿ ಘೋಷಿಸಲಾಗಿದೆ. ಇನ್ಸಿಡೆಂಟ್ ಕಮಾಂಡರ್ ಆಗಿ ಸವಣೂರ ಹಾಗೂ ಶಿಗ್ಗಾವಿ ತಹಶೀಲ್ದಾರ್‌ ಅವರನ್ನು ಸಂಬಂಧಿಸಿದ ಪ್ರದೇಶಕ್ಕೆ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.