ADVERTISEMENT

ಪರಿಶಿಷ್ಟ ಕಾಲೊನಿಗೆ ಮೂಲಸೌಕರ್ಯ ಕಲ್ಪಿಸಿ: ಸಂಜಯ ಶೆಟ್ಟೆಣ್ಣವರ

ಸ್ಮಶಾನ ಜಾಗದ ಸಮಸ್ಯೆ ಬಗೆಹರಿಸಿ: ಅಂತರ್ಜಾತಿ ವಿವಾಹ ಬಾಕಿ ಪ್ರೋತ್ಸಾಹಧನ ವಿತರಿಸಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 14:18 IST
Last Updated 3 ಜುಲೈ 2021, 14:18 IST
ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಜಿಲ್ಲಾ ಜಾಗೃತಿ ಸಮಿತಿ ಸಭೆ ನಡೆಸಿದರು. ಸಿಇಒ ಮೊಹಮ್ಮದ್‌ ರೋಶನ್‌, ಎಸ್ಪಿ ಹನುಮಂತರಾಯ ಇದ್ದಾರೆ  
ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಜಿಲ್ಲಾ ಜಾಗೃತಿ ಸಮಿತಿ ಸಭೆ ನಡೆಸಿದರು. ಸಿಇಒ ಮೊಹಮ್ಮದ್‌ ರೋಶನ್‌, ಎಸ್ಪಿ ಹನುಮಂತರಾಯ ಇದ್ದಾರೆ     

ಹಾವೇರಿ: ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ಪರಿಶಿಷ್ಟ ಜನಾಂಗದವರಿಗೆ ಅಗತ್ಯ ಜಾಗ ಒದಗಿಸಲು ಕ್ರಮವಹಿಸುವಂತೆ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಿಸಲು ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ನಡೆಸಿದರು. ಕೆಲ ಗ್ರಾಮಗಳಲ್ಲಿ ಸ್ಮಶಾನಕ್ಕೆ ದಾರಿ ಇಲ್ಲದಿರುವ ಕುರಿತು ಸಮಸ್ಯೆಗಳು ಕೇಳಿಬಂದಿವೆ. ಈ ಕುರಿತು ಕ್ರಮವಹಿಸುವಂತೆ ಸಲಹೆ ನೀಡಿದರು.

ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಸರ್ಕಾರದಿಂದ ಪರಿಶಿಷ್ಟರಿಗೆ ಜಮೀನು ಹಂಚಿಕೆಯಾಗಿದ್ದು, ಗುಂಪು ಜಮೀನು ಹೊಂದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜನಾಂಗದವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.

ADVERTISEMENT

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಕಾಲೊನಿಗಳಿಗೆ ನಳದ ನೀರಿನ ಸಂಪರ್ಕ, ರಸ್ತೆ ಸಂಪರ್ಕ, ಮೂಲ ಸೌಕರ್ಯಗಳು ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.

ವಸತಿ ಮತ್ತು ನಿವೇಶನವಿಲ್ಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಗುರುತಿಸಿ, ಸರ್ಕಾರದ ವಿವಿಧ ವಸತಿ ಯೋಜನೆಯಡಿ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದರು.

ಅಕ್ಕೂರ ಗ್ರಾಮದಲ್ಲಿ ವಿವಿಧ ಸರ್ಕಾರಿ ಕಟ್ಟಡಕ್ಕೆ ಮಂಜೂರಾದ ಭೂಮಿಯನ್ನು ಹೊರತುಪಡಿಸಿ, ಉಳಿದಿರುವ ಭೂಮಿ ವಿವರವನ್ನು ತಕ್ಷಣ ಸಲ್ಲಿಸುವಂತೆ ಸೂಚನೆ ನೀಡಿದರು.

ಅಂತರ್ಜಾತಿ ವಿವಾಹ ಫಲಾನುಭವಿಗಳಿಗೆ ಬಾಕಿ ಪ್ರೋತ್ಸಾಹಧನ ಪಾವತಿಸುವಂತೆ ಸೂಚನೆ ನೀಡಿದರು. ಕೋವಿಡ್ ಸೋಂಕಿನಿಂದ ಮುಕ್ತವಾದ ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಹೆಚ್ಚಾಗಿರುವ ಗ್ರಾಮಗಳಲ್ಲಿ ಸರ್ಕಾರದ ಕಲ್ಯಾಣ ಯೋಜನೆಗಳು, ದೌರ್ಜನ್ಯ ಕಾಯ್ದೆ ಕುರಿತಂತೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ದೌರ್ಜನ್ಯ ಪ್ರಕರಣಗಳ ಮಾಹಿತಿ, ವಿಚಾರಣೆಯಲ್ಲಿ ಪ್ರಕರಣಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು ಹಾಗೂ ಪರಿಹಾರ ಧನವನ್ನು ನಿಯಮಾನುಸಾರ ಪಾವತಿಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗುರುತಿಸಲಾದ ಅರ್ಹ ಮ್ಯಾನುಯಲ್ ಸ್ಕ್ವಾವೆಂಜರ್‌ಗಳಿಗೆ ಹಾಗೂ ಅವಲಂಬಿತರಿಗೆ ಪುನರ್ವಸತಿ ಕಲ್ಪಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಗುರುತಿನ ಚೀಟಿ, ಬೆಳಗಿನ ಉಪಾಹಾರ ಹಾಗೂ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ, ಅನ್ನಪೂರ್ಣ ಮುದಕಮ್ಮನವರ, ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹುಬ್ಬಳ್ಳಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ರಾಜೀವ ಕೂಲೇರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.