ಹಾವೇರಿ: ‘ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಅಸಭ್ಯ ಸಂದೇಶ ಕಳುಹಿಸಿ ಕರ್ತವ್ಯ ಲೋಪ ಎಸಗಿದ್ದಾರೆ’ ಎಂಬ ಆರೋಪದಡಿ ಹಿರೇಕೆರೂರು ಸರ್ಕಲ್ ಇನ್‌ಸ್ಪೆಕ್ಟರ್ ಬಸವರಾಜ್ ಪಿ.ಎಸ್. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ತನಿಖೆ ನಡೆಸಿದ್ದ ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಅವರು ನೀಡಿದ್ದ ವರದಿ ಆಧರಿಸಿ ದಾವಣಗೆರೆ ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರು ಇನ್‌ಸ್ಪೆಕ್ಟರ್ ಬಸವರಾಜ್ ಅವರನ್ನು ಅಮಾನತುಗೊಳಿಸಿ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಇಲಾಖೆ ವಿಚಾರಣೆಗೂ ಸೂಚಿಸಿದ್ದಾರೆ.
‘ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಸಂಬಂಧಪಟ್ಟಂತೆ ಅಸಭ್ಯ ಸಂದೇಶ ಕಳುಹಿಸಿದ್ದರೆಂಬ ಆರೋಪ ಬಂದಿತ್ತು. ಪ್ರಾಥಮಿಕ ತನಿಖೆ ವರದಿ ಪಡೆದು ಇನ್‌ಸ್ಪೆಕ್ಟರ್ ಬಸವರಾಜ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಐಜಿಪಿ ರವಿಕಾಂತೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಮಾನತು ಆದೇಶ ಈಗಾಗಲೇ ಜಾರಿಗೆ ಬಂದಿದೆ. ಇನ್‌ಸ್ಪೆಕ್ಟರ್ ಮೇಲಿನ ಆರೋಪದ ಬಗ್ಗೆ ಇಲಾಖೆ ವಿಚಾರಣೆಯೂ ನಡೆಯಲಿದೆ’ ಎಂದರು.
ಇನ್‌ಸ್ಪೆಕ್ಟರ್ ಬಸವರಾಜ್ ಅವರು ಅಮಾನತಾಗಿದ್ದರಿಂದ ತೆರವಾಗಿರುವ ಹಿರೇಕೆರೂರು ವೃತ್ತ ನಿರೀಕ್ಷಕರ ನಿರ್ವಹಣೆಯ ಪ್ರಭಾರಿ ಜವಾಬ್ದಾರಿಯನ್ನು ಕುಮಾರಪಟ್ಟಣ ವೃತ್ತ ನಿರೀಕ್ಷಕರಿಗೆ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.